ಬುಧವಾರ, ಆಗಸ್ಟ್ 17, 2022
26 °C
ಹೈಕೋರ್ಟ್‌ ನ್ಯಾಯಮೂರ್ತಿ ಎನ್‌.ಕೆ. ಸುಧೀಂದ್ರರಾವ್‌

ವಕೀಲರ ಓದಿನ ಹರವು ಹೆಚ್ಚಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ವಕೀಲಿ ವೃತ್ತಿಯಲ್ಲಿ ತೊಡಗಿರುವ ವಕೀಲರು ಓದಿನ ಹರವು ಹೆಚ್ಚಿಸಿಕೊಳ್ಳಬೇಕು’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎನ್‌.ಕೆ. ಸುಧೀಂದ್ರರಾವ್‌ ತಿಳಿಸಿದರು.

ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ, ಹೊಸಪೇಟೆ ವಕೀಲರ ಸಂಘದ ಸಹಭಾಗಿತ್ವದಲ್ಲಿ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ವಕೀಲರ ಸಂಘದ ಒಂದು ಮತ್ತು ಎರಡನೇ ಕಟ್ಟಡದ ವರ್ಚುವಲ್‌ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

‘ಹಿಂದೆ ವಕೀಲಿ ವೃತ್ತಿ ಮಾಡುವವರಿಗೆ ಹೆಚ್ಚಿನ ಸವಲತ್ತುಗಳಿರಲಿಲ್ಲ. ಗೌರವವೂ ಇರಲಿಲ್ಲ. ಆರ್ಥಿಕ ಮುಗ್ಗಟ್ಟು ಬಾಧಿಸುತ್ತಿತ್ತು. ಈಗ ವಕೀಲರಿಗೆ ದೊಡ್ಡ ಗೌರವ ಬಂದಿದೆ. ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಬೇರೆ ಕ್ಷೇತ್ರಗಳಿಗಿಂತ ಈ ಕ್ಷೇತ್ರಕ್ಕೆ ಹೆಚ್ಚು ಬೇಡಿಕೆ ಬಂದಿದೆ. ವಕೀಲರು ಪರೀಕ್ಷೆಗಷ್ಟೇ ಓದಿದರೆ ಸಾಲದು. ಹಗಲು–ರಾತ್ರಿ ಓದಿ ಜ್ಞಾನ ವಿಸ್ತರಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಒಂದು ಪ್ರಕರಣ ಇತ್ಯರ್ಥಗೊಂಡರೆ ಕೇವಲ ನ್ಯಾಯಾಧೀಶರೊಬ್ಬರಿಗೆ ಅದರ ಕೀರ್ತಿ ಸಲ್ಲುವುದಿಲ್ಲ. ಅಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ, ಸ್ಟೆನೊಗ್ರಾಫರ್‌, ಕಂಪ್ಯೂಟರ್‌ ಆಪರೇಟರ್, ವಕೀಲರು ಸೇರಿದಂತೆ ಎಲ್ಲರಿಗೂ ಸಲ್ಲುತ್ತದೆ. ಈ ಕ್ಷೇತ್ರದಲ್ಲಿ ಇರುವವರಿಗೆ ತಾಳ್ಮೆ ಇರುವುದು ಬಹಳ ಮುಖ್ಯ’ ಎಂದರು.

‘ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ ಬದಲು ಕಾನೂನಿಗೆ ಸಂಬಂಧಿಸಿದ ಪುಸ್ತಕ ಕೊಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಇಂದು ಎಲ್ಲ ಮಾಹಿತಿ ಅಂಗೈನಲ್ಲೇ ಸಿಗುತ್ತಿದೆ. ಜಗತ್ತಿನ ಯಾವ ದೇಶದ ಸಂವಿಧಾನ, ಕಾನೂನಿನ ಬಗ್ಗೆಯಾದರೂ ಓದಿ ತಿಳಿದುಕೊಳ್ಳಬಹುದು. ಅದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

‘ವಿಜಯನಗರ ಸಾಮ್ರಾಜ್ಯದ ಹಂಪಿ, ತುಂಗಭದ್ರಾ ಸೇರಿದಂತೆ ಹಲವು ವೈಶಿಷ್ಟ್ಯಗಳಿಂದ ಬಳ್ಳಾರಿ ಜಿಲ್ಲೆ ಕೂಡಿದೆ. ನಾಡಿಗೆ ಬಳ್ಳಾರಿ ಜಿಲ್ಲೆಯ ಕೊಡುಗೆ ದೊಡ್ಡದು. ಈ ಹಿಂದೆ ಬಳ್ಳಾರಿಯಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶನಾಗಿ ಕೆಲಸ ಮಾಡಿರುವೆ’ ಎಂದು ನೆನೆದರು.

ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಜೆ.ಎಂ. ಅನಿಲ್‌ ಕುಮಾರ್‌, ಬಳ್ಳಾರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಸ್‌.ಎಚ್‌. ಪುಷ್ಪಾಂಜಲಿ ದೇವಿ, ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಜಶೇಖರ್‌, ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಕೆ. ಕೋಟೇಶ್ವರ್‌ ರಾವ್‌, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ಪ್ರಧಾನ ಕಾರ್ಯದರ್ಶಿ ಜಿ. ಕೊಟ್ರಗೌಡ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಅಬ್ದುಲ್‌ ವಹಾಬ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು