ಭಾನುವಾರ, ಏಪ್ರಿಲ್ 5, 2020
19 °C

ರಂಗತೋರಣ: ರಾಜ್ಯ ವಿದ್ಯಾರ್ಥಿ ನಾಟಕೋತ್ಸವ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ರಂಗತೋರಣ ಹಮ್ಮಿಕೊಂಡಿರುವ 13ನೇ 'ರಾಜ್ಯ ವಿದ್ಯಾರ್ಥಿ ನಾಟಕೋತ್ಸವ' ಮಾರ್ಚ್ 13ರಿಂದ 15ರವರೆಗೆ ಮೂರು ದಿನಗಳ ಕಾಲ ನಗರದ ಜೋಳದರಾಶಿದೊಡ್ಡನಗೌಡ ರಂಗಮಂದಿರದಲ್ಲಿ ನಡೆಯಲಿದೆ ಎಂದು ರಂಗತೋರಣದ ಕಾರ್ಯದರ್ಶಿ ಕಪ್ಪಗಲ್ಲು ಪ್ರಭುದೇವ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವಾಧ್ಯಕ್ಷರಾಗಿ ಬೀದಿನಾಟಕ ತಜ್ಞ ಪಿ.ಅಬ್ದುಲ್ ಆಯ್ಕೆಯಾಗಿದ್ದಾರೆ. 13ರಂದು ಬೆಳಿಗ್ಗೆ 10.30ಕ್ಕೆ ರಂಗಮಂದಿರದ ಆವರಣದಲ್ಲಿ ರಂಗತೋರಣ ಧ್ವಜಾರೋಹಣ, ಸಂಜೆ 5.30ಕ್ಕೆ ಕಲಾತೋರಣ ರಂಗವಸ್ತು ಪ್ರದರ್ಶನ ಹಾಗೂ ಸಂಜೆ 6.45ಕ್ಕೆ ಹಿರಿಯ ರಂಗಕರ್ಮಿ ಪಿ.ಗಂಗಾಧರಸ್ವಾಮಿ ಉದ್ಘಾಟಿಸುವರು. 12ನೇ ನಾಟಕೊತ್ಸವದ ಸರ್ವಾಧ್ಯಕ್ಷ ಶಶಿಧರ ಅಡಪ ನಲ್ನುಡಿ ನುಡಿಯುವರು ಎಂದು ತಿಳಿಸಿದರು.

14ರಂದು ಬೆಳಿಗ್ಗೆ ರಂಗತೋರಣ-ವಿಶೇಷ ಸುದ್ದಿಪತ್ರಿಕೆಯನ್ನು ಉಜಿರೆ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೊರತರುವರು. ರಂಗಜಗುಲಿಯಲ್ಲಿ ನಾಟಕದ ನಂತರ ಹಿರಿಯರೊಂದಿಗೆ ಸಂವಾದ, ವಿಚಾರ ತೋರಣ ಬೀದಿ ನಾಟಕ-ಅಸ್ಮಿತೆ, ಸಂಜೆ 4ಕ್ಕೆ ರಂಗವೈಭವ ಯಾತ್ರೆ, ರಸ್ತೆಯಲ್ಲಿ ರಂಗೋತ್ಸವದಲ್ಲಿ ನಂದಿಧ್ವಜ: ರಂಗಪಲ್ಲಕ್ಕಿ ಪೂಜೆಯನ್ನು ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿ ನೆರವೇರಿಸುವರು. ಧಾರವಾಡ ರಂಗಾಯಣದ ನಿರ್ದೇಶಕ ರಮೇಶ ಪರವೀನಾಯಕ, ಕಿರುತೆರೆ ನಟ ಮನೋಹರ ಗೌಡ ನೇತೃತ್ವ ವಹಿಸಲಿದ್ದಾರೆ.

ಸಂಜೆ 6.45ಕ್ಕೆ ಹೊಸಪೇಟೆಯ ಭಾವೈಕ್ಯತಾ ವೇದಿಕೆಯಿಂದ ಬೀದಿನಾಟಕ 'ಪ್ರದರ್ಶನ', ರಾತ್ರಿ 9ಕ್ಕೆ ರಂಗಬೆಳದಿಂಗಳಿನಲ್ಲಿ ಕ್ಯಾಂಪ್ ಫೈರ್-ಸೂಪರ್ ಸ್ಟಾರ್ ನಲ್ಲಿ ಹಾಡು, ನೃತ್ಯ, ಕೋಲಾಟ, ರಂಗಗೀತೆಗಳು, ಸೂಪರ್ ಡೈಲಾಗ್ಸ್ , ತಿಳಿಹಾಸ್ಯ, ಏಕಪಾತ್ರಾಭಿನಯಗಳು ಸೇರಿ ಇತರೆ ಪ್ರತಿಭೆಗಳ ಅನಾವರಣಕ್ಕೆ ಅವಕಾಶ. 15ರಂದು ಬೆಳಿಗ್ಗೆ 11ಕ್ಕೆ ರಂಗಚಾವಡಿಯಲ್ಲಿ ಸರ್ವಾಧ್ಯಕ್ಷರೊಂದಿಗೆ ಸಂವಾದ, ಮಾಸದ ದೃಶ್ಯ–ಮೊಬೈಲ್ ಕ್ಲಿಕ್, ಮಾತು– ಮಾಣಿಕ್ಯ ವಾಕ್ಯ, ರಂಗ ಮಿತ್ರ ಸ್ನೇಹಸಾಗರ ಹಾಗೂ ಸಂಜೆ 6.45ಕ್ಕೆ ರಂಗತೋರಣ ಪ್ರಶಸ್ತಿ ಪುರಸ್ಕಾರ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗಾಗಿಯೇ ಏರ್ಪಡಿಸಿರುವ ನಾಟಕೋತ್ಸವದಲ್ಲಿ ಪ್ರತಿ ಗಂಟೆಗೊಂದರಂತೆ 19 ನಾಟಕಗಳು ಮತ್ತು ಮೂರು ದಿನಗಳ ಕಾಲ ಪ್ರತಿ ದಿನಕ್ಕೆ ಒಂದರಂತೆ 6 ಬೀದಿ ನಾಟಕಗಳು ಪ್ರದರ್ಶನಗೊಳ್ಳಲಿವೆ. ಉತ್ತಮ ನಾಟಕ ತಂಡ, ರಂಗ ವೈಭವ ಯಾತ್ರೆ, ಉತ್ತಮ ನಟ, ನಟಿ, ನಿರ್ದೇಶಕ, ರಂಗ ಸಜ್ಜಿಕೆ, ಸಂಗೀತ, ಧ್ವನಿ ಬೆಳಕು, ಉತ್ತಮ ಪೋಷಕ ಪಾತ್ರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉದಯೋನ್ಮುಖ ನಾಟಕಕಾರ ಪುರಸ್ಕಾರವನ್ನು ನೀಡಲಾಗುತ್ತದೆ ಎಂದರು.

ನಾಟಕೋತ್ಸವದ ನಾಗರಿಕ ಸ್ವಾಗತ ಸಮಿತಿ ಅಧ್ಯಕ್ಷ ಪಲ್ಲೇದ ಪಂಪಾಪತಿ, ಪ್ರಧಾನ ಕಾರ್ಯದರ್ಶಿ ಗಣಪಾಲ ಐನಾಥರೆಡ್ಡಿ, ಬಿಡಿ ಅಧ್ಯಕ್ಷ ವಿ. ರವಿಕುಮಾರ, ಸುರೇಶ್, ಗುಪ್ತಾ ಚಂದ್ರಶೇಖರ, ದಾದಾ ಖಲಂದರ್, ಕೆ.ರಾಜಶೇಖರ,, ಸೈಯದ್ ಯೂನಸ್, ಮೌಲಾಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು