ಅನಿಲ್ ಭಾಗ್ಯ ಕಿಟ್ ಶೀಘ್ರ ವಿತರಿಸಿ

7
ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಕೃಷ್ಣಮೂರ್ತಿ ಸೂಚನೆ

ಅನಿಲ್ ಭಾಗ್ಯ ಕಿಟ್ ಶೀಘ್ರ ವಿತರಿಸಿ

Published:
Updated:
Deccan Herald

ಬಳ್ಳಾರಿ: ‘ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಕಾರಣದಿಂದ ಗೋದಾಮಿನಲ್ಲಿಯೇ ಉಳಿಸಿರುವ ಅನಿಲ್ ಭಾಗ್ಯ ಕಿಟ್‌ಗಳನ್ನು ಫಲಾನುಭವಿಗಳಿಗೆ ಶೀಘ್ರ ವಿತರಿಸಿ’ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್‌.ಕೃಷ್ಣಮೂರ್ತಿ ಸೂಚಿಸಿದರು.

‘ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಾಗಿದೆ. ಕಿಟ್‌ಗಳು ಕಿಲುಬು ಹಿಡಿಯುವ ಮುನ್ನ ವಿಲೇವಾರಿ ಮಾಡಬೇಕು’ ಎಂದು ಇಲಾಖೆಯ ಜಂಟಿ ನಿರ್ದೇಶಕ ಸಿ.ಶ್ರೀಧರ್‌ ಅವರಿಗೆ ಸೂಚಿಸಿದರು.

ಅಸಮರ್ಪಕ ವಿತರಣೆ: ‘ಹಲವು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನು ನಿಗದಿಯಾದಷ್ಟು ವಿತರಿಸುತ್ತಿಲ್ಲ ಎಂಬುದ ಆಯೋಗದ ಭೇಟಿ ವೇಳೆ ಗೊತ್ತಾಗಿದೆ. ಅಂಥ ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ಸದಸ್ಯ ಡಿ.ಜಿ.ಹಸಬಿ ಸೂಚಿಸಿದರು.

‘ಪ್ರತಿ ನ್ಯಾಯಬೆಲೆ ಅಂಗಡಿಯಲ್ಲೂ ಎಲೆಕ್ಟ್ರಾನಿಕ್ ತೂಕದ ಯಂತ್ರವಿರಬೇಕು. ಅವುಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು’ ಎಂದು ಮತ್ತೊಬ್ಬ ಸದಸ್ಯ ವಿ.ಬಿ.ಪಾಟೀಲ್ ಸೂಚಿಸಿದರು.

ಹಾಸ್ಟೆಲ್‌ಗಳಲ್ಲಿ ಕಳಪೆ ನಿರ್ವಹಣೆ: ಮರಿಯಮ್ಮನಹಳ್ಳಿಯ ಅಂಗನವಾಡಿಗಳು, ಕೂಡ್ಲಿಗಿಯ ಪರಿಶಿಷ್ಟ ಪಂಗಡದ ಮೆಟ್ರಿನ್‌ ನಂತರದ ಹಾಸ್ಟೆಲ್‌ಗಳ ರಿಜಿಸ್ಟರ್‌ಗಳಲ್ಲಿ ದಾಸ್ತಾನು ಲೆಕ್ಕ ವಿವರಣೆಯೇ ಇಲ್ಲ. ಅಂಗನವಾಡಿಗಳ ದಾಸ್ತಾನು ರಿಜಿಸ್ಟರ್‌ನಲ್ಲಿ ಪೆನ್ಸಿಲ್‌ನಲ್ಲಿ ಬರೆಯಲಾಗಿದೆ’ ಎಂದು ಸದಸ್ಯ ಶಿವಶಂಕರ್‌ ಆಕ್ಷೇಪಿಸಿದರು.

ವರದಿಗೆ ಗೌರವ ಕೊಡಿ: ‘ಅಪೌಷ್ಠಿಕತೆಗೆ ಸಂಬಂಧಿಸಿದಂತೆ ನ್ಯಾ.ಎನ್.ಕೆ.ಪಾಟೀಲ್ ನೇತೃತ್ವದ ಸಮಿತಿ ನೀಡಿರುವ ಸಮಗ್ರ ವರದಿಯ ಬಗ್ಗೆ ಅಧಿಕಾರಿಗಳಿಗೆ ಅರಿವೇ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಸದಸ್ಯ ವಿ.ಬಿ.ಪಾಟೀಲ್, ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮೊದಲು ಅರಿತುಕೊಳ್ಳಬೇಕು’ ಎಂದರು.

ಕ್ರಿಮಿನಲ್‌ ಮೊಕದ್ದಮೆ: ಎಚ್ಚರಿಕೆ:  ‘ನಗರದ ವಿಮ್ಸ್‌ ಆಸ್ಪತ್ರೆಯಲ್ಲಿರುವ ಅಪೌಷ್ಠಿಕ ಮಕ್ಕಳ ಪುನರ್ವಸತಿ ಕೇಂದ್ರ ಸುಸಜ್ಜಿತವಾಗಿದೆ. ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಅಲ್ಲಿಗೆ ಮಕ್ಕಳನ್ನು ಸೇರಿಸುವ ಕೆಲಸ ಮಾಡುತ್ತಿಲ್ಲ. ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ 72 ಮಂದಿಗೆ ಗೌರವಧನವನ್ನು ಕೂಡ ಆರೋಗ್ಯ ಇಲಾಖೆಯು ನೀಡಿಲ್ಲ’ ಎಂದು ಆಯೋಗದ ಸದಸ್ಯ ವಿ.ಬಿ.ಪಾಟೀಲ್ ಅತೃಪ್ತಿ ವ್ಯಕ್ತಪಡಿಸಿದರು.
‘ಆಯೋಗವು ಸುಪ್ರೀಂಕೋರ್ಟ್‌ನಲ್ಲಿ ಕೇವಲ ಒಂದು ಅಫಿಡವಿಟ್ ಸಲ್ಲಿಸಿದರೂ ನಿಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತದೆ. ಅದಕ್ಕೆ ಆಸ್ಪದ ನೀಡಬೇಡಿ’ ಎಂದು ಎಚ್ಚರಿಕೆ ನೀಡಿದರು.

ಆಯೋಗದ ಸದಸ್ಯರಾದ ಮಹ್ಮದ ಅಲಿ, ಮಂಜುಳಾಬಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ, ಇದ್ದರು.

ಸಭೆಗೂ ಮುನ್ನ ಆಯೋಗದ ಪ್ರಮುಖರು ನಗರದ ವಿಮ್ಸ್ ಆಸ್ಪತ್ರೆಯಲ್ಲಿರುವ ಅಪೌಷ್ಠಿಕ ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !