ಸೋಮವಾರ, ಜೂನ್ 1, 2020
27 °C
ಹೂವಿನಹಡಗಲಿಯ ಅಜಿತ್ ಜೈನ್ ಪರಿವಾರ ಆರಂಭಿಸಿರುವ ಕಿರು ಉದ್ಯಮ

ಮಾರುಕಟ್ಟೆಯಲ್ಲಿ ಸದ್ದು ಮಾಡಿದ ‘ಭಡಂಗ’

ಕೆ.ಸೋಮಶೇಖರ Updated:

ಅಕ್ಷರ ಗಾತ್ರ : | |

ಹೂವಿನಹಡಗಲಿ: ಪಟ್ಟಣದಲ್ಲಿ ತಯಾರಾಗುವ ವಿಶೇಷ ರುಚಿಯ ಮಸಾಲೆ ಮಂಡಕ್ಕಿ (ಭಡಂಗ) ಪಟ್ಟಣದ ಮಾರುಕಟ್ಟೆಯನ್ನು ದಾಟಿ, ನೆರೆಯ ತಾಲ್ಲೂಕು, ನಗರ ಪ್ರದೇಶಗಳಿಗೂ ಲಗ್ಗೆ ಇಟ್ಟಿದೆ.

ಪಟ್ಟಣದ ಎಚ್‌.ಡಿ. ಅಜಿತ್ ಜೈನ್ ಕುಟುಂಬದವರು ಈ ಭಾಗಕ್ಕೆ ಹೊಸ ರುಚಿಯ ಕುರುಕಲು ತಿನಿಸು ಪರಿಚಯಿಸಿದ್ದಾರೆ. ಇವರು ತಯಾರಿಸುವ ಖಾರ, ಸಿಹಿ, ಮಸಾಲೆ ಮಿಶ್ರಣದ ಭಡಂಗ ಸವಿರುಚಿಗೆ ಗ್ರಾಹಕರು ಮನಸೋತಿದ್ದಾರೆ. ಬೇಡಿಕೆ ಹೆಚ್ಚಾದಂತೆ ಈ ಕುರುಕಲು ತಿಂಡಿಯ ತಯಾರಿಕೆ ಈಗ ಕಿರು ಉದ್ಯಮವಾಗಿ ಬೆಳೆದಿದೆ.

ನಮ್ಮಲ್ಲಿ ಸಿಗುವ ಮಂಡಕ್ಕಿಯಂತೆಯೇ ಮಹಾರಾಷ್ಟ್ರದಲ್ಲಿ ವಿಶೇಷವಾದ ದಪ್ಪ ಮಂಡಕ್ಕಿ ದೊರೆಯುತ್ತದೆ. ಈ ತಿನಿಸು ತಯಾರಿಸಲು ಬೇಕಾದ ದಪ್ಪ ಮಂಡಕ್ಕಿ, ಶೇಂಗಾ, ಮಸಾಲೆ ಪದಾರ್ಥಗಳನ್ನು ಅವರು ಮಹಾರಾಷ್ಟ್ರದಿಂದಲೇ ತರಿಸಿಕೊಂಡು ಸ್ವಾದಿಷ್ಟ ‘ಭಡಂಗ’ ತಯಾರಿಸುತ್ತಾರೆ.

ಶೇಂಗಾ, ಬೆಳ್ಳುಳ್ಳಿ, ಉಪ್ಪು, ಖಾರದಪುಡಿ, ಅರಿಷಿಣ ಪುಡಿ, ಮಸಾಲೆ ಇನ್ನಿತರೆ ಪದಾರ್ಥಗಳನ್ನು ಒಗ್ಗರಣೆ ಹಾಕಿ ತಯಾರಿಸಿದ ರಸಾಯನದಲ್ಲಿ ಮಿಶ್ರಣಗೊಳ್ಳುವ ದಪ್ಪ ಮಂಡಕ್ಕಿಯು ಭಡಂಗವಾಗಿ ರೂಪಗೊಳ್ಳುತ್ತದೆ. ಈ ಕುರುಕಲು ತಿನಿಸನ್ನು ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ಕೆಲವರು ಸಂಜೆಯ ಸ್ನ್ಯಾಕ್ಸ್‌ ಸವಿಯಲು ಪಾರ್ಸೆಲ್‌ ಕೊಂಡೊಯ್ಯುತ್ತಾರೆ.

ಅಜಿತ್‌ ಜೈನ್‌ ಅವರು ಒಂದೂವರೆ ವರ್ಷದ ಹಿಂದೆ ಈ ಕುರುಕಲು ತಿನಿಸು ತಯಾರಿಸಲು ಆರಂಭಿಸಿದ್ದಾರೆ. ಆಹಾರ ಸಂರಕ್ಷಣೆ ಮತ್ತು ಗುಣಮಟ್ಟ ಕಾಯ್ದೆಗೆ ಒಳಪಟ್ಟು ‘ಶಂಭು ಭಡಂಗ’ ಬ್ರಾಂಡ್‌ಗೆ ಅನುಮತಿ ಪಡೆದಿದ್ದಾರೆ. ಈ ಉದ್ಯಮಕ್ಕಾಗಿಯೇ ಬ್ಯಾಂಕ್‌ ಸಾಲ ಪಡೆದು ಪಟ್ಟಣದ ರಾಯಪ್ಪ ಕಾಂಪೌಂಡ್‌ನಲ್ಲಿ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ.

ಅಜಿತ್‌ ಅವರು ಮೊದಲು ಬಾಡಿಗೆ ಆಧಾರದಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದರು. ಮಿನಿಬಸ್‌, ಟೆಂಪೊ ಟ್ರ್ಯಾಕ್ಸ್, ಕಾರು, ಹಾಲಿನ ವಾಹನ ಸೇರಿದಂತೆ 10ಕ್ಕೂ ಹೆಚ್ಚು ವಾಹನಗಳಿಗೆ ಅವರು ಮಾಲೀಕರಾಗಿದ್ದರು. ಮಹಾರಾಷ್ಟ್ರದಲ್ಲಿರುವ ಅವರ ಸಂಬಂಧಿಗಳ ಸಲಹೆ ಮೇರೆಗೆ ಈಚೆಗೆ ಟ್ಯಾಕ್ಸಿ ಓಡಿಸುವುದು ಬಿಟ್ಟು ‘ಭಡಂಗ’ ತಯಾರಿಕೆಯತ್ತ ವಾಲಿದ್ದಾರೆ.

ಅಜಿತ್‌ ಜೈನ್‌ ಮತ್ತು ಅವರ ಪುತ್ರ ವೃಷಭ ಜೈನ್‌ ಶುಚಿ ರುಚಿಯಾದ ಭಡಂಗ ತಯಾರಿಸಿ, ಪ್ಯಾಕೆಟ್‌ಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಕಳಿಸುವ ಜವಾಬ್ದಾರಿ ಹೊತ್ತಿದ್ದರೆ, ಅಜಿತ್‌ ಅವರ ಪತ್ನಿ ಪದ್ಮಾವತಿ ಹದವಾದ ಮಸಾಲೆ ಮಿಶ್ರಣ ಸಿದ್ಧಪಡಿಸಿಕೊಡುತ್ತಾರೆ. ₹5, ₹10, ₹50 ಬೆಲೆಯ 25 ಗ್ರಾಂ, 100 ಗ್ರಾಂ, 250 ಗ್ರಾಂ ಭಡಂಗ ಪ್ಯಾಕೆಟ್‌ಗಳು ಯಂತ್ರದಲ್ಲೇ ಸಿದ್ಧಗೊಳ್ಳುತ್ತವೆ.

ಹೂವಿನಹಡಗಲಿ, ಹರಪನಹಳ್ಳಿ, ಮುಂಡರಗಿ, ಹಾವೇರಿ, ಹುಬ್ಬಳ್ಳಿ, ಗದಗ, ಕೊಪ್ಪಳ ಮಾರುಕಟ್ಟೆಗಳಲ್ಲಿ ಇವರ ತಿನಿಸಿಗೆ ಬೇಡಿಕೆ ಹೆಚ್ಚಿದೆ. ಮಹಾನಗರದ ಮಾಲ್‌ಗಳಲ್ಲೂ ‘ಶಂಭು ಭಡಂಗ’ ಪ್ಯಾಮಿಲಿ ಪ್ಯಾಕ್‌ಗಳು ಸಿಗುತ್ತವೆ.

ಪ್ರತಿ ತಿಂಗಳು 150 ಚೀಲ ಭಡಂಗ ತಯಾರಿಸಿ, ₹1.70 ಲಕ್ಷ ವಹಿವಾಟು ನಡೆಸುತ್ತಾರೆ. ಯಂತ್ರದ ನೆರವಿನಲ್ಲಿ ಮನೆ ಮಂದಿಯೇ ಉದ್ಯಮ ನಡೆಸುತ್ತಿದ್ದು, ಇದಕ್ಕೆ ಕಾರ್ಮಿಕರನ್ನು ಅವಲಂಬಿಸಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.