ಕಾಲುವೆಯಲ್ಲಿ ಕೊನೆಗೂ ಪತ್ತೆಯಾದ ಆಟೊ, ಇನ್ನೂ ಸಿಗದ ಚಾಲಕ, ಪ್ರಯಾಣಿಕರ ಶವಗಳು

7
ತುಂಗಭದ್ರಾ ಕಾಲುವೆಯಲ್ಲಿ ಆಟೊ ಪಲ್ಟಿ

ಕಾಲುವೆಯಲ್ಲಿ ಕೊನೆಗೂ ಪತ್ತೆಯಾದ ಆಟೊ, ಇನ್ನೂ ಸಿಗದ ಚಾಲಕ, ಪ್ರಯಾಣಿಕರ ಶವಗಳು

Published:
Updated:
Deccan Herald

ಹೊಸಪೇಟೆ: ಇಲ್ಲಿನ ಸಂಡೂರು ರಸ್ತೆಯ ತುಂಗಭದ್ರಾ ಜಲಾಶಯದ ಮೇಲ್ಮಟ್ಟದ ಕಾಲುವೆಯಲ್ಲಿ (ಎಚ್‌.ಎಲ್‌.ಸಿ.) ಗುರುವಾರ ಕೊಚ್ಚಿ ಹೋಗಿದ್ದ ಪ್ರಯಾಣಿಕರ ಆಟೊ ಶುಕ್ರವಾರ ಪತ್ತೆಯಾಗಿದೆ. ಆದರೆ, ಅದರಲ್ಲಿದ್ದವರು ಪತ್ತೆಯಾಗಿಲ್ಲ.

‘ಕೆ.ಎ.16, ಎ–2176 ಚಿತ್ರದುರ್ಗ ನೋಂದಣಿಯ ಆಟೊ ಇದಾಗಿದ್ದು, ಕೊಪ್ಪಳ ಜಿಲ್ಲೆ ಹುಲಿಗಿಯ ಆಟೊ ಚಾಲಕ ವಿಶ್ವನಾಥ ಮದ್ದಯ್ಯ (28) ಅದರ ಮಾಲೀಕರು.

ಆಟೊ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕ್ರೇನ್‌ ಸಹಾಯದಿಂದ ಆಟೊ ಮೇಲಕ್ಕೆ ತೆಗೆಯುವಾಗ ಅದರಲ್ಲಿ ಸಿಲುಕಿಕೊಂಡಿದ್ದ ಶವ ನೀರಿನ ಸೆಳೆತಕ್ಕೆ ಹರಿದು ಹೋಗಿದೆ. ಆಟೊದಲ್ಲಿ ಎಷ್ಟು ಜನ ಇದ್ದರೂ ಎನ್ನುವುದು ಗೊತ್ತಿಲ್ಲ. ಆದರೂ ಆಟೊ ಬಿದ್ದ ಸ್ಥಳದಿಂದ ತಾಲ್ಲೂಕಿನ ಮಲಪನಗುಡಿ ವರೆಗೆ ನುರಿತ ಈಜುಗಾರರು ತಡಹೊತ್ತು ಪರಿಶೀಲನೆ ನಡೆಸಿದರು. ಆದರೆ, ಯಾವುದೇ ಸುಳಿವು ಸಿಕ್ಕಿಲ್ಲ’ ಎಂದು ಸಂಚಾರ ಪೊಲೀಸ್‌ ಇನ್‌ಸ್ಪೆಕ್ಟರ್‌ ಅಯ್ಯನಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಶ್ವನಾಥ ಅವರು ಇಲ್ಲಿನ ಪಾರ್ವತಿ ನಗರದ ಜ್ಯೋತಿ ಎಂಬುವರೊಂದಿಗೆ ವಿವಾಹವಾಗಿದ್ದು, ಅಲ್ಲಿಯೇ ನೆಲೆಸಿದ್ದಾರೆ. ಗುರುವಾರ ಮಧ್ಯಾಹ್ನ ಜಂಬುನಾಥ ರಸ್ತೆಯಿಂದ ಸಂಡೂರು ರಸ್ತೆಯ ಕಡೆಗೆ ತೆರಳುವಾಗ ಆಟೊ ಕಾಲುವೆಯಲ್ಲಿ ಬಿದ್ದಿದೆ. ಅದನ್ನು ನೋಡಿದವರು ತಕ್ಷಣವೇ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನುರಿತ ಈಜುಗಾರರು, ಅಗ್ನಿಶಾಮಕ ಹಾಗೂ ಪೊಲೀಸ್‌ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿ ರಾತ್ರಿ ಎಂಟು ಗಂಟೆಯ ವರೆಗೆ ಕಾರ್ಯಾಚರಣೆ ನಡೆಸಿದರೂ ಆಟೊ, ಅದರಲ್ಲಿದ್ದವರು ಪತ್ತೆಯಾಗಿರಲಿಲ್ಲ. ಶುಕ್ರವಾರ ಪುನಃ ಕಾರ್ಯಾಚರಣೆ ಆರಂಭಿಸಿದಾಗ ಆಟೊ ಪತ್ತೆಯಾಗಿದೆ’ ಎಂದು ಮಾಹಿತಿ ನೀಡಿದರು.

‘ವಿಶ್ವನಾಥ ಅವರಿಗೆ ಮದ್ಯ ಸೇವಿಸುವ ಚಟವಿತ್ತು. ಆಗಾಗ ಕುಡಿದು ಆಟೊ ಓಡಿಸುತ್ತಿದ್ದರು ಎಂದು ಅವರ ಕುಟುಂಬ ಸದಸ್ಯರೇ ಹೇಳಿದ್ದಾರೆ. ಕುಡಿದು ಆಟೊ ಓಡಿಸುವಾಗ ಈ ಘಟನೆ ನಡೆದಿರುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದರು.
ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !