ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗ್‌ ಮಗನ ಮದುವೆ ಮುಂದೂಡಿ

ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಯು. ಬಸವರಾಜ ಆಗ್ರಹ
Last Updated 29 ನವೆಂಬರ್ 2019, 10:15 IST
ಅಕ್ಷರ ಗಾತ್ರ

ಹೊಸಪೇಟೆ: ‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಮಗನ ಅದ್ದೂರಿ ಮದುವೆ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಪ್ರಯತ್ನಿಸುತ್ತಿದ್ದಾರೆ. ಚುನಾವಣಾ ಆಯೋಗ ವಿವಾಹ ಮುಂದೂಡಬೇಕು’ ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಯು. ಬಸವರಾಜ ಆಗ್ರಹಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮದುವೆಗೆ ಬರುವವರಿಗೆ ಸಿಂಗ್‌ ಎಂಟು ಗ್ರಾಂ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ಕೊಡುತ್ತಿದ್ದಾರೆ ಎಂದು ಗೊತ್ತಾಗಿದೆ. ಇದು ಚುನಾವಣಾ ಅಕ್ರಮ. ಅದನ್ನು ಆಯೋಗ ತಡೆಯಬೇಕು’ ಎಂದು ಒತ್ತಾಯಿಸಿದರು.

‘ಆನಂದ್‌ ಸಿಂಗ್‌ 11 ವರ್ಷ ಶಾಸಕರಾಗಿದ್ದರು. ಒಮ್ಮೆಯೂ ವಿಜಯನಗರ ಜಿಲ್ಲೆ ಬಗ್ಗೆ ಮಾತನಾಡಿಲ್ಲ. ಹೋರಾಟ ನಡೆಸಿಲ್ಲ. ಗಣಿ ಲೂಟಿ ತಡೆಯಲು ಶ್ರಮಿಸಿಲ್ಲ. ಬದಲಾಗಿ ಅವರೇ ಅದರಲ್ಲಿ ಶಾಮಿಲಾಗಿ, ಜೈಲಿಗೆ ಹೋಗಿ ಬಂದಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಜಿಲ್ಲೆ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಮತದಾರರು ಸಿಂಗ್‌ ಅವರನ್ನು ಐದು ವರ್ಷಕ್ಕೆ ಆಯ್ಕೆ ಮಾಡಿದ್ದರು. ಆದರೆ, ಜನರ ತೀರ್ಪು ಧಿಕ್ಕರಿಸಿ ರಾಜೀನಾಮೆ ಕೊಟ್ಟಿದ್ದಾರೆ. ಮತದಾರರನ್ನು ಉಡಾಫೆತನದಿಂದ ನೋಡುತ್ತಿರುವುದಕ್ಕೆ ಇದು ಸಾಕ್ಷಿ. ಅಂವರನ್ನು ಸೋಲಿಸಬೇಕು’ ಎಂದು ಕೋರಿದರು.

‘ರಾಜ್ಯದಲ್ಲಿ ಭೀಕರ ನೆರೆ ಬಂದು, ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ನೆರವು ಕೊಡುವುದರ ಬದಲು ರಾಜ್ಯ ಸರ್ಕಾರ ಚುನಾವಣೆಯಲ್ಲಿ ಮಗ್ನವಾಗಿದೆ. ಇಂತಹ ಸರ್ಕಾರ ಏಕಿರಬೇಕು. ವಿಜಯನಗರ ಸೇರಿ ಎಲ್ಲಾ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳಬೇಕು. ಅವರ ಹತ್ತಿರದ ಪ್ರತಿ ಸ್ಪರ್ಧಿಯನ್ನು ಜನ ಬೆಂಬಲಿಸಿ ಗೆಲ್ಲಿಸಬೇಕು. ಈ ಉಪಚುನಾವಣೆಗೆ ಪಕ್ಷ ಅಭ್ಯರ್ಥಿಗಳನ್ನು ನಿಲ್ಲಿಸಿಲ್ಲ’ ಎಂದರು.

ಜಿಲ್ಲಾ ಕಾರ್ಯದರ್ಶಿ ಆರ್‌.ಎಸ್‌. ಬಸವರಾಜ ಮಾತನಾಡಿ, ‘ಬಡವರಿಗೆ ನಿವೇಶನ ಕೊಡಬೇಕೆಂದು ಐದು ವರ್ಷಗಳಿಂದ ಪಕ್ಷ ಹೋರಾಟ ನಡೆಸುತ್ತಿದೆ. ಅದಕ್ಕೆ ಒಮ್ಮೆಯೂ ಆನಂದ್‌ ಸಿಂಗ್‌ ಸ್ಪಂದಿಸಿಲ್ಲ. ತನ್ನ ಹೊಸ ಮನೆ ಮೇಲೆ ಧೂಳು ಬೀಳುತ್ತದೆ ಎಂದು ರೈತರ ಜೀವನಾಡಿಯಾಗಿದ್ದ ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಮುಚ್ಚಿಸಿದ್ದಾರೆ’ ಎಂದು ಆರೋಪಿಸಿದರು.

‘ರಿಯಲ್‌ ಎಸ್ಟೇಟ್‌ ದಂಧೆ ಮಾಡಲು ವಿಜಯನಗರ ಜಿಲ್ಲೆ ಪರ ಸಿಂಗ್‌ ಮಾತನಾಡುತ್ತಿದ್ದಾರೆ. ಈಗಾಗಲೇ ನೂರಾರು ಎಕರೆ ಜಮೀನು ಖರೀದಿಸಿದ್ದಾರೆ. ನಗರದ ಸರ್ಕಾರಿ ಬಾಲಕಿಯರ ಕಾಲೇಜಿನ ಸ್ಥಳ ಲಪಟಾಯಿಸಲು ಅದನ್ನು ಬೇರೆಡೆ ಸ್ಥಳಾಂತರಿಸಲು ಹುನ್ನಾರ ನಡೆಸಿದ್ದಾರೆ. ಇಂತಹ ವ್ಯಕ್ತಿಗೆ ಮತ ಹಾಕುವುದು ಸೂಕ್ತವೇ’ ಎಂದು ಪ್ರಶ್ನಿಸಿದರು.

ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಂ. ಜಂಬಯ್ಯ ನಾಯಕ, ಆರ್‌. ಭಾಸ್ಕರ್‌ ರೆಡ್ಡಿ, ನಾಗರತ್ನಮ್ಮ, ರಮೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT