ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡ್ಲಿಗಿ ರಾಜೀವ್‌ ಗಾಂಧಿ ನಗರದಲ್ಲಿಲ್ಲ ಮೂಲಸೌಕರ್ಯ

Last Updated 19 ಜನವರಿ 2022, 8:01 IST
ಅಕ್ಷರ ಗಾತ್ರ

ಕೂಡ್ಲಿಗಿ: ನಗರದ ಹೃದಯ ಭಾಗದಲ್ಲಿರುವ ರಾಜೀವ್ ಗಾಂಧಿ ನಗರಕ್ಕೆ ಇದುವರೆಗೆ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ.

ಉತ್ತಮ ರಸ್ತೆ, ಬೀದಿ ದೀಪ, ಚರಂಡಿಯಂತಹ ಕನಿಷ್ಠ ಸೌಕರ್ಯಗಳಿಲ್ಲದ ಬಡಾವಣೆಯಲ್ಲಿ ಇಂದಿಗೂ ಜನ ವಾಸಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಬಿದ್ದಿರುತ್ತದೆ. ಆದರೆ, ಅದನ್ನು ವಿಲೇವಾರಿ ಮಾಡುವುದಿಲ್ಲ. ರಸ್ತೆಯಿಲ್ಲ ಎಂದ ಮೇಲೆ ಸುಗಮ ವಾಹನ ಸಂಚಾರ ಸಾಧ್ಯವಿಲ್ಲ.

ಸಿರಾಜ್‌ ಶೇಖ್‌ ಶಾಸಕರಿದ್ದಾಗ ವಸತಿ ಯೋಜನೆಯಡಿ 2001ರಲ್ಲಿ 350 ಮನೆಗಳನ್ನು ನಿರ್ಮಿಸಿ, ಬಡವರಿಗೆ ಹಂಚಲಾಗಿತ್ತು. ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಎಲ್ಲ ಸೌಕರ್ಯ ಕಲ್ಪಿಸಲಾಗಿತ್ತು. ಆದರೆ, ಸೂಕ್ತ ನಿರ್ವಹಣೆ ಮಾಡದ ಕಾರಣ ಈಗ ಆ ಸೌಲಭ್ಯಗಳೆಲ್ಲ ಮರೀಚಿಕೆಯಾಗಿವೆ.

‘ಇತ್ತೀಚೆಗ ಕೆಲವೆಡೆ ಚರಂಡಿ ನಿರ್ಮಿಸಲಾಗಿದೆ. ಆದರೆ ಮನೆಗಳಿಗಿಂತ ಎತ್ತರದಲ್ಲಿ ಚರಂಡಿಯನ್ನು ನಿರ್ಮಿಸಿರುವುದರಿಂದ ಮಳೆ ನೀರು ಮನೆಗಳಿಗೆ ನುಗ್ಗುವ ಭೀತಿ ಇದೆ. ರಸ್ತೆ ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ’ ಎಂದು ಸ್ಥಳೀಯ ನಿವಾಸಿ ಶಿವಕುಮಾರ್‌ ವಿವರಿಸಿದರು.

‘ಒಳ ಚರಂಡಿ ನಿರ್ಮಿಸುವ ವೇಳೆ ರಸ್ತೆಗಳನ್ನು ಅಗೆದು ಹಾಗೆ ಬಿಡಲಾಗಿದೆ. ರಸ್ತೆಯಲೆಲ್ಲ ತಗ್ಗು ಗುಂಡಿಗಳು ಬಿದ್ದಿವೆ. ಜನ ಓಡಾಡುವುದೇ ಕಷ್ಟವಾಗಿದೆ. ಆರೋಗ್ಯ ಉಪ ಕೇಂದ್ರ, ವ್ಯಾಯಾಮ ಶಾಲೆ, ಸುಸಜ್ಜಿತ ರಂಗ ಮಂದಿರ ಇದೆ. ಬಳಕೆಯಾಗದೆ ಪಾಳು ಬಿದ್ದಿವೆ. ಸುತ್ತಲೂ ಕಸ, ಮುಳ್ಳು, ಕಂಟಿಗಳು ಬೆಳೆದು ನಿಂತಿವೆ‘ ಎಂದು ತಿಳಿಸಿದರು.

‘ರಾಜೀವ್ ಗಾಂಧಿ ನಗರ ಹಾಗೂ ಅದರ ಪಕ್ಕದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಖಾಲಿ ಜಾಗವಿದ್ದು, ಅಲ್ಲಿ ಜಾಲಿ ಗಿಡ ಬೆಳೆದು ನಿಂತಿವೆ. ಚರಂಡಿ ನೀರೆಲ್ಲ ಮನೆಗಳ ಅಕ್ಕಪಕ್ಕದಲ್ಲಿಯೇ ಶೇಖರಣೆಯಾಗಿ ದುರ್ಗಂಧಕ್ಕೆ ಕಾರಣವಾಗಿದೆ’ ಎಂದರು.

‘ಚರಂಡಿ ಮಾಡುತ್ತೇವೆ ಎಂದು ಹೇಳಿ ನಾಲ್ಕು ವರ್ಷಗಳ ಹಿಂದೆ ಇಲ್ಲಿ ತಗ್ಗು ತೋಡಿ ಹೋಗಿದವರು ಇದುವರೆಗೆ ಈ ಕಡೆಗೆ ಬಂದಿಲ್ಲ. ನೀರು ನಿಂತು ಸೊಳ್ಳೆ ಕಾಟ ಹೆಚ್ಚಾಗಿವೆ. ಡೆಂಗಿ, ಮಲೇರಿಯಾ ಹರಡುವ ಭೀತಿ ಹೆಚ್ಚಿದೆ’ ಎಂದು ಸ್ಥಳೀಯರಾದ ನಿಂಗಮ್ಮ, ಚನ್ನಮ್ಮ ಗೋಳು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT