ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಧಾನಸಭೆಯಲ್ಲಿ ಚರ್ಚಿಸಿ, ಶಿಕ್ಷಣ ನೀತಿ ತನ್ನಿ’

Last Updated 13 ಜುಲೈ 2021, 9:58 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೊಸ ಶಿಕ್ಷಣ ನೀತಿ ವಿರೋಧಿಸಿ ಎಡ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದವರು ಮಂಗಳವಾರ ನಗರದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಸತ್ತು ಹಾಗೂ ಆಯಾ ರಾಜ್ಯಗಳ ವಿಧಾನಸಭೆಯಲ್ಲಿ ಹೊಸ ಶಿಕ್ಷಣ ನೀತಿ ಕುರಿತು ಚರ್ಚೆಗಳೇ ನಡೆದಿಲ್ಲ. ಹೀಗಿರುವಾಗ ಏಕಪಕ್ಷೀಯವಾಗಿ ಸರ್ಕಾರ ಅದನ್ನು ಜಾರಿಗೆ ತರಲು ಹೊರಟಿರುವುದು ಎಷ್ಟು ಸರಿ? ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಶಿಕ್ಷಣ ನೀತಿ ಜಾರಿಗೊಳಿಸುವ ವಿಷಯದಲ್ಲಿ ರಾಜ್ಯಗಳ ಅಭಿಪ್ರಾಯ ಆಲಿಸುವುದು ಬಹಳ ಮುಖ್ಯ. ವಿಧಾನಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ಆಗಬೇಕು. ಎಲ್ಲ ಹಂತದಲ್ಲಿಯೂ ಕನ್ನಡ ಕಲಿಕೆ ಇರಬೇಕು. ಮಾತೃಭಾಷೆಯಲ್ಲಿ ವ್ಯಾಸಂಗ ಮಾಡಿದವರಿಗೆ ಶಿಷ್ಯವೇತನ, ಉದ್ಯೋಗ ಅವಕಾಶ ಸೃಷ್ಟಿಸಲು ನೀತಿ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ತಜ್ಞರು ಹಾಗೂ ವಿದ್ಯಾರ್ಥಿ ಸಂಘಟನೆಗಳ ಜೊತೆ ಚರ್ಚೆ ನಡೆಸಬೇಕು. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಅದನ್ನು ಹೇರಲು ಹೊರಟಿರುವುದು ಸರಿಯಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಶಿಕ್ಷಣ ನೀತಿ ಜಾರಿಗೆ ಸರ್ಕಾರ ಸಮಿತಿಯೊಂದನ್ನು ರಚಿಸಿ, ಹತ್ತು ದಿನಗಳಲ್ಲಿಯೇ ವರದಿ ಕೇಳಿರುವುದು ಸರಿಯಾದ ಕ್ರಮವಲ್ಲ. ಸಮಿತಿಯೊಂದಿಗೆ ನಡೆಯುವ ಎಲ್ಲ ರೀತಿಯ ಚರ್ಚೆ, ವರದಿ ಪಾರದರ್ಶಕವಾಗಿರಬೇಕು. ಅದರ ಮಾಹಿತಿ ಎಲ್ಲರಿಗೂ ಸಿಗುವಂತೆ ಮಾಡಬೇಕು. ಎಲ್ಲರಿಗೂ ಹೊಸ ನೀತಿ ಕುರಿತು ಮನವರಿಕೆ ಆಗುವವರೆಗೆ ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಒತ್ತಾಯಿಸಿದ್ದಾರೆ.

ಒಕ್ಕೂಟದ ಮುಖಂಡರಾದ ಜೆ. ಶಿವುಕುಮಾರ, ಕೆ.ಎ. ಪವನ್‌ ಕುಮಾರ್‌, ದೊಡ್ಡಬಸವರಾಜ, ಸಿ.ಆರ್‌.ಎಂ. ಅಭಿಷೇಕ್‌, ಕೆ. ಮನೋಜ್‌, ಎಂ. ಗುರುರಾಜ್‌ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT