ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮವರಾಗಿದ್ದರೆ ಉತ್ಸವಕ್ಕೆ ಆಸಕ್ತಿ ತೋರುತ್ತಿದ್ದರು: ಶಾಸಕ ಆನಂದ್‌ ಸಿಂಗ್‌

ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಕಾಲೆಳೆದ ಶಾಸಕ ಆನಂದ್‌ ಸಿಂಗ್‌
Last Updated 25 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಹೊಸಪೇಟೆ: ‘ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮವರಾಗಿದ್ದರೆ ‘ಹಂಪಿ ಉತ್ಸವ’ದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರು’ ಎಂದು ಹೇಳುವ ಮೂಲಕ ಶಾಸಕ ಆನಂದ್‌ ಸಿಂಗ್‌ ಅವರು ಪರೋಕ್ಷವಾಗಿ ಸಚಿವ ಲಕ್ಷ್ಮಣ ಸವದಿ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ.

ಬುಧವಾರ ಸಂಜೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಲಕ್ಷ್ಮಣ ಸವದಿ ಅವರು ಉತ್ಸವದ ಯಶಸ್ಸಿಗೆ ಪ್ರಯತ್ನಿಸುತ್ತಿದ್ದಾರೆ. ಸರ್ಕಾರದ ಕಾರ್ಯಕ್ರಮ, ಹೆಚ್ಚಿನ ಜವಾಬ್ದಾರಿ ಅವರ ಮೇಲಿರುವುದರಿಂದ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಆಗುತ್ತಿಲ್ಲ. ನನಗೆ ಯಾವುದಾದರೂ ಜವಾಬ್ದಾರಿ ಕೊಟ್ಟರೆ ಅದನ್ನು ನಿರ್ವಹಿಸುವೆ’ ಎಂದು ಹೇಳಿದರು.

‘ಇತ್ತೀಚೆಗೆ ನಡೆದ ಉಪಚುನಾವಣೆ, ಪೌರತ್ವ ತಿದ್ದುಪಡಿ ಕಾಯ್ದೆ ಗೊಂದಲಗಳಿಂದ ಉತ್ಸವದ ಸಂಪೂರ್ಣ ಜವಾಬ್ದಾರಿ ಜಿಲ್ಲಾಡಳಿತಕ್ಕೆ ವಹಿಸಲಾಗಿದೆ. ನ. 3ರಿಂದ 5ರ ವರೆಗೆ ‘ಹಂಪಿ ಉತ್ಸವ’ ನಿರಂತರವಾಗಿ ನಡೆಯಲು ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಬೇಕು. ಬಜೆಟ್‌ ನಿಗದಿ ಪಡಿಸಬೇಕು ಎಂಬ ಬೇಡಿಕೆ ಇದೆ. ಈ ಕುರಿತು ಸಂಬಂಧಿಸಿದವರ ಜೊತೆ ಸಮಾಲೋಚಿಸಿ, ಅದನ್ನು ಕಾರ್ಯರೂಪಕ್ಕೆ ತರಲು ಶ್ರಮಿಸುವೆ’ ಎಂದರು.

‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರಿಗೂ ತೊಂದರೆಯಿಲ್ಲ. ಅದರ ಬಗ್ಗೆ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಅದರಿಂದಾಗಿ ದೇಶದಲ್ಲಿ ಗೊಂದಲ ಉಂಟಾಗಿರುವುದರಿಂದ ಸರ್ಕಾರ ಅದರತ್ತ ಗಮನ ಹರಿಸಿದೆ. ಸರ್ಕಾರ ಯೋಜನೆಗಳು, ಕೆಲಸಕ್ಕೆ ಹಿನ್ನಡೆಯಾಗಿದೆ. ಬರುವ ಜನವರಿ 14ರ ನಂತರ ಮಂತ್ರಿ ಮಂಡಲ ರಚನೆಯಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

ನಗರಸಭೆ ಗೆಲ್ಲಲು ಶ್ರಮ:

‘ನಾನು ಈ ಹಿಂದೆ ಮೂರು ಸಲ ಶಾಸಕನಾದರೂ ಹೊಸಪೇಟೆ ನಗರಸಭೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಾಗಿಲ್ಲ. ಈ ಸಲ ಒಟ್ಟು 35 ಸ್ಥಾನಗಳ ಪೈಕಿ ಕನಿಷ್ಠ 25ರಿಂದ 27 ಸ್ಥಾನಗಳಲ್ಲಿ ಗೆದ್ದು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವೆ. ಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್‌ ಕೊಟ್ಟರೂ ಅದನ್ನು ಸ್ವಾಗತಿಸಿ, ಅವರ ಗೆಲುವಿಗೆ ದುಡಿಯಬೇಕು’ ಎಂದರು.

‘ಎಲ್ಲರ ಸಹಮತ, ಬಹುಮತದಿಂದ ಬಸವರಾಜ ನಾಲತ್ವಾಡ ಅವರು ಬಿಜೆಪಿ ಮಂಡಲ ಅಧ್ಯಕ್ಷರಾಗಿದ್ದಾರೆ. ಅನೇಕ ಜನ ಆಕಾಂಕ್ಷಿಗಳಿದ್ದರು. ಯಾರಿಗೆ ಆ ಸ್ಥಾನ ಕೈತಪ್ಪಿದೆಯೋ ಅವರು ಅಸಮಾಧಾನಗೊಳ್ಳಬೇಕಿಲ್ಲ. ಪಕ್ಷ ಕೆಲಸವನ್ನು ಗುರುತಿಸಿ ಸೂಕ್ತ ಸಂದರ್ಭದಲ್ಲಿ ಉತ್ತಮ ಸ್ಥಾನಮಾನ ನೀಡಲಿದೆ’ ಎಂದು ತಿಳಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ನಾಲತ್ವಾಡ, ಮುಖಂಡರಾದ ಅಶೋಕ್‌ ಜೀರೆ, ಅನಂತ ಪದ್ಮನಾಭ, ಸಾಲಿ ಸಿದ್ದಯ್ಯ ಸ್ವಾಮಿ, ಶಶಿಧರ್‌ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT