ಸೋಮವಾರ, ಜನವರಿ 27, 2020
23 °C
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಮುಷ್ಕರ

ಜ. 8ರಂದು ಸಂಪೂರ್ಣ ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಕೇಂದ್ರ ಸರ್ಕಾರದ ಜನವಿರೋಧಿ, ಕಾರ್ಮಿಕ ನೀತಿ ವಿರೋಧಿಸಿ ಜ. 8ರಂದು ಕರೆ ಕೊಟ್ಟಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಬೆಂಬಲಿಸಿ, ಅದರಲ್ಲಿ ಪಾಲ್ಗೊಳ್ಳಲಿದೆ’ ಎಂದು ಸಮಿತಿ ಮುಖಂಡ ಆರ್‌. ಭಾಸ್ಕರ್‌ ರೆಡ್ಡಿ ತಿಳಿಸಿದರು.

‘ಆ ದಿನ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶಾಲಾ– ಕಾಲೇಜು, ಹೋಟೆಲ್‌, ದಿನಸಿ ಅಂಗಡಿ, ವಾಣಿಜ್ಯ ವಹಿವಾಟು, ಸಾರಿಗೆ ಸಂಸ್ಥೆಯ ಬಸ್ಸುಗಳು, ಆಟೊಗಳು ರಸ್ತೆಗೆ ಇಳಿಯುವುದಿಲ್ಲ. ಮುಷ್ಕರಕ್ಕೆ ಈಗಾಗಲೇ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಅಂದಿನ ಪ್ರತಿಭಟನೆಯಲ್ಲಿ ಕಾರ್ಮಿಕರು ಪಾಲ್ಗೊಳ್ಳುವರು’ ಎಂದು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ಕಾರ್ಮಿಕರ ಕಲ್ಯಾಣಕ್ಕೆ 44 ಕಾನೂನುಗಳಿವೆ. ಆದರೆ, ಕೇಂದ್ರ ಸರ್ಕಾರ ಅವುಗಳಿಗೆ ತಿದ್ದುಪಡಿ ತಂದು, ಕಾರ್ಮಿಕರ ಹಿತ ಕೊಡಲು ಮುಂದಾಗಿದೆ. ಕಾರ್ಪೊರೇಟ್‌ ಸಂಸ್ಥೆಗಳ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಮೋದಿ ಸರ್ಕಾರ ದೇಶದ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ. ಆ ಕಾನೂನುಗಳನ್ನು ಯಥಾರೀತಿ ಉಳಿಸಿಕೊಂಡು, ಅವುಗಳನ್ನು ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

‘ರೈಲ್ವೆ, ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಿರುವ ಕೇಂದ್ರ ಸರ್ಕಾರ ಈಗ, ಎಲ್‌.ಐ.ಸಿ. ಬಿ.ಎಸ್‌.ಎನ್‌.ಎಲ್‌. ಸೇರಿದಂತೆ ಇತರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಹಾಳುಗೆಡವಲು ಮುಂದಾಗಿದೆ’ ಎಂದು ಆರೋಪಿಸಿದರು.

ಮುಖಂಡ ಮರಡಿ ಜಂಬಯ್ಯ ನಾಯಕ ಮಾತನಾಡಿ, ‘ದೇಶದಲ್ಲಿ ಜೀತ ಪದ್ಧತಿ ನಿಷೇಧವಿದೆ. ಆದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೊರಗುತ್ತಿಗೆ ಹೆಸರಿನಲ್ಲಿ ಕೆಲಸ ಕೊಟ್ಟು ಹೊಸ ಜೀತಪದ್ಧತಿ ಆರಂಭಿಸಿದೆ. ದೇಶದಲ್ಲಿ 2.75 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಒಂದು ಲಕ್ಷಕ್ಕೂ ಅಧಿಕ ಜನ ಹೊರಗುತ್ತಿಗೆ ಮೇಲೆ, ಯಾವುದೇ ಭದ್ರತೆಯಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಅವರನ್ನು ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರ ಹಿತ ಕಾಪಾಡಲು ಕೇಂದ್ರ ಶ್ರಮಿಸುತ್ತಿಲ್ಲ. ಸ್ವಾಮಿನಾಥನ್‌ ಆಯೋಗದ ವರದಿ ಜಾರಿಗೆ ಮೀನಮೇಷ ಎಣಿಸುತ್ತಿದೆ. ಅಸಂಘಟಿತ ಕಾರ್ಮಿಕರು, ರೈತರು ಅತಂತ್ರರಾಗಿದ್ದಾರೆ. ಅವರ ಕಲ್ಯಾಣಕ್ಕೆ ಯಾವುದೇ ಕಾರ್ಯಕ್ರಮ ಜಾರಿಗೆ ತರುತ್ತಿಲ್ಲ’ ಎಂದರು.

ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ನಾಗರತ್ನಮ್ಮ, ಆಟೊ ಫೆಡರೇಶನ್‌ ತಾಲ್ಲೂಕು ಅಧ್ಯಕ್ಷ ಕೆ.ಎಂ. ಸಂತೋಷ್‌ ಕುಮಾರ್‌, ಕಾರ್ಮಿಕ ಸಂಘಟನೆಗಳ ಮುಖಂಡರಾದ ಡಿ. ವೆಂಕಟರಮಣ, ವೈ. ರಾಮಚಂದ್ರಬಾಬು, ಕೆ.ಎಂ. ಸ್ವಪ್ನಾ, ಎನ್‌. ಯಲ್ಲಾಲಿಂಗ, ಶಾಂತಮ್ಮ, ಅಶೋಕ್‌, ಬಾಬುಕುಮಾರ, ಹುಲುಗಪ್ಪ, ಜಂಬಯ್ಯ, ಜೆ. ಶಿವಕುಮಾರ, ಎಂ. ಗೋಪಾಲ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು