ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಳವರ್ಗದವರು, ಮುಸ್ಲಿಮರು ದೇಶದ ಶಕ್ತಿ: ಕುಂ. ವೀರಭದ್ರಪ್ಪ ಹೇಳಿಕೆ

Last Updated 6 ಮಾರ್ಚ್ 2022, 13:15 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಈ ದೇಶದ ದೊಡ್ಡ ಶಕ್ತಿಯೆಂದರೆ ಕೆಳವರ್ಗದವರು, ಮುಸ್ಲಿಮರು. ದೇಶ ವಿಭಜನೆ ಸಮಯದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಪಾಕಿಸ್ತಾನಕ್ಕೆ ಕರೆದಾಗ ಭಾರತೀಯ ಮುಸ್ಲಿಮರು ಹೋಗಲು ನಿರಾಕರಿಸಿದ್ದರು’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ ಸಂರಕ್ಷಣಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ದೆಹಲಿ ಕೋಟೆಯಲ್ಲಿ ಸ್ವಾತಂತ್ರ್ಯ ಹೋರಾಟದ ಹುತಾತ್ಮರ ಹೆಸರುಗಳಿವೆ. ಅದರಲ್ಲಿ ಶೇ 60ರಷ್ಟು ಮುಸ್ಲಿಮರು ಇದ್ದಾರೆ. ದೇಶ ಕೇವಲ ಒಬ್ಬರದಲ್ಲ. ಬಹುತ್ವ ಭಾರತ ನಮ್ಮದು. ಆಡಳಿತ ಪಕ್ಷದ ಕೆಲ ನಾಯಕರು ಪದೇ ಪದೇ ಮುಸ್ಲಿಮರನ್ನು ಬೈದು ಅವರ ಪಕ್ಷದ ಹೈಕಮಾಂಡ್ ತೃಪ್ತಿಪಡಿಸುವಲ್ಲಿ ನಿರತರಾಗಿರುವುದು ದುರಂತ ಎಂದರು.

ಡಾ. ಅಂಬೇಡ್ಕರ್ ಅವರನ್ನು ಅರಿಯದಿದ್ದರೆ ದೇಶವನ್ನು ಅರಿಯಲು ಸಾಧ್ಯವಿಲ್ಲ. ನಮ್ಮ ದೇಶ ಅನೇಕ ಧರ್ಮಗಳ ಒಕ್ಕೂಟವಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕುಲ ವ್ಯವಸ್ಥೆ, ಜ್ಯೋತಿಷ, ಜಾತಿ ವ್ಯವಸ್ಥೆ ವಿರುದ್ಧ ಮಾತನಾಡಿದರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿದಂತೆ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ತಿಳಿಸಿದರು.

ಕೊಲಂಬಿಯಾ ದೇಶದಲ್ಲಿ, ವಿಶ್ವಸಂಸ್ಥೆಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಇದೆ. ಆದರೆ ನಮ್ಮ ರಾಜ್ಯದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಕೆಲವರು ತಗಾದೆ ತೆಗೆಯುತ್ತಿರುವುದು ದೇಶದ್ರೋಹವೇ ಸರಿ. ಸಂವಿಧಾನದ ವಿರುದ್ಧವಾಗಿ ಕೆಲ ರಾಜಕಾರಣಿಗಳು ಹೇಳಿಕೆ ನೀಡುತ್ತಿದ್ದಾರೆ. ಆದರೆ, ಸಂವಿಧಾನ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಸಂವಿಧಾನ ಪೂರ್ವ ಪೀಠಿಕೆ ಬೋಧಿಸಿದ ಇಳಕಲ್ ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಸಂವಿಧಾನ ಇಲ್ಲದಿದ್ದರೆ ಕೆಳವರ್ಗದವರು ತಮ್ಮ ಪೂರ್ವಿಕರು ಮಾಡುತ್ತಿದ್ದ ಕಸುಬನ್ನೆ ಮುಂದುವರೆಸಬೇಕಿತ್ತು. ಜ್ಞಾನ ಇದ್ದರೂ ಅವಕಾಶ ಇರುತ್ತಿರಲಿಲ್ಲ. ಸಂವಿಧಾನ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದರು.

ಯಾವ ಧರ್ಮಗ್ರಂಥವೂ ಕೆಳವರ್ಗದವರನ್ನೂ ಎತ್ತರಕ್ಕೆ ಏರಿಸಲು ಹೇಳಿಲ್ಲ. ಸಂವಿಧಾನ ಮಾತ್ರ ಆ ಕೆಲಸ ಮಾಡಿ ತೋರಿಸಿದೆ. ಸಂವಿಧಾನ ಧರ್ಮಗ್ರಂಥವಿದ್ದಂತೆ. ಅದು ಏಳಿಗೆಗೆ ಪೋಷಿಸುತ್ತದೆ. ಸಮಾನ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.

ಮುಸ್ಲಿಂ ಚಿಂತಕರ ಚಾವಡಿಯ ಅಮೀಶ್ ಪಾಷಾ ಮಾತನಾಡಿ, ದೇಶದಲ್ಲಿ ಸೂಕ್ಷ್ಮ ವಿಚಾರಗಳನ್ನು ಯುವಜನರಲ್ಲಿ ತುಂಬಿ ಮನಸ್ಸು ಹದಗೆಡಿಸಲಾಗುತ್ತಿದೆ‌. ಕೇವಲ ಬಟ್ಟೆಯ ವಿಚಾರವಾಗಿ ಕೋಮು ಗಲಭೆಗೆ ಆಸ್ಪದ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಜಾಬ್ ಎಂಬ ಧಾರ್ಮಿಕ ಹೆಸರಿನ ಬದಲು ತಲೆ ಸೆರಗು ಅಂದಿದ್ದರೆ ಸಮಾಜದಲ್ಲಿ ಇಷ್ಟೊಂದು ಗಲಾಟೆ ಇರುತ್ತಿರಲಿಲ್ಲವೇನೋ ಎನಿಸುತ್ತದೆ ಎಂದರು.

ಪ್ರಾಧ್ಯಾಪಕ ಎನ್.ಚಿನ್ನಸ್ವಾಮಿ ಸೋಸಲೆ, ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಸೋಮಶೇಖರ್ ಬಣ್ಣದಮನೆ, ವಿಭಾಗೀಯ ಸಂಚಾಲಕ ಇರ್ಫಾನ್ ಮುದಗಲ್, ವಕೀಲ ಅನಂತ ನಾಯ್ಕ, ಎಂ.ಸಿ.ವೀರಸ್ವಾಮಿ, ಟಿ.ಮಂಜುನಾಥ, ನಿಂಬಗಲ್ ರಾಮಕೃಷ್ಣ, ಗುಜ್ಜಲ ನಾಗರಾಜ, ವಿನಾಯಕ ಶೆಟ್ಟರ್ ಇದ್ದರು.

‘ಎನ್‌ಇಪಿ ಆರ್‌ಎಸ್‌ಎಸ್ ಕೊಡುಗೆ’

‘ನೂತನ ಶಿಕ್ಷಣ ನೀತಿಯನ್ನು (ಎನ್‌ಇಪಿ) ನಾಗಪುರದಲ್ಲಿ 16 ಜನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕೋರ್ ಕಮಿಟಿ ಸದಸ್ಯರು ತಯಾರಿಸಿದ್ದು, ಕೆಳವರ್ಗದವರನ್ನು ತುಳಿಯುವ ಹುನ್ನಾರ ಅಡಗಿದೆ. ಕೆಳವರ್ಗದವರಿಗೆ ಹಳೆ ಕಸುಬು ನೀಡುವ ಹುನ್ನಾರ ನಡೆದಿದೆ’ ಎಂದು ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಕಸ ಹೊಡೆಯುವವರು, ಬೇಟೆ ಆಡುವವರು ಹಾಗೂ ಕೊಳಚೆ ಸ್ವಚ್ಚಗೊಳಿಸುವವರಿಗೆ ಹಳೆ ಕಸುಬಿಗೆ ಉತ್ತೇಜನ ಕೊಡುವ ಹೆಸರಲ್ಲಿ ಪುನಃ ಅವರನ್ನು ಆ ಪದ್ಧತಿಗೆ ದೂಡಲಾಗುತ್ತಿದೆ. ಸಂವಿಧಾನ ಕೇವಲ ಕೆಳವರ್ಗದವರಿಗೆ ಎಂಬ ತಪ್ಪು ಕಲ್ಪನೆ ಇದೆ. ಎಲ್ಲ ವರ್ಗದವರಿಗೂ ಮೀಸಲಾತಿ ಇದ್ದೇ ಇದೆ. ವರ್ಣಪದ್ಧತಿ ಮೀರಿ ಸಮ ಸಮಾಜ ಬೆಳೆಯಬೇಕು ಎಂದರು.

‘ಸಂವಿಧಾನದಿಂದ ಶಾಸಕನಾದೆ’

‘ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಶಾಸಕನನ್ನಾಗಿ ಮಾಡಿದ್ದು ಸಂವಿಧಾನ. ಸಂವಿಧಾನವನ್ನು ಅರಿಯುವ ಜೊತೆಗೆ ಇದರ ಬಗ್ಗೆ ಇತರರಿಗೂ ತಿಳಿಸಿ ಜಾಗೃತಿ ಮೂಡಿಸಿ ಸಮಸಮಾಜ ನಿರ್ಮಿಸಲು ಮುಂದಾಗಬೇಕು’ ಎಂದು ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT