ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಿ ಕೋಟಿ ಹಣವಿದ್ದರೂ ಕಾಲುವೆ ಆಧುನೀಕರಣಕ್ಕಿಲ್ಲ ಆಸಕ್ತಿ

Last Updated 28 ಜುಲೈ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಕೋಟಿ ಕೋಟಿ ಅನುದಾನವಿದ್ದರೂ ಇಲ್ಲಿನ ವಿಜಯನಗರ ಕಾಲುವೆಗಳ ಆಧುನೀಕರಣಕ್ಕೆ ಇಚ್ಛಾಶಕ್ತಿ ತೋರಿಸುತ್ತಿಲ್ಲ.
ಅನುದಾನ ಮಂಜೂರಾಗಿ ಮೂರು ವರ್ಷಗಳಾಗುತ್ತ ಬಂದರೂ ಕೆಲಸ ಮಾತ್ರ ಇದುವರೆಗೆ ಆರಂಭವಾಗಿಲ್ಲ.

ಅಧಿಕಾರಿಗಳು ಕುಂಟು ನೆಪ ಹೇಳುತ್ತ ಆಧುನೀಕರಣ ಕಾಮಗಾರಿ ಮುಂದೂಡುತ್ತಿದ್ದಾರೆ. ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸದ ಕಾರಣ ಅಧಿಕಾರಿಗಳು ತಾವು ಆಡಿದ್ದೇ ಆಟ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂಬುದು ರೈತರ ಆರೋಪವಾಗಿದೆ.

ಉಪಕಾಲುವೆಗಳ ಆಧುನೀಕರಣಕ್ಕೆ ಏಷ್ಯನ್‌ ಅಭಿವೃದ್ಧಿ ಬ್ಯಾಂಕಿನಿಂದ ಒಪ್ಪಿಗೆ ದೊರೆತು ₹430 ಕೋಟಿ ಮಂಜೂರಾಗಿದೆ. ಒಟ್ಟು ಐದು ಕಾಲುವೆಗಳ ಪೈಕಿ ಯಾವುದರಲ್ಲೂ ಇದುವರೆಗೆ ಕೆಲಸ ಆರಂಭಗೊಂಡಿಲ್ಲ. ಮಳೆಗಾಲ ಆರಂಭವಾಗಿ ಎರಡು ತಿಂಗಳಾಗುತ್ತ ಬಂದಿದೆ. ಬರುವ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತದೆ. ಹೀಗಾಗಿ ಈ ವರ್ಷವೂ ಕಾಲುವೆಗಳ ಆಧುನೀಕರಣ ಕಾರ್ಯ ಶುರುವಾಗುವುದು ಅನುಮಾನ.

ವಿಜಯನಗರ ಕಾಲದ ಉಪಕಾಲುವೆಗಳಾದ ರಾಯ, ಬಸವ, ಬೆಲ್ಲ, ಕಾಳಘಟ್ಟ, ತುರ್ತಾ ಇವುಗಳನ್ನು ಆಧುನೀಕರಣಗೊಳಿಸಬೇಕೆಂದು ರೈತರು ಅನೇಕ ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ಇದುವರೆಗೆ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ.

ಬಹುತೇಕ ಕಡೆ ಕಾಲುವೆಗಳ ಅಸ್ತಿತ್ವವೇ ನಾಶವಾಗಿ ಹೋಗಿದೆ. ಕೆಲವು ಕಡೆಗಳಲ್ಲಿ ಕಾಲುವೆಗಳು ಚರಂಡಿಯ ಸ್ವರೂಪ ಪಡೆದುಕೊಂಡಿವೆ. ಮತ್ತೆ ಕೆಲವೆಡೆ ಸಂಪೂರ್ಣವಾಗಿ ಪೊದೆ ಬೆಳೆದು ನಿಂತಿದೆ. ಅಷ್ಟರಮಟ್ಟಿಗೆ ಕಾಲುವೆಗಳು ಹಾಳಾಗಿರುವ ಕಾರಣ ಕೊನೆಯ ಭಾಗದ ರೈತರ ಕೃಷಿ ಜಮೀನುಗಳಿಗೆ ನೀರು ತಲುಪುತ್ತಿಲ್ಲ.

ಇದನ್ನೇ ಮನಗಂಡೇ ಸರ್ಕಾರ ಕಾಲುವೆಗಳ ಆಧುನೀಕರಣಕ್ಕೆ ನಿರ್ಧಾರ ತೆಗೆದುಕೊಂಡಿತ್ತು. ಅದಕ್ಕಾಗಿ ಏಷ್ಯನ್‌ ಅಭಿವೃದ್ಧಿ ಬ್ಯಾಂಕಿನ ಮೊರೆ ಹೋಗಿತ್ತು. ಬ್ಯಾಂಕಿನಿಂದ ಸಕಾಲಕ್ಕೆ ಹಣ ಮಂಜೂರಾಗಿದೆ. ಆದರೆ, ಅದನ್ನು ಬಳಸಿಕೊಳ್ಳಲು ಆಗುತ್ತಿಲ್ಲ.
ಕಾಲುವೆಗಳ ಆಧುನೀಕರಣಕ್ಕೆ ಸಂಬಂಧಿಸಿದಂತೆ ರೈತರ ಸಲಹೆ ಆಲಿಸಲು ಹಿಂದಿನ ವರ್ಷ ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿ ಸಭೆ ಕರೆಯಲಾಗಿತ್ತು. ಆದರೆ, ಕಾಲುವೆ ಭಾಗದ ರೈತರು, ರೈತ ಸಂಘಟನೆಗಳ ಮುಖಂಡರನ್ನು ಹೊರಗಿಟ್ಟು ಸಭೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಮತ್ತೊಮ್ಮೆ ಸಭೆ ಕರೆಯಬೇಕೆಂದು ರೈತ ಸಂಘಟನೆಗಳು ಆಗ್ರಹಿಸಿದ್ದವು. ಆದರೆ, ಅದಾದ ಬಳಿಕ ಯಾವುದೇ ಸಭೆ ಕರೆದಿಲ್ಲ.

‘ರೈತರೊಂದಿಗೆ ಸಮಾಲೋಚಿಸದೆ ಏಕಪಕ್ಷೀಯವಾಗಿ ಅಧಿಕಾರಿಗಳು ನಾಲ್ಕು ಗೋಡೆಗಳ ಮಧ್ಯೆ ಕುಳಿತುಕೊಂಡು ನಿರ್ಣಯ ಕೈಗೊಳ್ಳಲು ಹೊರಟಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಇದರಲ್ಲಿ ರೈತರ ಹಿತ ಅಡಗಿರುವ ಕಾರಣ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌ ಎಚ್ಚರಿಕೆ ನೀಡಿದ್ದಾರೆ.

‘ತುಂಗಭದ್ರಾ ಜಲಾಶಯದ ಬಲದಂಡೆ ಮೇಲ್ಮಟ್ಟದ ಕಾಲುವೆ (ಆರ್‌.ಬಿ.ಎಚ್‌.ಎಲ್‌.ಸಿ.), ಕೆಳಮಟ್ಟದ ಕಾಲುವೆಗಳನ್ನು (ಆರ್‌.ಬಿ.ಎಲ್‌.ಎಲ್‌.ಸಿ.) ಪ್ರತಿ ವರ್ಷ ಆಡಳಿತ ಮಂಡಳಿ ದುರಸ್ತಿಗೊಳಿಸುತ್ತದೆ. ಅದೇ ರೀತಿ ವಿಜಯನಗರ ಕಾಲುವೆಗಳ ನಿರ್ವಹಣೆ ಆಗಬೇಕು. ಆದರೆ, ನೀರಾವರಿ ಇಲಾಖೆ ಕಾಳಜಿ ತೋರುತ್ತಿಲ್ಲ’ ಎಂದಿದ್ದಾರೆ.

‘ವಿಜಯನಗರ ಸಾಮ್ರಾಜ್ಯದ ಅರಸರು ಬಹಳ ದೂರದೃಷ್ಟಿ ಇಟ್ಟುಕೊಂಡು ಅಂದೇ ಕಾಲುವೆಗಳನ್ನು ನಿರ್ಮಿಸಿದ್ದರು. ಈಗ ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಅದನ್ನು ಬಳಸಿಕೊಂಡು ಆಧುನೀಕರಣ ಮಾಡಬಹುದು. ಆದರೆ, ಏಕೋ ಕಾಳಜಿ ತೋರುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT