ಕೂರಿಗೆ ಬಿತ್ತನೆ ಬಗ್ಗೆ ರೈತರು ಜಾಗೃತರಾಗಬೇಕು: ಕೃಷಿ ಸಚಿವ ಶಿವಶಂಕರ ರೆಡ್ಡಿ ಕರೆ

7

ಕೂರಿಗೆ ಬಿತ್ತನೆ ಬಗ್ಗೆ ರೈತರು ಜಾಗೃತರಾಗಬೇಕು: ಕೃಷಿ ಸಚಿವ ಶಿವಶಂಕರ ರೆಡ್ಡಿ ಕರೆ

Published:
Updated:
Prajavani

ಬಳ್ಳಾರಿ: ರೈತರು ಹೆಚ್ಚಿಗೆ ನೀರು ಅವಲಂಬಿಸದ ಕೂರಿಗೆ ಭತ್ತ ಬಿತ್ತನೆಗೆ ಒತ್ತು ಕೊಡಬೇಕು ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದರು.

ತಾಲ್ಲೂಕಿನ ಕೋರ್ಲಗುಂದಿಯಲ್ಲಿ ಶನಿವಾರ ಏರ್ಪಡಿಸಿದ್ದ ಗುಲಾಬಿ ಕಾಯಿಕೊರಕ ನಿವಾರಣಾ ಆಂದೋಲನ ಮತ್ತು ಕೂರಿಗೆ ಭತ್ತ ಬಿತ್ತನೆ ಫಲಶ್ರುತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೂರಿಗೆ ಭತ್ತ ಬಿತ್ತನೆಯಿಂದ ನೀರು ಉಳಿತಾಯವಾಗುವುದಲ್ಲದೇ, ಹೆಚ್ಚಿನ ಇಳುವರಿ ರೈತರ ಕೈ ಸೇರಲಿದೆ. ಅಧಿಕಾರಿಗಳು ಸಹ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಈ ಮುಂಚೆ 200 ಹೆಕ್ಟೇರ್ ಇದ್ದ ಕೂರಿಗೆ ಭತ್ತದ ಕ್ಷೇತ್ರದ ವ್ಯಾಪ್ತಿ ಅಧಿಕಾರಿಗಳ ಕಾರ್ಯವೈಖರಿಯಿಂದ 10 ಸಾವಿರಕ್ಕೂ ಹೆಚ್ಚಾಗಿದೆ. ರಾಜ್ಯದಾದ್ಯಂತ ಕೂರಿಗೆ ಭತ್ತ ಕ್ಷೇತ್ರ ವ್ಯಾಪ್ತಿ ಹೆಚ್ಚಿಸಲು ಅಧಿಕಾರಿಗಳು ರೈತರಲ್ಲಿ ಅರಿವು ಮೂಡಿಸಬೇಕು. ಕಳೆದ 3 ವರ್ಷಗಳಿಂದ ಹತ್ತಿಗೆ ಗುಲಾಬಿ ಕಾಯಿಕೋಶ ಹುಳು ಸುತ್ತಮುತ್ತಲಿನ ರಾಜ್ಯಗಳಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವುದರಿಂದ ನಮ್ಮಲ್ಲಿ ಆತಂಕವಾಗಿತ್ತು. ಈ ಹುಳು ನಿಯಂತ್ರಣಕ್ಕೆ ರೈತಸಮುದಾಯಕ್ಕೆ ಅಗತ್ಯ ಮಾಹಿತಿ ಒದಗಿಸಿ, ಸಮರ್ಪಕ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಹತ್ತಿ ಬೆಳೆಗೆ ಕಾಡುವ ಈ ಹುಳು ನಿಯಂತ್ರಣ ಮಾಡಿ ಮತ್ತೆ ಬರದಂತೆ ತಡೆಗಟ್ಟುಲು ಕೃಷಿ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು, ರಸಗೊಬ್ಬರ, ಕೀಟನಾಶಕ ಮತ್ತು ಬೀಜ ತಯಾರಿಕಾ ತಂಡಗಳು ಹೀಗೆ 14 ತಂಡಗಳನ್ನು ರಚಿಸಿ ಪ್ರತಿದಿನ ಸಂಜೆ 4ಕ್ಕೆ ಗ್ರಾಮಗಳಿಗೆ ಭೇಟಿ ನೀಡಿ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

ಕೃಷಿ ಪದ್ಧತಿ ಮತ್ತು ಸಾವಯವ ಕೃಷಿಗೆ ಒತ್ತು ನೀಡುವ ಅಗತ್ಯತೆ ಹಾಗೂ ಇಸ್ರೆಲ್ ಕೃಷಿ ಪದ್ದತಿ ಸೇರಿದಂತೆ ವಿವಿಧ ರೀತಿಯ ವಿಚಾರಗಳನ್ನು ರೈತರೊಂದಿಗೆ ಸಚಿವರು ಚರ್ಚಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರಮೀಜಾ ಬೀ, ಕೃಷಿ ವಿಜ್ಞಾನಿಗಳು, ಕೃಷಿ ಇಲಾಖೆಯ ಸಿಬ್ಬಂದಿ, ಕೃಷಿಕ ಸಮಾಜದ ಅಧ್ಯಕ್ಷರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !