ಬುಧವಾರ, ಜನವರಿ 20, 2021
22 °C

ಬಳ್ಳಾರಿ ವಿಭಜನೆ ನಿರ್ಣಯ ಹಿಂಪಡೆಯಲು ಆಗ್ರಹ: ಬೃಹತ್ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಜಿಲ್ಲೆಯ ವಿಭಜನೆಯ ನಿರ್ಣಯವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಅಖಂಡ ಬಳ್ಳಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಹತ್ತಾರು ಸಂಘಟನೆಗಳ ಸಾವಿರಾರು ಮಂದಿ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು.

'ಜನಾಭಿಪ್ರಾಯ ಪಡೆಯದೆ ಸರ್ವಾಧಿಕಾರಿ ಧೋರಣೆಯಿಂದ  ಸರ್ಕಾರವು  ಸಂಪುಟ ಸಭೆಯಲ್ಲಿ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನು ಸ್ಥಾಪಿಸಲು ನಿರ್ಧರಿಸಿದೆ. ಇದು ಗಡಿ ಭಾಗದ ಸಮಸ್ಯೆಗಳಿಗೆ ಇಂಬುಕೊಡುವ  ನಿರ್ಧಾರ' ಎಂದು ಮುಖಂಡರಾದ ಎಸ್. ಪನ್ನರಾಜ್, ದರೂರು ಪುರುಷೋತ್ತಮ ಗೌಡ, ಕುಡುತಿನಿ ಶ್ರೀನಿವಾಸ, ಕೆ.ಎರ್ರಿಸ್ವಾಮಿ, ಟಿ.ಜಿ.ವಿಠಲ್, ಸಿದ್ಮಲ್ ಮಂಜುನಾಥ್, ಬಿ.ಎಂ.ಪಾಟೀಲ ಆತಂಕ ವ್ಯಕ್ತಪಡಿಸಿದರು.

'ಮುಂದಿನ ದಿನಗಳಲ್ಲಿ ಭಾಷಾ ಸಂಘರ್ಷ, ಸಂಪನ್ಮೂಲಗಳ ಹಂಚಿಕೆಯಲ್ಲಿ ಅನ್ಯಾಯ, ಗಡಿ ಸಮಸ್ಯೆ, ಕರ್ನಾಟಕದ ಸಂಸ್ಕೃತಿಯ ಮೇಲೆ ಪ್ರಹಾರವೂ ಏರ್ಪಡಲಿದೆ' ಎಂದು ಆರೋಪಿಸಿದರು.

'ಸಾಂವಿಧಾನಿಕ ಹಕ್ಕಾಗಿರುವ ಸರ್ವರಿಗೆ ಸಮಬಾಳು ಸಮಪಾಲು ತತ್ವಕ್ಕೂ ಧಕ್ಕೆ ಬರಲಿದೆ. ಈಗಾಗಲೇ ವಿಭಜನೆಯಾಗಿರುವ ಜಿಲ್ಲೆಗಳಲ್ಲಿ, ತಾಲೂಕುಗಳಲ್ಲಿ ಅಭಿವೃದ್ಧಿ ಕುಂಠಿತ ಗೊಂಡಿದೆ ಎಂಬುದನ್ನು  ಸರ್ಕಾರದ ಅಂಕಿ-ಅಂಶಗಳೇ ಸೂಚಿಸುತ್ತವೆ' ಎಂದು ಪ್ರತಿಪಾದಿಸಿದರು.

'ಹೊಸ ಮತ್ತು ಹಳೆಯ ಜಿಲ್ಲೆಗಳ ಅಭಿವೃದ್ಧಿ ವಿಷಯದಲ್ಲಿ ವಿಫಲಗೊಂಡಿರುವ ಸರ್ಕಾರ ಬಳ್ಳಾರಿ ಜಿಲ್ಲೆಯ ವಿಭಜನೆ ಮಾಡಿ, ರಾಜಕೀಯ ಸ್ವಾರ್ಥವನ್ನು ಸಾಧಿಸಲು ಹೊರಟಿದೆಯಷ್ಟೇ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಹೀಗಾಗಿ ಬಳ್ಳಾರಿ ಜಿಲ್ಲೆಯ ವಿಭಜನೆಯ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು. ನಿರ್ಧಾರ ವಾಪಸ್ ಪಡೆಯದಿದ್ದರೆ ಹೋರಾಟ ಉಗ್ರ ಸ್ವರೂಪ ತಾಳುತ್ತದೆ' ಎಂದು ಎಚ್ಚರಿಕೆ ನೀಡಿದರು.

ಮೆರವಣಿಗೆಯು ನಗರದ ನಗರೂರು ನಾರಾಯಣರಾವ್ ಉದ್ಯಾನದಿಂದ, ಗಡಿಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ತೇರು ಬೀದಿ, ಬ್ರಾಹ್ಮಣರ ಬೀದಿ ಮೂಲಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊನೆಗೊಂಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು