ಬುಧವಾರ, ಜುಲೈ 6, 2022
22 °C

ನಿಂದನೆ, ಹಲ್ಲೆ ಯತ್ನ; ಕೆಪಿಸಿಸಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಜಿಲ್ಲೆಯ ಕಾಂಗ್ರೆಸ್‌ ಮುಖಂಡರಿಬ್ಬರ ಜಗಳ ಕೆಪಿಸಿಸಿಗೆ ತಲುಪಿದೆ.

ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರಿಗೆ ಪಕ್ಷದ ವಕ್ತಾರ ಸಿರಾಜ್‌ ಶೇಖ್‌ ವಿರುದ್ಧ ದೂರು ಸಲ್ಲಿಸಿದ್ದಾರೆ.

‘ಡಿ. 11ರಂದು ನಡೆದ ಪಕ್ಷದ ಸಭೆಯಲ್ಲಿ ಸಿರಾಜ್‌ ಶೇಕ್‌ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಲು ಮುಂದಾಗಿದ್ದರು. ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು’ ಎಂದು ಶಿವಯೋಗಿ ಅವರು ಶಿವಕುಮಾರಗೆ ಪತ್ರ ಬರೆದಿದ್ದಾರೆ.

‘ಪಕ್ಷದಲ್ಲಿ ವಿವಿಧ ರೀತಿಯ ಸ್ಥಾನಮಾನ ನೀಡಿದ್ದರೂ ಸಹ ಅವರು ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಶ್ರಮಿಸುತ್ತಿದ್ದಾರೆ. ಪಕ್ಷದ ಬಳ್ಳಾರಿ ನಗರ ಘಟಕದ ಅಧ್ಯಕ್ಷ ಮೊಹಮ್ಮದ್‌ ರಫೀಕ್‌ ಮೇಲೆಯೂ ಹಲ್ಲೆ ಯತ್ನ ನಡೆಸಿದ್ದಾರೆ. ಸ್ವತಃ ರಫೀಕ್‌ ಅವರೇ ಈ ವಿಷಯ ಗಮನಕ್ಕೆ ತಂದಿದ್ದಾರೆ. ಇವರ ಈ ವರ್ತನೆಯಿಂದ ಕಾರ್ಯಕರ್ತರ ಆತ್ಮಸ್ಥೈರ್ಯ ಕುಸಿಯುತ್ತಿದೆ’ ಎಂದು ದೂರಿದ್ದಾರೆ. ಈ ಸಂಬಂಧ ಶಿವಯೋಗಿ, ಸಿರಾಜ್‌ ಶೇಖ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ನಡೆದಿದ್ದೇನು?:

ನಗರಸಭೆ ಚುನಾವಣೆ ಸಂಬಂಧ ಡಿ. 11ರಂದು ನಗರದಲ್ಲಿ ಪಕ್ಷದ ಟಿಕೆಟ್‌ ಆಕಾಂಕ್ಷಿಗಳ ಸಭೆ ಏರ್ಪಡಿಸಲಾಗಿತ್ತು. ನಗರಸಭೆ 16ನೇ ವಾರ್ಡ್‌ಗೆ ಸೋಮಶೇಖರ್‌ ಬಣ್ಣದಮನೆ ಅವರ ಪತ್ನಿಗೆ ಪಕ್ಷದ ಟಿಕೆಟ್‌ ನೀಡಲು ನಿರ್ಧರಿಸಲಾಗಿತ್ತು. ಆದರೆ, ಸಿರಾಜ್‌ ಶೇಖ್‌ ಅವರು ಬಿಜೆಪಿ ಕಾರ್ಯಕರ್ತ ಕಲಂದರ ಅವರ ಪತ್ನಿ ಮುಮ್ತಾಜ್‌ ಅವರಿಗೆ ಕಾಂಗ್ರೆಸ್‌ ‘ಬಿ’ ಫಾರಂ ಕೊಡಿಸಿದ್ದಾರೆ. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಶಿವಯೋಗಿ ಆರೋಪಿಸಿದ್ದಾರೆ. ಅದರಿಂದ ಸಿಟ್ಟಿಗೆದ್ದ ಸಿರಾಜ್‌ ಶೇಕ್‌ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈ ಕೈ ಮಿಲಾಯಿಸಿದ್ದಾರೆ. ಬಳಿಕ ಪಕ್ಷದ ಮುಖಂಡರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದರು ಎಂದು ಗೊತ್ತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು