ಮಂಗಳವಾರ, ಏಪ್ರಿಲ್ 20, 2021
29 °C

ಭ್ರಷ್ಟಾಚಾರ ಇರುವುದು ನಮ್ಮ ನಡುವೆಯೇ: ವಿದ್ಯಾರ್ಥಿ ಪ್ರಶ್ನೆಗೆ ಡಿಸಿ ಉತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಮ್ಮಲಾಪುರ (ಹೊಸಪೇಟೆ ತಾಲ್ಲೂಕು): ‘ಭ್ರಷ್ಟಾಚಾರ ಎನ್ನುವುದು ಎಲ್ಲಿಯೂ ಇಲ್ಲ. ಅದು ನಮ್ಮ ನಡುವೆ, ನಮ್ಮ ಕೈಯಲ್ಲಿಯೇ ಇದೆ. ನಾನು ಲಂಚ ಕೊಡುವುದಿಲ್ಲ ಎಂದು ನಿರ್ಧಾರ ಮಾಡಿದರೆ ಭ್ರಷ್ಟಾಚಾರಕ್ಕೆ ಅವಕಾಶ ಸಿಗುವುದಿಲ್ಲ’

ಗ್ರಾಮ ವಾಸ್ತವ್ಯದ ಪ್ರಯುಕ್ತ ತಿಮ್ಮಲಾಪುರದ ಮೊರಾರ್ಜಿ ದೇಸಾಯಿ ವಸತಿ ಪಿಯು ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಡಿ.ಎಂ. ಮೇಘನಾ ಕೇಳಿದ ಪ್ರಶ್ನೆಗೆ ಜಿಲ್ಲಾಧಿಕಾರಿ ಪವನಕುಮಾರ್‌ ಮಾಲಪಾಟಿ ಮೇಲಿನಂತೆ ಉತ್ತರಿಸಿದರು.

‘ದೇಶದ ಬಗ್ಗೆ ಪ್ರೀತಿ ಇದ್ದಾಗ, ನೈತಿಕತೆ ಸರಿಯಾಗಿದ್ದಾಗ ಭ್ರಷ್ಟಾಚಾರ ಎನ್ನುವುದು ತನ್ನಿಂದ ತಾನೇ ಕಡಿಮೆಯಾಗುತ್ತದೆ. ಗ್ರಾಮಗಳ ಅಭಿವೃದ್ಧಿ ಅನ್ನುವುದು ದಿಢೀರ್ ಮಾಡುವಂತಹದ್ದಲ್ಲ. ಅದಕ್ಕೂ ಸಮಯ ಹಿಡಿಯುತ್ತದೆ. ಬದಲಾವಣೆಗೆ ಕಾಲಾವಕಾಶ ಬೇಕಾಗುತ್ತದೆ’ ಎಂದು ಹೇಳಿದರು.

‘ನಿಶ್ಚಿತ ಗುರಿ ಇಟ್ಟುಕೊಂಡು ಕೆಲಸ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ. ಜೀವನದಲ್ಲಿ ಏರುಪೇರು ಸಾಮಾನ್ಯ. ಆದರೆ, ಅದಕ್ಕೆ ಕುಗ್ಗಬಾರದು. ನಾನು ಪಿಯುಸಿಯಲ್ಲಿ ಶೇ 99.72 ಅಂಕ ಗಳಿಸಿದ್ದೆ. ಎಂಜಿನಿಯರಿಂಗ್‌ನಲ್ಲಿ ನನ್ನ ಫಲಿತಾಂಶ ಶೇ 63 ಬಂತು. ನನಗೆ ಉತ್ತಮ ನೌಕರಿ ಸಿಗಲಿಲ್ಲ. ಆದರೆ, ನಾನು ಅದಕ್ಕೆ ಕುಗ್ಗಲಿಲ್ಲ. ದೆಹಲಿಗೆ ಹೋಗಿ ಐಎಎಸ್‌ ಪರೀಕ್ಷೆಗೆ ಕಷ್ಟಪಟ್ಟು ಓದಿದೆ. ಇಡೀ ದೇಶಕ್ಕೆ 53ನೇ ರ್‍ಯಾಂಕ್‌ ಗಳಿಸಿದೆ’ ಎಂದರು.

‘ಎಪಿಜೆ ಅಬ್ದುಲ್‌ ಕಲಾಂ ಅವರು ಹೇಳಿದಂತೆ ದೊಡ್ಡ ಕನಸು ಕಾಣಬೇಕು. ನಂತರ ಅದರ ಬೆನ್ನು ಹತ್ತಿ ಕೆಲಸ ಮಾಡಬೇಕು. ಯಾವುದೇ ವೃತ್ತಿಗೆ ಹೋದರೂ ಬದ್ಧತೆಯಿಂದ ಕೆಲಸ ಮಾಡಿ ಹೆಸರು ಗಳಿಸಬೇಕು. ಏನೇ ಸಮಸ್ಯೆ ಬಂದರೂ ಮೀರಿ ಬೆಳೆಯಬೇಕು. ಏನೇ ಸಮಸ್ಯೆಗಳಿದ್ದರೂ ಗೆಳೆಯರು, ಆಪ್ತರೊಂದಿಗೆ ಹಂಚಿಕೊಂಡು ಬಗೆಹರಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಮಾತನಾಡಿ, ‘ಈಗಲೂ ನಮ್ಮ ದೇಶದಲ್ಲಿ ಬಹುತೇಕರು ಕೃಷಿ ಕುಟುಂಬಕ್ಕೆ ಸೇರಿದವರಿದ್ದಾರೆ. ಹಿಂದಿಗೆ ಹೋಲಿಸಿದರೆ ಈಗ ಸಾಕಷ್ಟು ಸವಲತ್ತುಗಳು ಸಿಕ್ಕಿವೆ. ನಾವು ಪ್ರಾಮಾಣಿಕತೆಯಿಂದ ಓದಬೇಕು. ವಿಶ್ವಾಸದಿಂದ ಓದಿದರೆ ಯಶಸ್ಸು ಸಿಕ್ಕೇ ಸಿಗುತ್ತದೆ’ ಎಂದರು.

ಸಂಸದ ವೈ.ದೇವೇಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಪ್ಪ, ತಹಶೀಲ್ದಾರ್ ಎಚ್‌. ವಿಶ್ವನಾಥ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್ ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು