ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಷ್ಕರ, ಹುಣ್ಣಿಮೆ ಒಟ್ಟೊಟ್ಟಿಗೆ; ಹಂಪಿಗೆ ಬಂತು ಭಕ್ತರ ದಂಡು

Last Updated 30 ನವೆಂಬರ್ 2020, 8:24 IST
ಅಕ್ಷರ ಗಾತ್ರ
ADVERTISEMENT
"ಹಂಪಿ ವಿರೂಪಾಕ್ಷೇಶ್ವರನ ದರ್ಶನಕ್ಕೆ ಸಾಲುಗಟ್ಟಿ ನಿಂತಿರುವ ಭಕ್ತರು"

ಹೊಸಪೇಟೆ: ತುಂಗಭದ್ರಾ ನದಿ ಪುಷ್ಕರ ಮಹೋತ್ಸವ, ಹುಣ್ಣಿಮೆ ಒಟ್ಟಿಗೆ ಬಂದದ್ದರಿಂದ ಸೋಮವಾರ ಇಲ್ಲಿನ ಹಂಪಿಗೆ ಭಕ್ತರ ದಂಡೇ ಹರಿದು ಬಂದಿತು.

ಬಳ್ಳಾರಿ, ಕೊಪ್ಪಳ, ರಾಯಚೂರು ಸೇರಿದಂತೆ ಆಂಧ್ರ ಪ್ರದೇಶದ ಕಡಪ, ಕರ್ನೂಲು, ಅನಂತಪುರ, ಮಹಾರಾಷ್ಟ್ರದ ಸೊಲ್ಲಾಪುರ, ಪಂಡರಾಪುರ, ಕೊಲ್ಲಾಪುರ ಸೇರಿದಂತೆ ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯ ಭಕ್ತರು ಬಂದಿದ್ದಾರೆ.

ಭಕ್ತರು ನೇರ ತುಂಗಭದ್ರಾ ನದಿ ಸ್ನಾನಘಟ್ಟಗಳಿಗೆ ತೆರಳಿ ಮೈಕೊರೆಯುವ ಚಳಿಯಲ್ಲೇ ನದಿಯಲ್ಲಿ ಮಿಂದೆದ್ದರು. ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವಯೋಮಾನದವರು ಪುಷ್ಕರ ಪುಣ್ಯ ಸ್ನಾನ ಮಾಡಿದರು. ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ನದಿ ಸ್ನಾನಘಟ್ಟಗಳಲ್ಲಿ ಜನಜಾತ್ರೆ ಕಂಡು ಬಂತು.

ನದಿಯಲ್ಲಿ ಮಿಂದೆದ್ದ ಬಳಿಕ ಭಕ್ತರು ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿ ವಿರೂಪಾಕ್ಷನ ದರ್ಶನ ಪಡೆದರು. ಉದ್ದನೆಯ ಸಾಲಿನಲ್ಲಿ ತಡಹೊತ್ತು ನಿಂತು ದೇವರ ದರ್ಶನ ಪಡೆದರು. ಬೆಳಿಗ್ಗೆಯೇ ವಿರೂಪಾಕ್ಷನಿಗೆ ವಿಶೇಷ ರೀತಿಯಲ್ಲಿ ಅಲಂಕರಿಸಿ ಪೂಜೆ ನೆರವೇರಿಸಲಾಗಿತ್ತು.

ಹಂಪಿ ವಿರೂಪಾಕ್ಷೇಶ್ವರನ ದರ್ಶನಕ್ಕೆ ಸಾಲುಗಟ್ಟಿ ನಿಂತಿರುವ ಭಕ್ತರು

ದರ್ಶನ ಪಡೆದ ಬಳಿಕ ಭಕ್ತರು ಅವರೊಂದಿಗೆ ತಂದಿದ್ದ ಬುತ್ತಿ ಬಿಚ್ಚಿಕೊಂಡು ಆಹಾರ ಸೇವಿಸಿದರು. ನಂತರ ಚಕ್ರತೀರ್ಥ, ಕಡಲೆಕಾಳು, ಸಾಸಿವೆಕಾಳು, ಕಮಲ ಮಹಲ್‌, ಗಜಶಾಲೆ, ಮಹಾನವಮಿ ದಿಬ್ಬ, ರಾಣಿ ಸ್ನಾನಗೃಹ, ವಿಜಯ ವಿಠಲ ದೇವಸ್ಥಾನ ಕಣ್ತುಂಬಿಕೊಂಡರು.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದದ್ದರಿಂದ ತೆಂಗಿನಕಾಯಿ, ಹೂ, ಬಾಳೆಹಣ್ಣಿನ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಎಳನೀರು, ತಂಪುಪಾನೀಯ, ಕಡಲೆಕಾಯಿ, ಮಿರ್ಚಿ ಭಜ್ಜಿ ಸೇರಿದಂತೆ ಇತರೆ ಸಣ್ಣ ವ್ಯಾಪಾರಿಗಳು ಕೈತುಂಬ ಹಣ ಗಳಿಸಿದರು. ಲಾಕ್‌ಡೌನ್‌ ತೆರವಾದ ನಂತರ ಹಂಪಿ ಮೊದಲಿನಂತೆ ಸಹಜ ಸ್ಥಿತಿಗೆ ಬರುತ್ತಿದ್ದು, ಸ್ಥಳೀಯ ವ್ಯಾಪಾರಿಗಳಲ್ಲಿ ಸಂತಸ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT