ಬುಧವಾರ, ಅಕ್ಟೋಬರ್ 16, 2019
26 °C
ಗಾಂಧಿ ಜಯಂತಿ ದಿನ ಬದಲಾವಣೆಗೆ ಸಂಕಲ್ಪ; ಪ್ಲಾಸ್ಟಿಕ್‌ ಬಳಸದಿರಲು ಪಣ

ಕನ್ನಡ ವಿಶ್ವವಿದ್ಯಾಲಯದಿಂದ ಗ್ರಾಮ ದತ್ತು

Published:
Updated:
Prajavani

ಹೊಸಪೇಟೆ: ನಗರ ಹಾಗೂ ತಾಲ್ಲೂಕಿನ ಹಲವು ಕಡೆಗಳಲ್ಲಿ ಬುಧವಾರ ಮಹಾತ್ಮ ಗಾಂಧಿ ಅವರ ಜಯಂತಿ ಆಚರಿಸಲಾಯಿತು. ಅದರ ವಿವರ ಇಂತಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ:

ತಾಲ್ಲೂಕಿನ ಐದು ಗ್ರಾಮಗಳನ್ನು ವಿಶ್ವವಿದ್ಯಾಲಯ ದತ್ತು ಪಡೆದುಕೊಂಡಿತು. ತಾಲ್ಲೂಕಿನ ಸೀತಾರಾಮ ತಾಂಡಾ, ಇಂಗಳಗಿ, ಪಾಪಿನಾಯಕನಹಳ್ಳಿ, ಕಡ್ಡಿರಾಂಪುರ ಹಾಗೂ ಮಲಪನಗುಡಿ ಸೇರಿವೆ. ಎಲ್ಲಾ ಗ್ರಾಮಗಳಲ್ಲಿ ವಿವಿಧ ಕ್ಷೇತ್ರದ ತಜ್ಞರನ್ನು ಕರೆಸಿ, ಕಾರ್ಯಾಗಾರಗಳನ್ನು ಆಯೋಜಿಸಿ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಗುರಿಯನ್ನು ವಿಶ್ವವಿದ್ಯಾಲಯ ಹಾಕಿಕೊಂಡಿದೆ.

ಬಳಿಕ ‘ಗಾಂಧೀಜಿ ಮತ್ತು ಗ್ರಾಮ ಸ್ವರಾಜ್ಯ’ ಕುರಿತು ಉಪನ್ಯಾಸ ನೀಡಿದ ಅರ್ಥ ತಜ್ಞ ಟಿ.ಆರ್‌. ಚಂದ್ರಶೇಕರ್‌, ‘ಅಭಿವೃದ್ಧಿಯೆಂದರೆ ಬಂಡವಾಳದ ಸಂಗತಿಯಲ್ಲ. ಅದು ಜನರ ಬದುಕಿಗೆ ಸಂಬಂಧಿಸಿದ ಸಂಗತಿ. ಸಮೃದ್ಧತೆಯು ಬದುಕಿಗೆ ಸಂಬಂಧಿಸಿರಬೇಕೇ ಹೊರತು ಯಾಂತ್ರಿಕವಾಗಿರಬಾರದು’ ಎಂದು ಹೇಳಿದರು.

‘ಇತ್ತೀಚಿನ ದಿನಗಳಲ್ಲಿ ಸ್ವಚ್ಛತೆ ಎಂಬುದು ಅಭಿಯಾನದ ರೂಪ ಪಡೆದುಕೊಳ್ಳುತ್ತಿದೆ. ಸ್ವಚ್ಛತೆ ಎನ್ನುವುದು ಆಹಾರ, ನೀರು ಹಾಗೂ ಮೂಲಸೌಕರ್ಯ ಇದ್ದಂತೆ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸತ್ಯ, ಶಾಂತಿ, ಅಹಿಂಸೆ, ಸಮಾನತೆ, ಅಸ್ಪೃಶ್ಯತೆ, ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಬೆಳೆದಾಗ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಕ್ಕಳ ವೈದ್ಯ ಕೆ.ವಿ. ಶೇಖರ್‌, ‘ಉಗ್ರವಾದ, ಹಿಂಸೆ, ಭ್ರಷ್ಟಾಚಾರ ಹಾಗೂ ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಗಾಂಧೀಜಿಯವರ ಆದರ್ಶ ತತ್ವಗಳು ದಾರಿದೀಪವಿದ್ದಂತೆ’ ಎಂದರು.

ಕುಲಪತಿ ಪ್ರೊ.ಸ.ಚಿ. ರಮೇಶ ಮಾತನಾಡಿ, ‘ಹಿಂದೆ ದುಡಿಮೆಯ ಜತೆಗೆ ವ್ಯಾಯಾಮ ಕೂಡ ಆಗುತ್ತಿತ್ತು. ಆದರೆ, ಇಂದಿನ ಯಾಂತ್ರಿಕ ಜೀವನದಲ್ಲಿ ಆರೋಗ್ಯ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಗಾಂಧೀಜಿಯವರ ಪ್ರಕಾರ, ಸುಮ್ಮನೆ ವ್ಯಾಯಾಮ ಮಾಡದೇ ವ್ಯಾಯಾಮದಲ್ಲೂ ದುಡಿಮೆ ಮಾಡಿದರೆ ಸದೃಢ ಭಾರತ ಕಟ್ಟಬಹುದು’ ಎಂದು ನೆನಪಿಸಿದರು.

ಕುಲಸಚಿವ ಎ. ಸುಬ್ಬಣ್ಣ ರೈ, ಮಲಪನಗುಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹನುಮಕ್ಕ, ಗ್ರಾಮ ದತ್ತು ಯೋಜನೆಯ ಸಂಚಾಲಕ ಅಮರೇಶ ಯತಗಲ್, ಡಾ. ರಾಮ ಮನೋಹರ ಲೋಹಿಯಾ ಅಧ್ಯಯನ ಪೀಠದ ಸಂಚಾಲಕ ಯರ್ರಿಸ್ವಾಮಿ, ಸಂಶೋಧನಾ ವಿದ್ಯಾರ್ಥಿನಿಯರಾದ ಮಂಜುಳಾ, ಸಾವಿತ್ರಿ ಹಿರೇಮಠ ಇದ್ದರು.

ಶಂಕರ್‌ ಆನಂದ್‌ ಸಿಂಗ್‌ ಕಾಲೇಜು:

ರಾಷ್ಟ್ರೀಯ ಸೇವಾ ಯೋಜನೆ ಸ್ವರ್ಣ ಮಹೋತ್ಸವ ಹಾಗೂ ಗಾಂಧಿ ಜಯಂತಿ ಆಚರಿಸಲಾಯಿತು. ಪ್ರಾಧ್ಯಾಪಕ ನಾಗಣ್ಣ ಕಿಲಾರಿ ಮಾತನಾಡಿ, ‘ಗಾಂಧೀಜಿ ಎಲ್ಲಾ ಕಾಲಕ್ಕೂ ಎಲ್ಲಾ ದೇಶಕ್ಕೂ ಪ್ರಸ್ತುತರು, ಅವರ ಚಿಂತನೆಗಳು ಇಂದಿನ ಯುವ ಸಮುದಾಯಕ್ಕೆ ಅನುಕರಣೀಯ’ ಎಂದರು.

ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ, ಎನ್.ಎಸ್.ಎಸ್. ಅಧಿಕಾರಿಗಳಾದ ಕೆ.ಶಿವಪ್ಪ, ಕುರುಬರ ವೆಂಕಟೇಶ್ ಇದ್ದರು. ಇದೇ ವೇಳೆ ಶ್ರಮದಾನ ನಡೆಯಿತು.

ಪತಂಜಲಿ ಯೋಗ ಸಮಿತಿ:

ಕೌಲ್‌ಪೇಟೆಯ ರಾಮಲಿಂಗೇಶ್ವರ ಯೋಗ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಬಸವರಾಜ ಮಾತನಾಡಿ, ‘ಗಾಂಧೀಜಿ ನುಡಿದಂತೆ ನಡೆದರು. ನಡೆದಂತೆ ನುಡಿದರು’ ಎಂದರು.

ಸಮಿತಿಯ ಜಿಲ್ಲಾ ಪ್ರಭಾರಿ ಎಫ್.ಟಿ. ಹಳ್ಳಿಕೇರಿ, ಕಾರ್ಯದರ್ಶಿ ಪೂಜಾ ಐಲಿ, ಅಶೋಕ ಚಿತ್ರಗಾರ, ಬಳ್ಳಾರಿ ಸಂಗಪ್ಪ, ಜಯಣ್ಣ, ಭಾರತ ಸ್ವಾಭಿಮಾನ ಸಮಿತಿಯ ಜಿಲ್ಲಾ ಪ್ರಭಾರಿ ಬಾಲಚಂದ್ರ ಶರ್ಮಾ, ಯುವ ಭಾರತ ಸಂಘಟನೆಯ ಪ್ರಭಾರಿ ಕಿರಣಕುಮಾರ, ಕೃಷ್ಣ ನಾಯಕ, ಶ್ರೀಧರ ಇದ್ದರು.

ಬಳ್ಳಾರಿ ಜಿಲ್ಲಾ ಕಾಂಗ್ರೆಸ್‌ ಸಮಿತಿ:

ನಗರದ ಮಹಾತ್ಮ ಗಾಂಧೀಜಿಯವರ ಪುತ್ಥಳಿಗೆ ಪಕ್ಷದ ಜಿಲ್ಲಾ ಅಧ್ಯಕ್ಷ ಬಿ.ವಿ. ಶಿವಯೋಗಿ ಮಾಲಾರ್ಪನೆ ಮಾಡಿದರು. ಮುಖಂಡರಾದ ಎಲ್. ಸಿದ್ದನಗೌಡ, ಮೊಹಮ್ಮದ್‌ ಇಮಾಮ್ ನಿಯಾಜಿ, ವಿ.ಸೋಮಣ್ಣ, ಗುಜ್ಜಲ್ ನಾಗರಾಜ್, ಎಂ.ಸಿ.ವೀರಸ್ವಾಮಿ, ಆರ್.ಕೋಟ್ರೇಶ್, ನಿಂಬಗಲ್ ರಾಮಕೃಷ್ಣ, ಬಿ.ಮಾರೆಣ್ಣ, ವಿನಾಯಕ ಶೆಟ್ಟರ್, ಸಿ.ಕೃಷ್ಣ, ಲಿಯಾಕತ್, ಅಂಕ್ಲೇಶ್, ಹನುಮಂತ, ಮೊಹಮ್ಮದ್ ಗೌಸ್, ಸತ್ಯನಾರಾಯಣಪ್ಪ, ಜಾವೇದ್‌, ಜಿ.ರಾಘವೇಂದ್ರ, ಮೀರ್ ಜಾಫರ್, ಕನ್ನೇಶ್ವರ, ಕುಬೇರ ದಲಾಲಿ ಇದ್ದರು.

Post Comments (+)