‘ಅತ್ಯಾಚಾರ ಆರೋಪಿ ಬಿಜೆಪಿ ಸದಸ್ಯನಲ್ಲ’

ಸೋಮವಾರ, ಏಪ್ರಿಲ್ 22, 2019
31 °C

‘ಅತ್ಯಾಚಾರ ಆರೋಪಿ ಬಿಜೆಪಿ ಸದಸ್ಯನಲ್ಲ’

Published:
Updated:

ಹೊಸಪೇಟೆ: ‘ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಆರೋಪಿ ದೇವರಗುಡಿ ಚಂದ್ರಶೇಖರಪ್ಪ ಬಿಜೆಪಿಯ ಪ್ರಾಥಮಿಕ ಸದಸ್ಯತ್ವವೇ ಹೊಂದಿಲ್ಲ’ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಅನಂತ ಪದ್ಮನಾಭ ಸ್ವಾಮಿ ಸ್ಪಷ್ಟಪಡಿಸಿದರು.

ಗುರುವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಶಕಗಳ ಹಿಂದೆ ಅವರು ಬಿಜೆಪಿಯಲ್ಲಿ ಇದ್ದರು. ಒಂದು ಸಲ ಚುನಾವಣೆಯಲ್ಲಿ ಗೆದ್ದು ತಾಲ್ಲೂಕು ಪಂಚಾಯಿತಿ ಸದಸ್ಯರು ಕೂಡ ಆಗಿದ್ದರು. ನಂತರ ಅವರು ಪಕ್ಷದಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡರು’ ಎಂದು ಹೇಳಿದರು.

‘ಚಂದ್ರಶೇಖರಪ್ಪ ಅವರು ಶಾಸಕ ಆನಂದ್‌ ಸಿಂಗ್‌ ಜತೆಗೂ ಒಡನಾಟ ಹೊಂದಿದ್ದಾರೆ. ಕಾಂಗ್ರೆಸ್‌ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಛಾಯಾಚಿತ್ರಗಳು ನನ್ನ ಬಳಿಯಿವೆ. ಸಮಯ ಬಂದಾಗ ತೋರಿಸುವೆ’ ಎಂದರು.

‘ಬಿಜೆಪಿ ಲೋಕಸಭೆ ಅಭ್ಯರ್ಥಿ ವೈ. ದೇವೇಂದ್ರಪ್ಪ, ಮುಖಂಡ ಎಚ್‌.ಆರ್‌.ಗವಿಯಪ್ಪನವರು ಇತ್ತೀಚೆಗೆ ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ಪ್ರಚಾರ ಕೈಗೊಂಡಿದ್ದರು. ಈ ವೇಳೆ ಚಂದ್ರಶೇಖರಪ್ಪ ಎದುರಾದಾಗ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಅದೇ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಅತ್ಯಾಚಾರ ಆರೋಪಿ ಬಿಜೆಪಿ ಮುಖಂಡ ಎಂದು ಅಪಪ್ರಚಾರ ಮಾಡಲಾಗುತ್ತಿದೆ’ ಎಂದರು.

‘ದುರುದ್ದೇಶದ ಪ್ರಚಾರ ಕೈಗೊಳ್ಳುವುದು ಸರಿಯಲ್ಲ. ಪಕ್ಷಕ್ಕೂ ಚಂದ್ರಶೇಖರಪ್ಪನವರಿಗೂ ಯಾವುದೇ ಸಂಬಂಧವಿಲ್ಲ. ಆದರೆ, ಪಕ್ಷದೊಂದಿಗೆ ತಳುಕು ಹಾಕಿ ಅಪಪ್ರಚಾರ ಮುಂದುವರಿಸಿದರೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು’ ಎಂದು ಹೇಳಿದರು.

ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ರಾಣಿ ಸಂಯುಕ್ತಾ, ‘ಚಂದ್ರಶೇಖರಪ್ಪ ನಮ್ಮ ಪಕ್ಷದವರಲ್ಲ. ಒಂದುವೇಳೆ ಅವರು ತಪ್ಪು ಮಾಡಿರುವುದು ನಿಜವಾದರೆ ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾರೇ ತಪ್ಪು ಮಾಡಲಿ ಅವರು ಕಾನೂನಿಗಿಂತ ದೊಡ್ಡವರಲ್ಲ’ ಎಂದರು.

ಮುಖಂಡರಾದ ಸಾಲಿ ಸಿದ್ದಯ್ಯ ಸ್ವಾಮಿ, ವೈ. ಯಮುನೇಶ್‌, ಗೋವಿಂದರಾಜ, ಜಂಬಾನಹಳ್ಳಿ ವಸಂತ, ದೇವರಮನೆ ಶ್ರೀನಿವಾಸ, ಕೆ.ಎಸ್‌. ರಾಘವೇಂದ್ರ, ಶಂಕರ್‌ ಮೇಟಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !