ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಹಜ ಸ್ಥಿತಿಗೆ ಮರಳಿದ ಹೊಸಪೇಟೆ

ವಿಜಯನಗರ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಪರಿಸ್ಥಿತಿ ಸಾಮಾನ್ಯ
Last Updated 5 ಜುಲೈ 2021, 12:21 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕೋವಿಡ್‌ ಲಾಕ್‌ಡೌನ್‌ ತೆರವುಗೊಳಿಸಿರುವುದರಿಂದ ನಗರ ಸೇರಿದಂತೆ ಇಡೀ ವಿಜಯನಗರ ಜಿಲ್ಲೆ ಸಂಪೂರ್ಣ ಸಹಜ ಸ್ಥಿತಿಗೆ ಮರಳಿದೆ.

ಶನಿವಾರ ಸಂಜೆಯೇ ಲಾಕ್‌ಡೌನ್‌ ತೆರವುಗೊಳಿಸುವ ವಿಷಯವನ್ನು ಸರ್ಕಾರ ಪ್ರಕಟಿಸಿತ್ತು. ಅದಕ್ಕೆ ಮೊದಲೇ ಸಿದ್ಧರಾಗಿದ್ದ ವ್ಯಾಪಾರಿಗಳು ಭಾನುವಾರ ಸಂಜೆ ಒಳಗೇ ಇದ್ದುಕೊಂಡು ಮಳಿಗೆಗಳನ್ನು ಸ್ವಚ್ಛ ಮಾಡಿಕೊಂಡರು. ದಿನಸಿ ಸೇರಿದಂತೆ ಅಗತ್ಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಸಲ್ಲಿಸಿದ್ದರು. ಇದರಿಂದಾಗಿ ಸೋಮವಾರ ಹೆಚ್ಚಿನ ಜನ ಬಂದರೂ ಅವರಿಗೆ ತೊಂದರೆ ಆಗಿಲಿಲ್ಲ.

ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಿ ಎಲ್ಲ ದಿನಗಳಂದು ಬೆಳಿಗ್ಗೆ 5ರಿಂದ ರಾತ್ರಿ 9ರ ವರೆಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಸೋಮವಾರ ಬೆಳಿಗ್ಗೆ 5ಕ್ಕೆ ನಗರದ ಪ್ರಮುಖ ರಸ್ತೆಗಳಲ್ಲಿ ಜನರ ಓಡಾಟ ಕಂಡು ಬಂತು. ಗ್ರಾಮೀಣ ಪ್ರದೇಶಗಳಿಂದ ಜನ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಬಂದು ತರಕಾರಿ, ಹಣ್ಣು ತಂದು ಮಾರಾಟ ಮಾಡಿದರು. ಚಿಲ್ಲರೆ ವ್ಯಾಪಾರಿಗಳು ಸಗಟು ವ್ಯಾಪಾರಿಗಳಿಂದ ಖರೀದಿಸಿ, ಅವರ ಮಳಿಗೆಗಳಿಗೆ ಕೊಂಡೊಯ್ದರು. ಕೆಲವರು ತಳ್ಳುಗಾಡಿಗಳಲ್ಲಿ ಮಾರಾಟಕ್ಕೆ ತೆರಳಿದರು.

ಸಂಪೂರ್ಣವಾಗಿ ಲಾಕ್‌ಡೌನ್‌ ತೆರವುಗೊಳಿಸಿದರೂ ಸಹ ತರಕಾರಿ ವ್ಯಾಪಾರಿಗಳಿಗೆ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಿಲ್ಲ. ಹೀಗಾಗಿ ಅವರು ಎಂದಿನಂತೆ ನಗರದ ದೀಪಾಯನ ಶಾಲೆ ಮೈದಾನ, ತಾಲ್ಲೂಕು ಕ್ರೀಡಾಂಗಣ, ಟಿ.ಬಿ. ಡ್ಯಾಂ ಕಾಲೇಜು ಮೈದಾನ, ಹಂಪಿ ರಸ್ತೆಯ ತಾತ್ಕಾಲಿಕ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಿದರು.

ಎರಡು ತಿಂಗಳ ನಂತರ ದೇವಸ್ಥಾನಗಳು ಬಾಗಿಲು ತೆರೆದಿರುವುದರಿಂದ ಹೂವಿನ ಮಳಿಗೆಗಳ ಎದುರು ಜನ ಕಂಡು ಬಂದರು. ಅವರಿಗಿಷ್ಟವಾದ ಹೂಮಾಲೆ, ಬಿಡಿಸಿದ ಹೂ ಖರೀದಿಸಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಎಲೆಕ್ಟ್ರಾನಿಕ್ಸ್‌, ಝರಾಕ್ಸ್‌, ಕನ್ನಡಕ, ಪುಸ್ತಕ ಮಳಿಗೆಗಳೆಲ್ಲ ಬಾಗಿಲು ತೆರೆದಿದ್ದವು. ಎಲ್ಲೆಡೆ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಜನಜಾತ್ರೆ ಕಂಡು ಬಂತು. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಇತ್ತು. ಹಲವೆಡೆ ಜನ ಅಂತರ ಕಾಯ್ದುಕೊಳ್ಳದೆ ವ್ಯವಹರಿಸುತ್ತಿರುವುದು ಗಮನಕ್ಕೆ ಬಂತು. ಆದರೆ, ಬಹುತೇಕರು ಮಾಸ್ಕ್‌ ಧರಿಸಿಕೊಂಡಿದ್ದರು.

ಬಾರ್‌ಗಳು ಕೂಡ ಸೋಮವಾರ ಬಾಗಿಲು ತೆರೆದಿವೆ. ಆದರೆ, ಮೊದಲ ದಿನ ಬೆರಳೆಣಿಕೆಯಷ್ಟು ಜನ ಕಂಡು ಬಂದರು. ದಿನ ಕಳೆದಂತೆ ಜನ ಬರುವುದು ಹೆಚ್ಚಾಗಬಹುದು ಎನ್ನುವುದು ಬಾರ್‌ ಮಾಲೀಕರ ಭರವಸೆ.ಇನ್ನು, ಜಿಲ್ಲೆಯ ಕೂಡ್ಲಿಗಿ, ಮರಿಯಮ್ಮನಹಳ್ಳಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿಯಲ್ಲೂ ಪರಿಸ್ಥಿತಿ ಸಂಪೂರ್ಣ ಸಹಜವಾಗಿತ್ತು. ಜನರ ಓಡಾಟ ಸಾಮಾನ್ಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT