ಶನಿವಾರ, ಜುಲೈ 2, 2022
25 °C

ಜಿಲ್ಲಾ ಕಾರ್ಮಿಕ ಕಚೇರಿ ಸ್ಥಳಾಂತರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಜಿಲ್ಲಾ ಕಾರ್ಮಿಕ ಇಲಾಖೆಯ ಕಚೇರಿ ಸ್ಥಳಾಂತರಕ್ಕೆ ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ ಕಾರ್ಯಕರ್ತರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಲು ತಹಶೀಲ್ದಾರ್ ಗುರುಬಸವರಾಜ್ ಮುಂದಾದರು. ಆದರೆ, ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳು ಬಂದು ಮನವಿ ಪತ್ರ ಸ್ವೀಕರಿಸಬೇಕು ಎಂದು ಆಗ್ರಹಿಸಿ ಪಟ್ಟು ಹಿಡಿದರು.
ಗ್ರಾಮೀಣ ಠಾಣೆಯ ಸಿಪಿಐ ಶ್ರೀನಿವಾಸ ಮೇಟಿ ಮಧ್ಯ ಪ್ರವೇಶಿಸಿ, ಸಭೆಯಲ್ಲಿ ಪಾಲ್ಗೊಂಡಿರುವುದರಿಂದ ಜಿಲ್ಲಾಧಿಕಾರಿಗಳ ಬದಲಾಗಿ ತಹಶೀಲ್ದಾರ್ ಬಂದಿದ್ದಾರೆ. ಅವರು ವಿಷಯ ತಲುಪಿಸುತ್ತಾರೆ ಎಂದು ಹೇಳಿದ ನಂತರ ವಾತಾವರಣ ತಿಳಿಗೊಂಡಿತು.

ಕಾರ್ಮಿಕ ಮುಖಂಡ ಆರ್.ಭಾಸ್ಕರ್ ರೆಡ್ಡಿ ಮಾತನಾಡಿ, ವಿಜಯನಗರ ಜಿಲ್ಲೆ ಘೋಷಣೆಯಾಗಿ ಒಂದು ವರ್ಷ ಕಳೆದರೂ ಇದುರೆಗೂ ಕಾರ್ಮಿಕ ಇಲಾಖೆಯ ಸ್ಥಳಾಂತರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಈಗಲೂ ಬಳ್ಳಾರಿಗೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಎಲ್ಲ ಸವಲತ್ತುಗಳು ಜಿಲ್ಲಾ ಕೇಂದ್ರದಲ್ಲಿ ಸಿಗಬೇಕು. ಆದರೆ, ಜಿಲ್ಲೆ ರಚನೆಯ ಉದ್ದೇಶವೇ ಈಡೇರಿಲ್ಲ ಎಂದು ಆರೋಪಿಸಿದರು.

ಕಾರ್ಮಿಕರಿಗೆ ಕೋವಿಡ್‌ ಲಾಕ್‌ಡೌನ್ ಸಮಯದಲ್ಲಿ ಘೋಷಿಸಿದ ಪರಿಹಾರ, ಹೌಸಿಂಗ್ ಬೋರ್ಡ್ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯಗಳ ವಿತರಣೆಯಲ್ಲಿ ನ್ಯೂನತೆಗಳಿವೆ. ಅವುಗಳನ್ನು ಹೋಗಲಾಡಿಸಿ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಒದಗಿಸಿಕೊಡಬೇಕು. ಈ ಸಂಬಂಧ ಶೀಘ್ರ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

ಫೆಡರೇಶನ್‌ ಜಿಲ್ಲಾ ಅಧ್ಯಕ್ಷ ಎಸ್.ಜಗನ್ನಾಥ, ಪ್ರಧಾನ ಕಾರ್ಯದರ್ಶಿ ಎನ್.ಯಲ್ಲಾಲಿಂಗ, ಖಜಾಂಚಿ ಗುನ್ನಳ್ಳಿ ರಾಘವೇಂದ್ರ, ಎಂ.ಗೋಪಾಲ, ರಾಮಾಂಜಿನಿ, ಹೇಮಂತ್ ನಾಯ್ಕ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.