ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಗಣರಾಜ್ಯೋತ್ಸವ ದಿನಾಚರಣೆ

Last Updated 26 ಜನವರಿ 2021, 13:10 IST
ಅಕ್ಷರ ಗಾತ್ರ

ಹೊಸಪೇಟೆ: ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮಂಗಳವಾರ ಗಣರಾಜ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಅದರ ವಿವರ ಇಂತಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ:

ಕುಲಪತಿ ಪ್ರೊ. ಸ.ಚಿ. ರಮೇಶ ಧ್ವಜಾರೋಹಣ ನೆರವೇರಿಸಿ, ‘ಭಾರತದ ಸಂವಿಧಾನವು ಜಾತಿ, ಮತ, ಲಿಂಗ, ಭಾಷೆ, ಸಂಸ್ಕೃತಿಯ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲದೇ ಸಮ ಸಮಾಜ ನಿರ್ಮಾಣದ ಆಶಯವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸಂವಿಧಾನದ ಸಾರ್ಥಕತೆ ಮತ್ತು ಪ್ರಜಾಪ್ರಭುತ್ವದ ಯಶಸ್ಸು, ಕಾನೂನುಗಳ ಅನುಷ್ಠಾನ ಮತ್ತು ಜನ ಸಾಮಾನ್ಯರ ಭಾಗವಹಿಸುವಿಕೆಯನ್ನು ಅವಲಂಬಿಸಿದೆ’ ಎಂದು ಹೇಳಿದರು.

‘ಸಂವಿಧಾನದ ಮೂಲ ಆಶಯ ಸಾಮಾಜಿಕ ನ್ಯಾಯವಾಗಿದೆ. ಇತರೆ ದೇಶಗಳ ಸಂವಿಧಾನಕ್ಕೆ ಹೋಲಿಸಿದರೆ ನಮ್ಮ ಸಂವಿಧಾನ ಒಕ್ಕೂಟ ವ್ಯವಸ್ಥೆಯಲ್ಲಿನ ಸಾಮರಸ್ಯದಿಂದಾಗಿ ಭಿನ್ನವಾಗಿ ನಿಲ್ಲುವುದು. ಸಂವಿಧಾನ ಜಾರಿಯ ಪ್ರಾರಂಭದಲ್ಲೇ ಪುರುಷ ಮತ್ತು ಮಹಿಳೆ ಇಬ್ಬರಿಗೂ ಮತದಾನದ ಹಕ್ಕು ನೀಡಿದೆ’ ಎಂದರು.

ಬೆಂಗಳೂರಿನ ಕಾನೂನು ಕಾಲೇಜಿನ ಪ್ರಾಧ್ಯಾಪಕ ಎನ್. ಸತೀಶ್ ಗೌಡ, ‘ದೇಶದಲ್ಲಿ ಗರಿಷ್ಠ ಪ್ರಮಾಣದಲ್ಲಿ ಕಾನೂನು ಮತ್ತು ಯೋಜನೆಗಳು ರಚನೆಯಾಗುತ್ತಿವೆ. ಆದರೆ, ಅವುಗಳ ಅನುಷ್ಠಾನ ಕನಿಷ್ಠ ಪ್ರಮಾಣದಲ್ಲಿ ಆಗುತ್ತಿವೆ. ಮಾನವೀಯ ನೆಲೆಗಟ್ಟಿನಲ್ಲಿ ಅವುಗಳ ಅನುಷ್ಠಾನ ಆಗಬೇಕು’ ಎಂದು ಹೇಳಿದರು. ಲೋಹಿಯಾ ಅಧ್ಯಯನ ಪೀಠದ ಸಂಚಾಲಕ ಈ. ಎರಿಸ್ವಾಮಿ. ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ, ಸಮಾಜ ವಿಜ್ಞಾನಗಳ ನಿಕಾಯದ ಡೀನ್‌ ಮಾಧವ ಪೆರಾಜೆ ಇದ್ದರು.

ವಿಜಯನಗರ ಕಾಲೇಜು:

ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ ಧ್ವಜಾರೋಹಣ ನೆರವೇರಿಸಿ, ‘21ನೇ ಶತಮಾನದಲ್ಲಿ ಭಾರತದ ಪ್ರಗತಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ’ ಎಂದು ಹೇಳಿದರು. ಪ್ರಾಚಾರ್ಯ ವಿ.ಎಸ್‌. ಪ್ರಭಯ್ಯ, ಪಿಯು ಕಾಲೇಜಿನ ಪ್ರಾಂಶುಪಾಲರಾದ ಸುಜಾತ ಬೆಳ್ಳಿಗುಂಡಿ, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಶಾರದಾ ವಿದ್ಯಾಸಂಸ್ಥೆ ವಿದ್ಯಾರಣ್ಯ ಐಟಿಐ:

ಸಂಸ್ಥೆಯ ಕಾರ್ಯದರ್ಶಿ ರಾಮಕೃಷ್ಣ ಧ್ವಜ ಹಾರಿಸಿದರು. ಪ್ರಾಚಾರ್ಯ ಎರ್ರಿಸ್ವಾಮಿ, ತರಬೇತಿ ಅಧಿಕಾರಿ ಶಂಕರ್‌, ಭೀಮನಗೌಡ ಇದ್ದರು.

ಪತಂಗಜಲಿ ಯೋಗ ಸಮಿತಿ:

ನಗರದ ನೆಹರೂ ಕಾಲೊನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿದ ನೀರಾವರಿ ಇಲಾಖೆಯ ನಿವೃತ್ತ ಎಂಜಿನಿಯರ್‌ ಎಚ್‌.ಎಸ್. ರೇವಣಸಿದ್ದಯ್ಯ, ‘ಹರಿದು ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸಿ, ಗಣರಾಜ್ಯವನ್ನಾಗಿ ಘೋಷಣೆ ಮಾಡಿದ ದಿನವಿದು. ಸಂವಿಧಾನ ಜಾರಿಗೆ ಬಂದ ದಿನವೂ ಹೌದು’ ಎಂದರು.

ಸಮಿತಿಯ ಜಿಲ್ಲಾ ಪ್ರಭಾರಿ ಎಫ್.ಟಿ.ಹಳ್ಳಿಕೇರಿ. ಮಾರ್ಗದರ್ಶಕ ಕಟ್ಟಾ ಸುಬ್ರಮಣ್ಯ, ಮಹಿಳಾ ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ದಾಕ್ಷಾಯಣಿ ಶಿವಕುಮಾರ, ಯುವ ಭಾರತ್ ಸಂಘಟನೆಯ ರಾಜ್ಯ ಪ್ರಭಾರಿ ಕಿರಣಕುಮಾರ್ ಯೋಗಾಭ್ಯಾಸ ಮಾಡಿಸಿದರು. ಕಿಸಾನ್ ಸಮಿತಿಯ ಕೃಷ್ಣ ನಾಯಕ ಇದ್ದರು.

ವಿದ್ಯಾರ್ಥಿ ನಿಲಯ:

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯದಲ್ಲಿ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಗೋವಿಂದ ಧ್ವಜಾರೋಹಣ ಮಾಡಿ, ಸಮಾಜದ ಓರೆ ಕೋರೆಗಳನ್ನು ಮನಗಂಡು ದಲಿತರು ಮತ್ತು ಮಹಿಳೆಯರಿಗಾಗಿ ಹಲವು ಸವಲತ್ತುಗಳನ್ನು ಕಲ್ಪಿಸಿಕೊಟ್ಟ ಧೀಮಂತ ನಾಯಕ ಅಂಬೇಡ್ಕರ್ ಎಂದರೆ ತಪ್ಪಾಗಲಾರದು. ಯುವ ಪೀಳಿಗೆಯು ಅಂಬೇಡ್ಕರ್‌ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು. ಸಂಶೋಧನಾ ವಿದ್ಯಾರ್ಥಿಗಳಾದ ಚಲುವರಾಜ್‌, ಅಂಬಣ್ಣ ದಳವಾಯಿ, ಬಸವರಾಜ ಇತರರಿದ್ದರು.

ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು:

ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ ಧ್ವಜಾರೋಹಣ ನೆರವೇರಿಸಿದರು. ಪ್ರಾಧ್ಯಾಪಕರಾದ ಕೆ. ವೆಂಕಟೇಶ್‌, ಎನ್‌ಎಸ್‌ಎಸ್‌ ಅಧಿಕಾರಿ ಟಿ. ರಘುಪ್ರಸಾದ್‌, ಮಂಜುನಾಥ, ಎಚ್‌. ಆರೆಂಟನೂರು, ಚೆನ್ನಶಾಸ್ತ್ರಿ ಇದ್ದರು.

ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು:

‘ಸಮಾನತೆ, ಸ್ವಾತಂತ್ರ್ಯ, ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಗಣರಾಜ್ಯೋತ್ಸವ ಮೂಢನಂಬಿಕೆ ಹಾಗೂ ಕಂದಾಚಾರಗಳಿಗೆ ಬಲಿಯಾಗಬಾರದು’ ಎಂದು ಪ್ರಾಧ್ಯಾಪಕಿ ಶಶಿರೇಖಾ ಹೇಳಿದರು.

‘ಇಂದಿನ ಯುವಕರು ಅತಿರೇಕದ ಸೂಕ್ಷ್ಮ ವಿದ್ಯುನ್ಮಾನ ಮಾಧ್ಯಮಗಳನ್ನು ಬಳಸುತ್ತಿರುವುದರಿಂದ ಆಘಾತಕಾರಿ ದುಷ್ಪರಿಣಾಮಗಳನ್ನು ಎದುರಿಸುವಂತಾಗಿದೆ. ಹಿಂದಿನ ಇತಿಹಾಸ ಅರಿತರೆ ಮಾತ್ರ ಭವಿಷತ್ಕಾಲದ ಬಗ್ಗೆ ಯೋಚಿಸಬಹುದು’ ಎಂದರು. ಪ್ರಾಚಾರ್ಯ ಜೆ. ಸಿದ್ರಾಮ್‌ ಧ್ವಜಾರೋಹಣ ಮಾಡಿದರು. ಪ್ರಾಧ್ಯಾಪಕರಾದ ಶ್ರೀಹರಿ, ದಯಾನಂದ ಕಿನ್ನಾಳ್, ಶಿಕ್ಷಕಿ ಗೀತಾಂಜಲಿ, ನಾಗರಾಜ ಪತ್ತಾರ್, ಉಪಪ್ರಾಚಾರ್ಯ ವೆಂಕಟೇಶ ಕುಲಕರ್ಣಿ ಇದ್ದರು.

ಹೊಸಪೇಟೆ ಬ್ಲಾಕ್‌ ಕಾಂಗ್ರೆಸ್‌ ಸಮಿತಿ:

ನಗರದ ಪರ್ವೆಜ್‌ ಪ್ಲಾಜಾ ಬಳಿಯ ಕಚೇರಿ ಎದುರು ಸಮಿತಿ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ ಧ್ವಜಾರೋಹಣ ಮಾಡಿ, ‘ಅವೈಜ್ಞಾನಿಕ ಕೃಷಿ ಕಾಯಿದೆಗಳನ್ನು ಸರ್ಕಾರ ಕೈ ಬಿಡಬೇಕು. ರೈತರ ಹಿತ ಕಾಪಾಡಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಗುಜ್ಜಲ್ ನಾಗರಾಜ್, ನಿಂಬಗಲ್ ರಾಮಕೃಷ್ಣ, ಮಾರೆಣ್ಣ, ಸತ್ಯನಾರಾಯಣ, ರಾಮನಗೌಡ, ಚಿದಾನಂದಪ್ಪ ಬಿ.ಗಣೇಶ್, ವಿನಯ್ ಶೆಟ್ಟರ್ , ಬಸವಲಿಂಗಪ್ಪ ಮೇಟಿ, ರಫೀಕ್, ಓಬಳೇಶ ಇದ್ದರು.

ಡಿವೈಎಫ್‌ಐ:

ತಾಲ್ಲೂಕು ಸಮಿತಿಯಿಂದ ನಗರದ ಕಚೇರಿ ಎದುರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈಡಿಗರ ಮಂಜುನಾಥ ಧ್ವಜಾರೋಹಣ ನೆರವೇರಿಸಿ, ‘ಸಂವಿಧಾನವು ಭಾರತ ಜನತೆಗೆ ಶಿಕ್ಷಣ, ಸಮಾನತೆ, ಆರೋಗ್ಯ, ಉದ್ಯೋಗ, ಭಾಷಾ ವಾರು ಪ್ರಾಂತಿಯ ರಚನೆ, ಧರ್ಮ ನಿರಪೇಕ್ಷತೆ, ಜಾತ್ಯತೀತ ತತ್ವಗಳನ್ನು ನೀಡಿದೆ. ಅದರಂತೆ ನಮ್ಮ ವ್ಯವಸ್ಥೆ ನಡೆಯಬೇಕು’ ಎಂದರು.

ಸಮಿತಿ ಜಿಲ್ಲಾ ಅಧ್ಯಕ್ಷ ವಿ. ಸ್ವಾಮಿ, ಮುಖಂಡರಾದ ಕಲ್ಯಾಣ್, ಅಲ್ತಾಫ್, ಹನುಮಂತ, ಬಂಡೆ ತಿರುಕಪ್ಪ, ವಿಜಯ್, ಕುಲ್ಲಾಯಪ್ಪ, ದಿವಾಕರ್, ಮಾಲತೇಶ್, ಖಾಲಿದ್, ರೆಹಮಾನ್ ಇದ್ದರು.

ಭುವನಹಳ್ಳಿ:

ತಾಲ್ಲೂಕಿನ ಭುವನಹಳ್ಳಿ ಗ್ರಾಮದಲ್ಲಿ ಗಣರಾಜ್ಯೋತ್ಸವದ ದಿನ ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಕುಮಾರಿ ಈಶ್ವರ್‌ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿದರು.ತಾಲ್ಲೂಕು ಪಂಚಾಯಿತಿ ಸದಸ್ಯ ಕೆ. ಗಾದಿಲಿಂಗಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧೂ ಎಲಿಗಾರ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್‌. ಕನಕಪ್ಪ, ಮೇಲ್ವಿಚಾರಕಿ ಲಕ್ಷ್ಮಿದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT