ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರ ಪ್ರಶ್ನೆಗೆ ವಿಚಲಿತರಾದ ನಾಯಕರು

Last Updated 13 ಫೆಬ್ರುವರಿ 2021, 10:24 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ ಜಿಲ್ಲೆ): ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ ಕುರಿತು ಮಾಹಿತಿ ಹಂಚಿಕೊಳ್ಳಲು ಶನಿವಾರ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರಿಂದ ಎದುರಾದ ಸಾಲು ಸಾಲು ಪ್ರಶ್ನೆಗಳಿಗೆ ಬಿಜೆಪಿ ನಾಯಕರು ತಡಬಡಾಯಿಸಿ ವಿಚಲಿತರಾದರು.

‘ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ರೈತರು, ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ಘೋಷಿಸಿದೆ’ ಎಂದು ವಿಜಯನಗರ ಜಿಲ್ಲೆ ಬಿಜೆಪಿ ವಿಭಾಗ ಸಹ ಪ್ರಭಾರಿ ಕೆ. ನೇಮಿರಾಜ ನಾಯ್ಕ ಹೇಳಿದರು.

ಅವರು ಮಾತು ಮುಗಿಸಿದಂತೆ ಪತ್ರಕರ್ತರು, ‘ಪೆಟ್ರೋಲ್‌ ಬೆಲೆ ದಿನೇ ದಿನೇ ಗಗನಕ್ಕೆ ಏರುತ್ತಿದೆ. ಅಡುಗೆ ಎಣ್ಣೆ, ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಬಿಜೆಪಿಯ ಸರ್ಕಾರವಿದೆ. ರಾಜ್ಯದಿಂದ ಬಿಜೆಪಿಯ 25 ಸಂಸದರು ಆರಿಸಿ ಹೋಗಿದ್ದಾರೆ. ಹೀಗಿದ್ದರೂ ಕರ್ನಾಟಕವನ್ನು ಕಡೆಗಣಿಸಿ ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಇತರೆ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ನೆರೆ ಪರಿಹಾರವೂ ಇದುವರೆಗೆ ಎಲ್ಲರಿಗೂ ಸಿಕ್ಕಿಲ್ಲ. ಕೇಂದ್ರ ಸರ್ಕಾರ ರಾಜ್ಯವನ್ನು ಕಡೆಗಣಿಸುತ್ತಿರುವುದೇಕೇ? ಹೀಗೆ ಸಾಲು ಸಾಲು ಪ್ರಶ್ನೆಗಳು ಕೇಳಿದರು. ಅದರಿಂದ ನೇಮಿರಾಜ ನಾಯ್ಕ ಸೇರಿದಂತೆ ಬಿಜೆಪಿಯ ಇತರೆ ನಾಯಕರು ಏನನ್ನೂ ಉತ್ತರಿಸಲಾಗದೆ ವಿಚಲಿತರಾದರು.

ಈ ವೇಳೆ ಮಧ್ಯ ಪ್ರವೇಶಿಸಿದ ಮೂಲಸೌಕರ್ಯ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್‌ ಮಾತನಾಡಿ, ‘ಎಲ್ಲ ರಾಜ್ಯಗಳಿಗೂ ಸರಿಸಮಾನವಾಗಿ ಅನುದಾನ ಹಂಚಿಕೆ ಮಾಡಲು ಆಗುವುದಿಲ್ಲ. ಕೆಲವೊಮ್ಮೆ ಸ್ವಲ್ಪ ಹೆಚ್ಚು ಕಮ್ಮಿಯಾಗುತ್ತದೆ. ತಮಿಳುನಾಡಿನಲ್ಲಿ ಬಿಜೆಪಿಯ ಒಬ್ಬ ಸಂಸದ ಕೂಡ ಇರದಿದ್ದರೂ ಆ ರಾಜ್ಯಕ್ಕೆ ಹೆಚ್ಚು ಅನುದಾನ ಸಿಕ್ಕಿದೆ ಎಂದರೆ ಕೇಂದ್ರ ಸರ್ಕಾರದ ದೊಡ್ಡ ಗುಣ ಎಂದು ತಿಳಿಯಬೇಕು’ ಎಂದರು.

‘ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ ಅದು ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಬೇಕು. ತೈಲ ದರ ಸತತವಾಗಿ ಏರಿಕೆಯಾಗುತ್ತಿರುವ ಕುರಿತು ರಾಷ್ಟ್ರೀಯ ನಾಯಕರ ಗಮನಕ್ಕೆ ತರಲಾಗುವುದು. ರಾಜ್ಯದ ಯೋಜನೆಗಳ ಕುರಿತು ನಮ್ಮ ಸಂಸದರು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಈ ವರ್ಷ ರಾಜ್ಯಕ್ಕೆ ಅನುದಾನ ಕಡಿಮೆ ಬಂದಿರಬಹುದು. ಆದರೆ, ಮುಂದಿನ ವರ್ಷ ಹೆಚ್ಚು ಬರಬಹುದು’ ಎಂದು ಸಮರ್ಥಿಸಿಕೊಂಡರು.

‘ಕೇಂದ್ರ ಸರ್ಕಾರ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಕಾಂಗ್ರೆಸ್ಸಿಗರು ದಿಕ್ಕು ತಪ್ಪಿಸುತ್ತಿದ್ದಾರೆ. ದಿಕ್ಕು ತಪ್ಪಿಸುತ್ತಿರುವವರಿಗೆ ಜನರೇ ತಕ್ಕ ಪಾಠ ಕಲಿಸುವರು. ಬಿಜೆಪಿಯನ್ನು ವಿರೋಧಿಸಲು ವಿರೋಧಿಗಳ ಬಳಿ ಯಾವುದೇ ವಿಷಯವೇ ಇಲ್ಲ’ ಎಂದು ನೇಮಿರಾಜ ನಾಯ್ಕ ಹೇಳಿದರು. ಮುಖಂಡರಾದ ಬಸವರಾಜ ನಾಲತ್ವಾಡ, ಅಯ್ಯಾಳಿ ತಿಮ್ಮಪ್ಪ, ಅನಂತ ಪದ್ಮನಾಭ, ಕಟಗಿ ರಾಮಕೃಷ್ಣ ಇದ್ದರು.

***

ಪೆಟ್ರೋಲ್‌, ಡೀಸೆಲ್‌ ದರ ಸತತ ಏರಿಕೆಯಾಗುತ್ತಿದ್ದರೂ ಮೋದಿಯವರು ಸುಮ್ಮನಿದ್ದಾರೆ ಅಂದರೆ ಅವರ ಆಲೋಚನೆ ಏನಿದೆಯೋ ಗೊತ್ತಿಲ್ಲ. ಇನ್ನೂ ಸ್ವಲ್ಪ ದಿನ ಕಾದು ನೋಡೋಣ.
–ಆನಂದ್‌ ಸಿಂಗ್‌, ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT