ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ | ಕಟೌಟ್‌ನಲ್ಲೂ ಬಿಜೆಪಿ, ಕಾಂಗ್ರೆಸ್ಸಿಗರ ಸ್ಪರ್ಧೆ

ಗಮನ ಸೆಳೆಯುತ್ತಿರುವ ಆನಂದ್‌ ಸಿಂಗ್‌, ಭರತ್‌ ರೆಡ್ಡಿ ಕಟೌಟ್‌ಗಳು
Last Updated 23 ನವೆಂಬರ್ 2020, 11:08 IST
ಅಕ್ಷರ ಗಾತ್ರ

ಹೊಸಪೇಟೆ: ಕಟೌಟ್‌ ಹಾಕುವ ವಿಷಯದಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಸ್ಪರ್ಧೆಗೆ ಇಳಿದಿದ್ದಾರೆ.

ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟದಲ್ಲಿ ವಿಜಯನಗರ ಜಿಲ್ಲೆ ರಚನೆಗೆ ಒಪ್ಪಿಗೆ ಸಿಕ್ಕ ನಂತರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ಬೆಂಬಲಿಗರು ನಗರದ ರೋಟರಿ ವೃತ್ತದಲ್ಲಿ ಸುಮಾರು ಹತ್ತು ಅಡಿ ಅಗಲ, 40 ಅಡಿ ಎತ್ತರದ ಅವರ ಬೃಹತ್‌ ಕಟೌಟ್‌ ಹಾಕಿ ಅಭಿಮಾನ ತೋರಿದ್ದರು.

ಆನಂದ್‌ ಸಿಂಗ್‌ ಅವರು ಕೈಬೀಸುತ್ತಿರುವ ಕಟೌಟ್‌ ಇದ್ದು, ಅದರ ಕೆಳಭಾಗದಲ್ಲಿ ಅವರ ಸಂಬಂಧಿಕರಾದ ಧರ್ಮೇಂದ್ರ ಸಿಂಗ್‌, ಸಂದೀಪ್‌ ಸಿಂಗ್‌ ಹಾಗೂ ಮುಖಂಡ ಜಂಬಯ್ಯ ನಾಯಕ ಅವರ ಭಾವಚಿತ್ರಗಳಿವೆ. ‘ಜೈ ವಿಜಯನಗರ, ಜೈ ಆನಂದ್‌ ಸಿಂಗ್‌, ಜೈ ಜೈ ಆನಂದ್‌ ಸಿಂಗ್‌’ ಎಂಬ ಬರಹಗಳಿವೆ.

ಈಗ ಇದೇ ಕಟೌಟ್‌ ಮಗ್ಗುಲಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ, ಕಾಂಗ್ರೆಸ್‌ ಯುವ ಮುಖಂಡ ನಾರಾ ಭರತ್‌ ರೆಡ್ಡಿ ಅವರ ಬೃಹತ್‌ ಕಟೌಟ್‌ ಅನ್ನು ಅವರ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಹಾಗೂ ‘ಟಚ್‌ ಫಾರ್‌ ಲೈಫ್‌ ಫೌಂಡೇಶನ್‌’ನವರು ಸೇರಿ ಹಾಕಿದ್ದಾರೆ.

ಈ ಕಟೌಟ್‌ ಹತ್ತು ಅಡಿ ಅಗಲ, 60 ಅಡಿ ಎತ್ತರವಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಭಾನುವಾರ ನಗರಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಈ ಕಟೌಟ್‌ ಹಾಕಲಾಗಿದೆ. ಕಟೌಟ್‌ನಲ್ಲಿ ಭರತ್‌ ರೆಡ್ಡಿ ಅವರ ಬೃಹತ್‌ ಚಿತ್ರವಿದೆ. ಮೇಲ್ಭಾಗದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಅವರ ಭಾವಚಿತ್ರಗಳಿವೆ. ಕೆಳಭಾಗದಲ್ಲಿ ಕಾಂಗ್ರೆಸ್‌ ಮುಖಂಡರಾದ ಗುಜ್ಜಲ್‌ ರಾಘವೇಂದ್ರ, ಎಸ್‌.ಬಿ. ಮಂಜುನಾಥ ಅವರ ಚಿತ್ರಗಳಿವೆ. ಈಗ ಈ ಎರಡೂ ಕಟೌಟ್‌ಗಳು ಕ್ಷೇತ್ರದಲ್ಲಿ ಚರ್ಚೆಯ ವಿಷಯಗಳಾಗಿವೆ.

ಬರುವ ವಿಧಾನಸಭೆ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಲು ಭರತ್‌ ರೆಡ್ಡಿ ತಯಾರಿ ನಡೆಸಿದ್ದಾರೆ. ಈ ಹಿಂದೆಯೂ ಪ್ರಮುಖ ಕಾರ್ಯಕ್ರಮಗಳು ನಡೆದಾಗಲೆಲ್ಲ ಅವರ ಕಟೌಟ್‌ ಹಾಕಲಾಗಿತ್ತು. ಇತ್ತೀಚೆಗೆ ಬಿಜೆಪಿ ನಾಯಕಿ ರಾಣಿ ಸಂಯುಕ್ತಾ ಅವರ ಮಗಳೊಂದಿಗೆ ಭರತ್‌ ರೆಡ್ಡಿ ವಿವಾಹ ಆಗಿದ್ದು, ಈಗ ರೆಡ್ಡಿ ಕ್ಷೇತ್ರದ ಅಳಿಯರಾಗಿದ್ದಾರೆ. ಭರತ್‌ ರೆಡ್ಡಿ, ಮಾಜಿಶಾಸಕ ಸೂರ್ಯನಾರಾಯಣ ರೆಡ್ಡಿ ಅವರ ಮಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT