ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಆತ್ಮಹತ್ಯೆ ತಡೆಯದಕ್ಕೆ ಕಿಡಿ

ಜಿಲ್ಲಾ ಉಸ್ತುವಾರಿ ಮಂತ್ರಿ, ಶಾಸಕರ ವರ್ತನೆಗೆ ಬೇಸರ; 27ರಂದು ಪ್ರತಿಭಟನೆ
Last Updated 11 ಡಿಸೆಂಬರ್ 2018, 9:56 IST
ಅಕ್ಷರ ಗಾತ್ರ

ಹೊಸಪೇಟೆ: ‘ಅಸಮರ್ಪಕ ಮಳೆಯಿಂದ ಬೆಳೆ ನಷ್ಟವಾಗಿ, ಸಾಲಬಾಧೆಗೆ ತುತ್ತಾಗಿ ನಾಲ್ಕು ತಿಂಗಳಲ್ಲಿ ಜಿಲ್ಲೆಯಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಮಂತ್ರಿಯಾಗಲಿ, ಸ್ಥಳೀಯ ಶಾಸಕರಾಗಲಿ ರೈತ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ಬೇಸರ ವ್ಯಕ್ತಪಡಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಆ. 25ರಂದು ಸಂಡೂರು ತಾಲ್ಲೂಕಿನ ಚಿಕ್ಕಕೆರೆಯಾಗಿನಹಳ್ಳಿಯಲ್ಲಿ ಗೊಲ್ಲರ ಬಾಲಪ್ಪ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದರು. ಅದರಿಂದ ಮನನೊಂದು ಸೆ. 25ರಂದು ಬಾಲಪ್ಪನ ಮಡದಿ ಶೋಭಾ ನೇಣು ಹಾಕಿಕೊಂಡು ಜೀವ ಬಿಟ್ಟರು. ಅವರಿಗೆ ಮೂವರು ಮಕ್ಕಳಿದ್ದಾರೆ. ಅವರು ಒಟ್ಟು ₹ 12 ಲಕ್ಷ ಕೃಷಿ ಸಾಲ ಮಾಡಿದ್ದರು’ ಎಂದು ವಿವರಿಸಿದರು.

‘ಇತ್ತೀಚೆಗೆ ಕೊಟ್ಟೂರು ತಾಲ್ಲೂಕಿನ ಕಾಳಾಪುರದ ಕರಿಬಸಪ್ಪ ಸಾಲದಿಂದ ಬೇಸತ್ತು ವಿಷ ಸೇವಿಸಿ ಜೀವ ತ್ಯಜಿಸಿದರು. ಹನ್ನೊಂದು ಜನ ಇರುವ ತುಂಬು ಕುಟುಂಬ ಅವರದಾಗಿದೆ. ತಾಲ್ಲೂಕಿನ ಗರಗ ಗ್ರಾಮದ ಹೊಲದಲ್ಲಿ ಹುಣಸೆ ಮರಕ್ಕೆ ನೇಣು ಹಾಕಿಕೊಂಡು ಎಂ. ಬಸವರಾಜ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 25 ಜನರನ್ನು ಒಳಗೊಂಡಿರುವ ದೊಡ್ಡ ಕುಟುಂಬ ಅವರದು. ಒಣಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ, ಬರದಿಂದ ಬೆಳೆ ನಷ್ಟವಾಗಿ ಸಾಲಕ್ಕೆ ತುತ್ತಾಗಿ ಜೀವ ತೊರೆದರು’ ಎಂದು ಮಾಹಿತಿ ನೀಡಿದರು.

‘ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರಿಂದ ಬಾಲಪ್ಪ ಅವರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ಕೊಡಲಾಗಿದೆ. ಎಲ್ಲ ಮೃತ ರೈತರ ಕುಟುಂಬದವರಿಗೆ ತಲಾ ₹ 10 ಲಕ್ಷ ಪರಿಹಾರ ಕೊಡಬೇಕು. ಗಂಡನನ್ನು ಕಳೆದುಕೊಂಡು ವಿಧವೆಯಾದವರಿಗೆ ₹ 5 ಸಾವಿರ ಮಾಸಾಶನ ಕೊಡಬೇಕು. ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಇದೇ 27ರಂದು ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

‘ಬಳ್ಳಾರಿ ಜಿಲ್ಲೆಯಲ್ಲಿ ಸತತ ಬರದಿಂದ ಜನ ಕಂಗಾಲಾಗಿದ್ದಾರೆ. ಒಣಭೂಮಿಯಲ್ಲಿ ಕೃಷಿ ಮಾಡುವವರ ಕಷ್ಟ ಹೇಳತೀರದಾಗಿದೆ. ಸಾಲದ ಶೂಲಕ್ಕೆ ರೈತರು ಜೀವ ತೊರೆಯುತ್ತಿದ್ದಾರೆ. ಕಳಪೆ ಬೀಜ ಪೂರೈಸಿದ್ದರಿಂದ ಮೆಕ್ಕೆಜೋಳಕ್ಕೆ ರೋಗ ಬಂದು ಹಾಳಾಗಿದೆ. ಜಿಲ್ಲಾ ಮಂತ್ರಿ, ಸ್ಥಳೀಯ ಶಾಸಕರು ರೈತರ ಗೋಳು ಆಲಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಸಂಘದ ಮುಖಂಡರಾದ ಯು. ತಿಪ್ಪೇಸ್ವಾಮಿ, ಬಿ. ಮಾಳಮ್ಮ, ಗಾಳಿ ಬಸವರಾಜ, ದುರ್ಗಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT