ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಸ್ವಾರ್ಥಕ್ಕಾಗಿ ಜಿಲ್ಲೆ ರಚನೆ: ಆರೋಪ

ಮೊದಲು ಬೆಳಗಾವಿ ವಿಭಜಿಸಿ: ಸಂಘಟನೆಗಳ ಮುಖಂಡರ ಸಭೆಯಲ್ಲಿ ಆಕ್ರೋಶ
Last Updated 19 ನವೆಂಬರ್ 2020, 1:29 IST
ಅಕ್ಷರ ಗಾತ್ರ

ಬಳ್ಳಾರಿ: ‘ಹದಿನಾರು ಶಾಸಕರು, ಇಬ್ಬರು ಸಂಸದರಿರುವ ಬೃಹತ್ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಲು ಮುಂದಾಗದ ಸರ್ಕಾರ, ಅವಶ್ಯಕತೆಯೇ ಇಲ್ಲದಿದ್ದರೂ ಆನಂದ್‌ಸಿಂಗ್‌ ಅವರ ಸ್ವಾರ್ಥಕ್ಕಾಗಿ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಲು ಹೊರಟಿದೆ’ ಎಂದು ಕುಡುತಿನಿ ಶ್ರೀನಿವಾಸ್‌ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸಂಜೆ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ಬರಲು ಕಾರಣರಾದರೆಂಬ ಕಾರಣಕ್ಕೆ, ಆನಂದ್‌ಸಿಂಗ್‌ ಅವರ ಸ್ವಾರ್ಥದಿಂದ ಹೊಸ ಜಿಲ್ಲೆ ರಚನೆಯಾಗಿದೆ. ರಾಜಕೀಯ ದುರುದ್ದೇಶಕ್ಕಾಗಿ ಜಿಲ್ಲೆ ವಿಭಜಿಸುವುದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

‘ಮೊದಲು ಬೆಳಗಾವಿ ವಿಭಜಿಸಿ. ನಂತರ ಬಳ್ಳಾರಿ ಕಡೆಗೆ ಬನ್ನಿ. ಏಕೀಕರಣ ಹೋರಾಟಕ್ಕೆ ಮುನ್ನುಡಿ ಬರೆದ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿದರೆ ಚರಿತ್ರೆಗೆ ಅಪಚಾರ ಮಾಡಿದಂತೆ’ ಎಂದು ತುಂಗಭದ್ರಾ ರೈತ ಸಂಘದ ಮುಖಂಡ ದರೂರು ಪುರುಷೋತ್ತಮಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜಿಸುವುದರ ಬದಲಿಗೆ, ಹೊಸ ವಿಜಯನಗರ ಜಿಲ್ಲೆಗೇ ಬಳ್ಳಾರಿಯನ್ನೂ ಸೇರಿಸಿಬಿಡಿ’ ಎಂದು ಬಂಡ್ರಾಳ್‌ ಮೃತ್ಯುಂಜಯ ಸ್ವಾಮಿ ವ್ಯಂಗ್ಯವಾಡಿದರು.

‘ಬಳ್ಳಾರಿ ಜಿಲ್ಲಾ ಕೇಂದ್ರ, ಗ್ರಾಮಾಂತರ ಪ್ರದೇಶ, ಸಿರುಗುಪ್ಪ ಸೇರಿದಂತೆ ಎಲ್ಲವನ್ನೂ ಅಲ್ಲಿಗೇ ಸೇರಿಸಿ’ ಎಂದು ಬಿಸ್ಲಳ್ಳಿ ಬಸವರಾಜು ಆಗ್ರಹಿಸಿದರು.

ಗಣಿ ಉದ್ಯಮಿ ಟಪಾಲ್‌ ಗಣೇಶ್‌, ‘ಅಸ್ತಿತ್ವಕ್ಕಾಗಿ ಹೋರಾಟ ಮಾಡಬೇಕಾದ ಸಂದರ್ಭದಲ್ಲಿ ಜಿಲ್ಲೆಯ ಜನರೆಲ್ಲರೂ ಒಗ್ಗೂಡಬೇಕಾಗಿದೆ. ಅಹಿಂಸಾತ್ಮಕವಾಗಿಯೇ ಹೋರಾಟ ವನ್ನು ಹಮ್ಮಿಕೊಳ್ಳಬೇಕು. ಹಿಂದಿನ ವರ್ಷ ಗಟ್ಟಿ ಹೋರಾಟವನ್ನು ನಡೆಸಿದ ಪರಿಣಾಮವಾಗಿಯೇ ಸರ್ಕಾರ ತನ್ನ ನಿರ್ಧಾರವನ್ನು ಕೈಬಿಟ್ಟಿತ್ತು. ಈ ಬಾರಿಯೂ ಸರ್ಕಾರದ ನಿರ್ಧಾರವನ್ನು ಬದಲಿಸಬೇಕು’ ಎಂದರು.

‘ಹೊಸಪೇಟೆಯ ಗ್ರಾಮ ಪಂಚಾಯ್ತಿಗಳ ಯಾವೊಬ್ಬ ಸದಸ್ಯರೂ ತಮಗೆ ವಿಜಯನಗರ ಜಿಲ್ಲೆ ಬೇಕೆಂದು ಹೇಳಿಲ್ಲ. ಆದರೆ ಆನಂದ್‌ಸಿಂಗ್‌ ಕೇಳಿದರೆಂಬ ಮಾತ್ರಕ್ಕೇ ಮುಖ್ಯಮಂತ್ರಿ ಯಡಿಯೂರಪ್ಪ ಹೊಸ ಜಿಲ್ಲೆ ಘೋಷಿಸುವುದು ಎಳ್ಳಷ್ಟೂ ಸರಿಯಲ್ಲ’ ಎಂದು ರೈತ ಮುಖಂಡ ಗಂಗಾವತಿ ವೀರೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್‌ ವಿಜಯಕುಮಾರ್, ಚಾನಾಳ್‌ ಶೇಖರ್, ಸಿದ್ಮಲ್‌ ಮಂಜುನಾಥ್‌ ಮಾತನಾಡಿ, ‘ವಿಭಜನೆ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಇಲ್ಲವಾದರೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

ಕೊಳಗಲ್ ಆಂಜಿನಪ್ಪ, ಪಂಪಾಪತಿ, ಅನಿಲ್‌, ರೆಹಮಾನ್, ಕೃಷ್ಣಪ್ಪ, ಶ್ರೀಧರ್‌, ವೀರೇಶ್‌, ಅಬೀಬ್‌ ಪಾಷಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT