ಭಾರತ್ ಬಂದ್: ರೊಚ್ಚಿಗೆದ್ದ ಪ್ರತಿಭಟನಾಕಾರರ ಬಂಧನ

7
ಎರಡನೆ ದಿನವೂ ರಸ್ತೆಗಿಳಿಯದ ಬಸ್ಸುಗಳು; ವ್ಯಾಪಾರ ವಹಿವಾಟು ಸಹಜ

ಭಾರತ್ ಬಂದ್: ರೊಚ್ಚಿಗೆದ್ದ ಪ್ರತಿಭಟನಾಕಾರರ ಬಂಧನ

Published:
Updated:
Prajavani

ಹೊಸಪೇಟೆ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕರೆ ಕೊಡಲಾಗಿದ್ದ ಭಾರತ ಬಂದ್‌ಗೆ ಎರಡನೇ ದಿನ ಬುಧವಾರ ಇಲ್ಲಿ ಹೇಳಿಕೊಳ್ಳುವಂತಹ ಬೆಂಬಲ ಸಿಗಲಿಲ್ಲ.

ಬೆಳಿಗ್ಗೆ ಎಂದಿನಂತೆ ಸಾರಿಗೆ ಸಂಸ್ಥೆಯ ಬಸ್ಸುಗಳು ರಸ್ತೆಗೆ ಇಳಿದಿದ್ದವು. ಮ್ಯಾಕ್ಸಿಕ್ಯಾಬ್‌, ಆಟೊ ಸಂಚಾರ ಶುರುವಾಗಿತ್ತು. ಅಂಗಡಿ ಮುಗ್ಗಟ್ಟು, ಹೋಟೆಲ್‌ಗಳು ತೆರೆದಿದ್ದವು. ಬಂದ್‌ಗೆ ಕರೆ ಕೊಟ್ಟಿದ್ದ ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಬೆಳಿಗ್ಗೆ 9ಕ್ಕೆ ಕೇಂದ್ರ ಬಸ್‌ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ್ದರಿಂದ ಬಸ್‌ ಸಂಚಾರ ಸ್ಥಗಿತಗೊಳಿಸಲಾಯಿತು. ದೈನಂದಿನ ಕೆಲಸಗಳಿಗೆ ಹೋಗುವವರು ತೀವ್ರ ತೊಂದರೆ ಅನುಭವಿಸಿದರು. ಕೆಲವರು ಖಾಸಗಿ ವಾಹನಗಳಲ್ಲಿ ತೆರಳಿದರೆ, ಕೆಲವರು ಮನೆಗೆ ಹಿಂತಿರುಗಿದರು.

ಬ್ಯಾಂಕುಗಳು, ಅಂಗಡಿ, ಹೋಟೆಲ್‌ಗಳನ್ನು ಕಾರ್ಯಕರ್ತರು ಮುಚ್ಚಿಸಿದರಾದರೂ ಕೆಲಹೊತ್ತಿನ ನಂತರ ಮಾಲೀಕರು ಬಾಗಿಲು ತೆರೆದರು. ಎರಡು ದಿನ ಬಂದ್‌ ಎಂದು ಪ್ರಚಾರ ಕೈಗೊಂಡಿದ್ದರಿಂದ ಕೆಲವರು ದಿನವಿಡೀ ಅಂಗಡಿ ಮುಗ್ಗಟ್ಟುಗಳ ಬಾಗಿಲು ತೆರೆಯಲೇ ಇಲ್ಲ. ಸಿನಿಮಾ ಮಂದಿರ, ಪೆಟ್ರೋಲ್‌ ಬಂಕ್‌ಗಳು, ತರಕಾರಿ ಮಾರುಕಟ್ಟೆಯಲ್ಲಿ ಎಂದಿನಂತೆ ಕೆಲಸಗಳು ನಡೆದವು. ಪ್ರಮುಖ ರಸ್ತೆಗಳಲ್ಲಿ ಜನಸಂಚಾರ ಸಾಮಾನ್ಯವಾಗಿತ್ತು. ಜಿಲ್ಲಾ ಆಡಳಿತವು ಮಂಗಳವಾರವೇ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಅವುಗಳು ಮುಚ್ಚಿದ್ದವು. ಯಾರೊಬ್ಬರೂ ಆ ಕಡೆ ಸುಳಿಯಲಿಲ್ಲ.

ಬಸ್‌ ನಿಲ್ದಾಣದ ಎದುರು ಮಂಗಳವಾರ ಆರಂಭಿಸಿದ ಧರಣಿ ಬುಧವಾರವೂ ಮುಂದುವರೆಯಿತು. ಬಂದ್‌ಗೆ ಬೆಂಬಲ ಸೂಚಿಸಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಕೆಲಹೊತ್ತು ಧರಣಿಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯದ ವಿವಿಧ ಕಡೆಗಳಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರನ್ನು ಬಂಧಿಸಿದ ವಿಚಾರ ಗೊತ್ತಾಗುತ್ತಿದ್ದಂತೆ ಪ್ರತಿಭಟನಾಕಾರರು ಪ್ರತಿಭಟನಾ ರ್‍ಯಾಲಿ ನಡೆಸಿದರು. ನಗರದ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಮುಂದಾದರು. ಅವರನ್ನು ರೋಟರಿ ವೃತ್ತದಲ್ಲಿ ತಡೆದ ಪೊಲೀಸರು, ಬಂಧಿಸಿ ವ್ಯಾನ್‌ನಲ್ಲಿ ಕರೆದೊಯ್ದರು. ಈ ವೇಳೆ ನೂಕಾಟ, ತಳ್ಳಾಟ ಉಂಟಾಗಿತ್ತು. 

ಕಾರ್ಮಿಕ ಮುಖಂಡ ಕೆ.ಎಂ. ಸಂತೋಷ್‌ ಕುಮಾರ್‌ ಮಾತನಾಡಿ, ‘ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ. ಬಂಡವಾಳಷಾಹಿಗಳಿಗೆ ಮಣೆ ಹಾಕಿ, ಕಾರ್ಮಿಕರನ್ನು ಬೀದಿಗೆ ತರಲು ಹೊರಟಿದೆ. ಅದರ ಧೋರಣೆ ವಿರುದ್ಧ ಕರೆ ಕೊಟ್ಟಿದ್ದ ಎರಡು ದಿನಗಳ ಬಂದ್‌ಗೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದ’ ಎಂದು ತಿಳಿಸಿದರು.

‘ಸಂಜೆಯವರೆಗೆ ಪ್ರತಿಭಟನೆ ನಡೆಸಲು ಯೋಜಿಸಲಾಗಿತ್ತು. ಆದರೆ, ಪೊಲೀಸರು ರಾಜ್ಯದ ಅನೇಕ ಕಡೆಗಳಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರು, ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಪ್ರತಿಭಟನೆ ಹತ್ತಿಕ್ಕುವುದು ಪ್ರಜಾತಂತ್ರದಲ್ಲಿ ಸರಿಯಾದ ಬೆಳವಣಿಗೆಯಲ್ಲ. ಕೇಂದ್ರ ಸರ್ಕಾರ ಕಾರ್ಮಿಕರ ಪರವಾಗಿ ಕೆಲಸ ಮಾಡದಿದ್ದರೆ ಬರುವ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸಲಾಗುವುದು. ಉದ್ದೇಶಿತ ಮೋಟಾರ್‌ ವಾಹನ ತಿದ್ದುಪಡಿ ಮಸೂದೆ ಕೈಬಿಡಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಮುಖಂಡರಾದ ಕರುಣಾನಿಧಿ, ಜಂಬಯ್ಯ ನಾಯಕ, ಯಲ್ಲಾಲಿಂಗ, ಬಿಸಾಟಿ ಮಹೇಶ, ಪ್ರಭಾಕರ, ನಾಗರತ್ನಮ್ಮ, ಜಂಬಯ್ಯ ನಾಯಕ, ತಾಯಪ್ಪ ನಾಯಕ, ಮರಿಯಮ್ಮನಹಳ್ಳಿ ಶ್ರೀನಿವಾಸ, ಬಿ.ತಿಪ್ಪೇಸ್ವಾಮಿ, ವಿ.ಎಸ್.ಕೃಷ್ಣ, ಎಂ.ರಾಮರಾವ್, ಬಿ.ಪಾಲಯ್ಯ, ಕೆ.ಎಚ್.ನಾಗರತ್ನ, ಡಿ.ಆಶಾ ಲತಾ, ಶಿವುಕುಮಾರ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !