ಶುಕ್ರವಾರ, ಮಾರ್ಚ್ 5, 2021
17 °C
ಕುಡುತಿನಿ, ಕೊಟ್ಟೂರು ಪಟ್ಟಣ ಪಂಚಾಯ್ತಿ

ಹೆಚ್ಚಿದ ಕಾಂಗ್ರೆಸ್‌ ಬಲ, ಕೊಟ್ಟೂರು ಅತಂತ್ರ; ಜೆಡಿಎಸ್‌ಗೆ ಶೂನ್ಯ ಸ್ಥಾನ

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Deccan Herald

ಬಳ್ಳಾರಿ: ಜಿಲ್ಲೆಯ ಕೊಟ್ಟೂರು ಮತ್ತು ಕುಡುತಿನಿ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್‌ ಬಲ ಸಾಬೀತಾಗಿದೆ. ಆದರೂ ಕೊಟ್ಟೂರಿನಲ್ಲಿ ಅತಂತ್ರ ಪರಿಸ್ಥಿತಿ ಏರ್ಪಟ್ಟಿದೆ.

ಸೋಮವಾರ ಬೆಳಿಗ್ಗೆ 10ರ ವೇಳೆಗೆ ಫಲಿತಾಂಶ ಸಂಪೂರ್ಣ ಪ್ರಕಟಗೊಳ್ಳುವ ವೇಳೆಗೆ ಕಾಂಗ್ರೆಸ್‌ ಪಾಳೆಯದಲ್ಲಿ ಸಂಭ್ರಮ ಹೆಚ್ಚಿತ್ತು. ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಎರಡೂ ಕಡೆ ಹತ್ತಕ್ಕಿಂತ ಹೆಚ್ಚು ಸ್ಥಾನ ಗಳಿಸುವ ಎರಡೂ ಪಕ್ಷಗಳ ವಿಶ್ವಾಸ ಹುಸಿಯಾಗಿದೆ. ಆದರೆ, ಕಾಂಗ್ರೆಸ್‌ ಶಾಸಕರಾದ ಹಗರಿಬೊಮ್ಮನಹಳ್ಳಿಯ ಎಸ್‌ಬಿಪಿ ಭೀಮಾನಾಯ್ಕ ಮತ್ತು ಸಂಡೂರಿನ ಈ.ತುಕಾರಾಂ ಅವರ ಪರಿಶ್ರಮವೂ ಫಲಿತಾಂಶದ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಕುಡುತಿನಿ ಸಂಡೂರು ಕ್ಷೇತ್ರಕ್ಕೆ, ಕೊಟ್ಟೂರು ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ಸೇರಿದೆ.

ಇವೆರಡರ ನಡುವೆ ಜಿಲ್ಲೆಯಲ್ಲಿ ಒಂದೂ ಸ್ಥಾನವನ್ನು ಪಡೆಯಲಾಗದ ಜೆಡಿಎಸ್‌, ಮತ್ತೊಮ್ಮೆ ಸಂಘಟನೆಯ ಬಲದ ಕೊರತೆಯಲ್ಲಿ ಮೌನಕ್ಕೆ ಶರಣಾಗಿದೆ.
ಎರಡನೇ ಸ್ಥಾನದಲ್ಲಿ ನಿಂತರೂ ಬಿಜೆಪಿ ಎರಡೂ ಪಂಚಾಯ್ತಿಗಳಲ್ಲಿ ಕಾಂಗ್ರೆಸ್‌ ಅನ್ನು ಹಿಂದಿಕ್ಕಿ ಅಧಿಕಾರ ಪಡೆಯುವುದು ಹೇಗೆ ಎಂಬುದರತ್ತ ಗಮನ ಹರಿಸಿದೆ. ಕೊಟ್ಟೂರಿನಲ್ಲಿ ಏರ್ಪಟ್ಟಿರುವ ಅತಂತ್ರ ಸನ್ನಿವೇಶವೂ ಅದಕ್ಕೆ ಪೂರಕವಾಗಿಯೇ ಇದೆ.

ಪಕ್ಷೇತರರೇ ನಿರ್ಣಾಯಕ: ಕೊಟ್ಟೂರಿನ 20 ವಾರ್ಡ್‌ಗಳ ಪೈಕಿ 8ರಲ್ಲಿ ಬಿಜೆಪಿ ಗೆದ್ದಿದೆ. ಅದಕ್ಕಿಂತ ಒಂದು ಹೆಚ್ಚು ಸ್ಥಾನ ಕಾಂಗ್ರೆಸ್‌ನಲ್ಲಿದೆ. ಉಳಿದ ಮೂವರು ಪಕ್ಷೇತರರನ್ನು ಸೆಳೆದು ಅಧಿಕಾರದ ಚುಕ್ಕಾಣಿ ಹಿಡಿಯುವ ಕಾತರದಲ್ಲಿ ಎರಡೂ ಪಕ್ಷಗಳಿವೆ. ಹೀಗಾಗಿ ಇಲ್ಲಿ ಪಕ್ಷೇತರರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಕುಡುತಿನಿಯ 19 ವಾರ್ಡ್‌ಗಳ ಪೈಕಿ 11ರಲ್ಲಿ ಕಾಂಗ್ರೆಸ್‌ ಗೆದ್ದು ಬಹುಮತವನ್ನು ಗಳಿಸಿಕೊಂಡಿದೆ. 18 ವಾರ್ಡ್‌ಗಳಲ್ಲಷ್ಟೇ ಸ್ಪರ್ಧಿಸಿದ್ದ ಬಿಜೆಪಿ 8ರಲ್ಲಿ ಗೆದ್ದಿದೆ. ಕುಡುತಿನಿ ಗ್ರಾಮ ಪಂಚಾಯ್ತಿಯಾಗಿದ್ದಾಗಲೂ ಇಲ್ಲಿ ಕಾಂಗ್ರೆಸ್‌ ಬಲವೇ ಹೆಚ್ಚಿತ್ತು.

ಶಾಸಕ ತುಕಾರಂ ಬೆದರಿಕೆ: ಆರೋಪ

ಬಳ್ಳಾರಿ: ಕಾಗ್ರೆಸ್‌ನ ತಂತ್ರಗಳ ಪರಿಣಾಮವಾಗಿಯೇ ಕುಡುತಿನಿಯಲ್ಲಿ ಬಿಜೆಪಿಯು ಆಯ್ಕೆ ಮಾಡಿದ್ದ ಕೆಲವು ಅಭ್ಯರ್ಥಿಗಳು ಕಣಕ್ಕೆ ಇಳಿಯಲು ಹಿಂಜರಿದಿದ್ದರು.
‘‘ನಮ್ಮ ಅಭ್ಯರ್ಥಿಗಳನ್ನು ಕಾಂಗ್ರೆಸ್‌ ಶಾಸಕ ಈ ತುಕಾರಾಂ ಖುದ್ದು ಭೇಟಿ ಮಾಡಿ ಕಣದಿಂದ ಹಿಂದೆ ಸರಿಯುವಂತೆ ಬೆದರಿಸುತ್ತಿದ್ದರು. ಕೊನೇ ಕ್ಷಣದಲ್ಲಿ ಕೈಗೆ ಸಿಕ್ಕವರನ್ನು ನಾವು ಕಣಕ್ಕೆ ಇಳಿಸಬೇಕಾಯಿತು. ಹೀಗಾಗಿಯೇ ನಾವು ಹೆಚ್ಚು ಸ್ಥಾನಗಳನ್ನು ಗಳಿಸಲು ಆಗಲಿಲ್ಲ. 9ನೇ ವಾರ್ಡಿನಲ್ಲಿ ನಮಗೆ ಅಭ್ಯರ್ಥಿಯೇ ಇರಲಿಲ್ಲ’ ಎಂಬುದು ಬಿಜೆಪಿ ಕುಡುತಿನಿ ಶಕ್ತಿ ಕೇಂದ್ರದ ಅಧ್ಯಕ್ಷ ಹಾಗೂ 11ನೇ ವಾರ್ಡಿನಲ್ಲಿ ಗೆದ್ದಿರುವ ಜಿ.ಎಸ್‌.ವೆಂಕಟರಮಣ (ಬಾಬು) ಅವರ ಮಾತು.

13ನೇ ವಾರ್ಡ್‌ ಕಾಂಗ್ರೆಸ್‌ ತೆಕ್ಕೆಗೆ

ಬಳ್ಳಾರಿ: ಕೇವಲ 57 ಮತಗಳಿರುವ ಕುಡುತಿನಿಯ 13ನೇ ವಾರ್ಡ್‌ನಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್‌ನ ರಾಮಲಿಂಗಪ್ಪ ಗೆದ್ದರು.

ಅಲ್ಲಿ 30ಕ್ಕೂ ಹೆಚ್ಚು ಮತದಾರರನ್ನು ಕಾಂಗ್ರೆಸ್‌ ಮುಖಂಡರು ತಮ್ಮೊಂದಿಗೇ ಇರಿಸಿಕೊಂಡು ಏಕಕಾಲಕ್ಕೆ ಮತಗಟ್ಟೆಗೆ ಕರೆತಂದಿದ್ದರು. ಅವರೆಲ್ಲರೂ ಕಾಂಗ್ರೆಸ್‌ಗೇ ಮತ ನೀಡಲಿದ್ದಾರೆ ಎಂದೂ ಮುಖಂಡರು ಸುದ್ದಿಗಾರರಿಗೆ ಮತದಾನದ ದಿನವೇ ತಿಳಿಸಿದ್ದರು. ಅವರು ಹೇಳಿದಂತೆಯೇ ನಡೆದು ಗೊಲ್ಲ ಸಮುದಾಯದ ರಾಮಲಿಂಗಪ್ಪ ಗೆದ್ದರು.

 

 

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು