ಗುರುವಾರ , ನವೆಂಬರ್ 14, 2019
23 °C
ಅಪಹರಣ, ಅತ್ಯಾಚಾರ ಪ್ರಕರಣ ದಾಖಲು

ಕಾಣೆಯಾದ ಬಾಲಕಿ ಶವವಾಗಿ ಪತ್ತೆ

Published:
Updated:

ತೋರಣಗಲ್ಲು: ಇಲ್ಲಿಗೆ ಸಮೀಪದ ವಡ್ಡು ಗ್ರಾಮದಲ್ಲಿ ಭಾನುವಾರ ರಾತ್ರಿ ಕಾಣೆಯಾಗಿದ್ದ ಬಾಲಕಿ ರೂಪ (6) ಮೃತದೇಹವು ಸೋಮವಾರ ಬೆಳಿಗ್ಗೆ ಗ್ರಾಮದ ಚೆನ್ನಮ್ಮ ಅಜ್ಜಿಯ ಆಟದ ಮೈದಾನದಲ್ಲಿ ಗೋಣಿ ಚೀಲದಲ್ಲಿ ಪತ್ತೆಯಾಗಿದೆ.

ಬೆಳಿಗ್ಗೆ 9ರ ವೇಳೆಗೆ ವ್ಯಕ್ತಿಯೊಬ್ಬರು ಮೈದಾನದಲ್ಲಿ ಮೂತ್ರ ವಿಸರ್ಜನೆಗೆ ಹೋದ ವೇಳೆ ಗೋಣಿ ಚೀಲದ ಹೊರಗೆ ಮಗುವಿನ ಕಾಲು ಕಂಡ ನಂತರ ವಿಷಯ ಬೆಳಕಿಗೆ ಬಂತು. ಮಗುವಿನ ಮುಖದಲ್ಲಿ ದವಡೆಯ ಮೇಲೆ ಮತ್ತು ಕುತ್ತಿಗೆಯ ಭಾಗದಲ್ಲಿ ಪರಚಿದ ರಕ್ತ ಗಾಯಗಳಾಗಿದ್ದು, ಪರ್ಕ್ ಹೆಸರಿನ ಚಾಕೊಲೆಟ್ ಸಹ  ಕಂಡುಬಂತು. 

ಗ್ರಾಮದ ಈಶ್ವರ ದೇವಸ್ಥಾನದ ಹತ್ತಿರ ರಾತ್ರಿ 8ರ ವೇಳೆಗೆ ಸ್ನೇಹಿತರ ಜೊತೆ ಆಟವಾಡುತ್ತಿದ್ದ ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ತಂದೆ ಅಗಸರ ರೇವಣ್ಣ ತೋರಣಗಲ್‌ ಠಾಣೆಗೆ ದೂರು ನೀಡಿದ್ದರು. ಪಿಎಸ್‍ಐ ಮಹೇಶಗೌಡ ಅವರು, ಗ್ರಾಮಕ್ಕೆ ರಾತ್ರಿ ಭೇಟಿ ನೀಡಿ ಪಾಲಕರನ್ನು ವಿಚಾರಿಸಿ, ಗ್ರಾಮ ಸೇರಿದಂತೆ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದಲ್ಲಿ ಶೋಧ  ನಡೆಸಿದ್ದರು. ಮೃತದೇಹ ಪತ್ತೆಯದ ಸ್ಥಳಕ್ಕೆ ಬಳ್ಳಾರಿಯಿಂದ ಶ್ವಾನದಳವನ್ನು ಕರೆಸಲಾಗಿತ್ತು.

‘ಉದ್ಯೋಗದ ಸಲುವಾಗಿ ಗ್ರಾಮದಲ್ಲಿ ನೆಲೆಸಿರುವ ರಾಜ್ಯದವರಲ್ಲಿ ಕೆಲವರು ಪಾನಮತ್ತರಾಗಿ ರಾತ್ರಿವೇಳೆ ಸಂಚರಿಸುತ್ತಿದ್ದಾರೆ. ಅಂಥವರೇ ಮಗುವನ್ನು ಕೊಂದಿರುವ ಸಾಧ್ಯತೆ ಇದೆ. ಗ್ರಾಮದಲ್ಲಿರುವ ಮದ್ಯದಂಗಡಿಯನ್ನು ಸ್ಥಳಾಂತರಿಸಬೇಕು. ಗ್ರಾಮಸ್ಥರಿಗೆ ರಕ್ಷಣೆ ಕೊಡಬೇಕು’ ಎಂದು ಮುಖಂಡ ಕಾಶಿ ತಿಪ್ಪೇಸ್ವಾಮಿ ಆಗ್ರಹಿಸಿದರು.

ಆರೋಪಿ ಪತ್ತೆ: ಪ್ರಕರಣ ಕುರಿತು ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬ, ‘ಅಪಹರಣ ಮತ್ತು ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆ ಮಾಡಲಾಗಿದೆ. ತನಿಖೆ ಮುಗಿದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು’ ಎಂದರು.

ಪ್ರತಿಕ್ರಿಯಿಸಿ (+)