ಸೋಮವಾರ, ನವೆಂಬರ್ 18, 2019
28 °C
ಬಹುವರ್ಷಗಳ ಬೇಡಿಕೆ ಕೊನೆಗೂ ನನಸಾಗುವ ಕಾಲ; ₹430 ಕೋಟಿ ಯೋಜನೆ

ಹೊಸಪೇಟೆ: ಕಾಲುವೆ ಆಧುನೀಕರಣಕ್ಕೆ ಮುಹೂರ್ತ ನಿಗದಿ

Published:
Updated:
Prajavani

ಹೊಸಪೇಟೆ: ವಿಜಯನಗರ ಕಾಲುವೆಗಳ ಆಧುನೀಕರಣಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಈ ಭಾಗದ ರೈತರ ಬಹುವರ್ಷಗಳ ಬೇಡಿಕೆ ಈಡೇರುವ ಸಂದರ್ಭ ಬಂದೊದಗಿದೆ.

ಬರುವ ಡಿಸೆಂಬರ್‌ನಲ್ಲಿ ಆಧುನೀಕರಣ ಆರಂಭವಾಗಲಿದ್ದು, ಜನವರಿ ಅಂತ್ಯದ ವರೆಗೆ ಸತತವಾಗಿ ಕಾಮಗಾರಿ ನಡೆಯಲಿದೆ. ರೈತರ ಬೆಳೆಗಳಿಗೆ ತೊಂದರೆಯಾಗದ ರೀತಿಯಲ್ಲಿ ಹಂತ ಹಂತವಾಗಿ ಕಾಮಗಾರಿ ಮುಗಿಸಲು ಯೋಜನೆ ರೂಪಿಸಲಾಗಿದೆ.

ಈಗಾಗಲೇ ಆರ್‌.ಎನ್‌. ಶೆಟ್ಟಿ ಕಂಪನಿಗೆ ಕೆಲಸ ವಹಿಸಲಾಗಿದೆ. ಉಪಕಾಲುವೆಗಳ ಆಧುನೀಕರಣಕ್ಕೆ ಏಷ್ಯನ್‌ ಅಭಿವೃದ್ಧಿ ಬ್ಯಾಂಕಿನಿಂದ ₹430 ಕೋಟಿ ಬಿಡುಗಡೆಯಾಗಿದೆ. 2018ರ ಮಾರ್ಚ್‌ನಲ್ಲೇ ಕಾಮಗಾರಿ ಆರಂಭವಾಗಬೇಕಿತ್ತು.

‘ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾಮಗಾರಿ ನಡೆಸಲಾಗುತ್ತಿದೆ. ಬೆಳೆಗಳಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ಮಾಡಬೇಕು’ ಎಂದು ರೈತರು ಆಗ್ರಹಿಸಿದ್ದರು. ಮಳೆಗಾಲದ ಆರಂಭದಲ್ಲೇ ಜಲಾಶಯ ತುಂಬಿ, ಕಾಲುವೆಗಳಿಗೆ ನೀರು ಹರಿಸಿದ್ದರಿಂದ ಕೆಲಸ ಕೈಗೆತ್ತಿಕೊಳ್ಳಲು ಆಗಿರಲಿಲ್ಲ.

ಸೋಮವಾರ ನಗರ ಹೊರವಲಯದ ಮುನಿರಾಬಾದ್‌ನ ತುಂಗಭದ್ರಾ ನೀರಾವರಿ ನಿಗಮದ ಕಚೇರಿಯಲ್ಲಿ ರೈತರೊಂದಿಗೆ ಸಭೆ ನಡೆಸಿದ್ದು, ‘ಸತತ ಆರು ತಿಂಗಳ ಬದಲು, ಎರಡು ತಿಂಗಳಿಗೊಮ್ಮೆ ಹಂತ ಹಂತವಾಗಿ ಕೆಲಸ ಪೂರ್ಣಗೊಳಿಸಲು ರೈತರು ಸಲಹೆ ನೀಡಿದ್ದಾರೆ. ಅವರ ಇಚ್ಛೆ ಪ್ರಕಾರ ಕೆಲಸ ನಡೆಯಲಿದೆ’ ಎಂದು ನಿಗಮದ ಮುಖ್ಯ ಎಂಜಿನಿಯರ್‌ ಮಂಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಜಯನಗರ ಉಪಕಾಲುವೆಗಳ ಆಧುನೀಕರಣ ನನೆಗುದಿಗೆ ಬಿದ್ದಿದ್ದರಿಂದ ಅನೇಕ ಕಡೆ ಅವುಗಳು ಅಸ್ತಿತ್ವ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದವು. ಕೆಲವೆಡೆ ಪಾಚಿ, ಮುಳ್ಳು ಕಂಟಿ ದಟ್ಟವಾಗಿ ಬೆಳೆದಿದೆ. ಇದರಿಂದಾಗಿ ಕಾಲುವೆ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿರಲಿಲ್ಲ. ಈ ಕುರಿತು ರೈತರು ಅನೇಕ ಸಲ ಹೋರಾಟ ನಡೆಸಿದ್ದರು. ಹಣ ಮಂಜೂರಾದರೂ ವಿವಿಧ ಕಾರಣಗಳಿಂದ ಕೆಲಸ ಮುಂದೂಡುತ್ತಲೇ ಹೋಗಿತ್ತು. ಈಗ ಕಾಲ ಕೂಡಿ ಬಂದಿರುವುದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

‘ಮೊದಲಿನಿಂದಲೂ ಈ ಭಾಗದ ರೈತರು ಕಾಲುವೆಗಳನ್ನು ಆಧುನೀಕರಣಗೊಳಿಸಬೇಕೆಂದು ಒತ್ತಾಯಿಸುತ್ತ ಬಂದಿದ್ದಾರೆ. ಆದರೆ, ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕೆಲಸ ನನೆಗುದಿಗೆ ಬಿದ್ದಿತ್ತು. ರೈತರು ಸತತವಾಗಿ ಒತ್ತಡ ಹಾಕುತ್ತ ಬಂದಿದ್ದರ ಫಲವಾಗಿ ಡಿಸೆಂಬರ್‌ನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ನಿಗಮ ಒಪ್ಪಿಗೆ ಸೂಚಿಸಿರುವುದಕ್ಕೆ ಖುಷಿಯಾಗಿದೆ’ ಎಂದು ರೈತ ಬಸವರಾಜ ತಿಳಿಸಿದರು.

‘ಒಂದೇ ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಂಡರೆ ರೈತರು ಬೆಳೆ ಬೆಳೆಯಲು ಆಗುವುದಿಲ್ಲ. ಹಾಗಾಗಿ ಹಂತ ಹಂತವಾಗಿ ಕೆಲಸ ಮಾಡಬೇಕು ಎಂದು ಕೋರಿದ್ದೆವು. ಅದಕ್ಕೆ ಸ್ಪಂದಿಸಿದ್ದಾರೆ. ಒಂದೆಡೆ ರೈತರು ಬೆಳೆಯೂ ಬೆಳೆಯಬಹುದು. ಇನ್ನೊಂದೆಡೆ ಕಾಮಗಾರಿಯೂ ನಡೆಯುತ್ತದೆ’ ಎಂದರು.

*
ರೈತರ ಹಿತ ಎಲ್ಲಕ್ಕಿಂತ ಮುಖ್ಯವಾದುದು. ಅವರ ಬೆಳೆಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಲಾಗುವುದು.
–ಮಂಜಪ್ಪ, ಮುಖ್ಯ ಎಂಜಿನಿಯರ್‌, ತುಂಗಭದ್ರಾ ನೀರಾವರಿ ನಿಗಮ

ಪ್ರತಿಕ್ರಿಯಿಸಿ (+)