ನಿವೃತ್ತ ಸೈನಿಕ ಮೊಹಮ್ಮದ್‌ ರಫಿ ನಿಸ್ವಾರ್ಥ ಸೇವೆ

7
ಉದ್ಯೋಗಾಕಾಂಕ್ಷಿ ಯುವಕರಿಗೆ ಉಚಿತ ತರಬೇತಿ : ತಾಲ್ಲೂಕು ಆಡಳಿತದಿಂದ ಇಂದು ಗೌರವ

ನಿವೃತ್ತ ಸೈನಿಕ ಮೊಹಮ್ಮದ್‌ ರಫಿ ನಿಸ್ವಾರ್ಥ ಸೇವೆ

Published:
Updated:
Prajavani

ಹೂವಿನಹಡಗಲಿ: ಭಾರತೀಯ ಸೇನೆಯಲ್ಲಿ ಹದಿನಾರುವರೆ ವರ್ಷ ಸುದೀರ್ಘ ಸೇವೆ ಸಲ್ಲಿಸಿ ಈಚೆಗೆ ನಿವೃತ್ತಿ ಹೊಂದಿರುವ ತಾಲ್ಲೂಕಿನ ಮಿರಾಕೊರನಹಳ್ಳಿಯ ಎಚ್.ಆರ್.ಮೊಹಮ್ಮದ್‌ ರಫಿ, ಮಿಲಿಟರಿ ಸೇರ ಬಯಸುವ ಯುವಕರಿಗೆ ಉಚಿತ ದೈಹಿಕ ತರಬೇತಿ ನೀಡುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

‘ಎಲ್ಲ ಯುವಕರು ದೇಶ ಪ್ರೇಮ, ಸಾಮಾಜಿಕ ಬದ್ಧತೆ, ಸೈನ್ಯದ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು’ ಎಂಬುದು ಮೊಹಮ್ಮದ್‌ ರಫಿಯವರ ಕಾಳಜಿ. ಈ ದಿಸೆಯಲ್ಲಿ ಅವರು ಸೈನಿಕರ ತ್ಯಾಗ, ಶಿಸ್ತು, ಕಾರ್ಯಶೈಲಿಯನ್ನು ವಿವರಿಸಿ ಯುವಕರಲ್ಲಿ ಮಿಲಿಟರಿಯ ಹುಮ್ಮಸ್ಸು ತುಂಬುತ್ತಿದ್ದಾರೆ. ಪ್ರತಿ ದಿನವೂ ತಮ್ಮ ಸ್ವಗ್ರಾಮದ ಹೊರ ವಲಯದಲ್ಲಿ ಸೇನೆ, ಭದ್ರತಾ ಪಡೆ, ಪೊಲೀಸ್ ಇಲಾಖೆಗೆ ಸೇರಲಿಚ್ಛಿಸುವ ಯುವಕರಿಗೆ ದೈಹಿಕ ಸಾಮರ್ಥ್ಯ ತರಬೇತಿ ನೀಡುತ್ತಾರೆ.

ನಿವೃತ್ತಿಯ ಬಳಿಕ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಈ ಮಾಜಿ ಯೋಧನನ್ನು ತಾಲ್ಲೂಕು ಆಡಳಿತ ಗುರುತಿಸಿ, ಜ. 26ರ ಗಣರಾಜ್ಯೋತ್ಸವ ಗೌರವಕ್ಕೆ ಆಯ್ಕೆ ಮಾಡಿದೆ.

‘ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಶಿಕ್ಷಕರಾಗಿದ್ದ ನಾಗರಾಜ ಜೈನ್‌ ವಿದ್ಯಾರ್ಥಿಗಳನ್ನು ಕುರಿತು ‘ಮುಂದೆ ನೀವೆಲ್ಲಾ ಏನಾಗ ಬಯಸಿದ್ದೀರಿ’ ಎಂದು ಪ್ರಶ್ನಿಸಿದ್ದರು. ‘ನಾನು ಸೈನಿಕನಾಗುತ್ತೇನೆ ಎಂದು ಹೇಳಿಕೊಂಡಿದ್ದೆ. ನಮ್ಮೂರಿನ ಹಿರಿಯರ ನೀತಿ–ಕಥೆಗಳ ಪ್ರೇರಣೆಯಿಂದ ಸೈನ್ಯ ಸೇರುವ ಕನಸು ನನಗೆ ಬಾಲ್ಯದಲ್ಲೇ ಚಿಗುರೊಡೆದಿತ್ತು. ಇದಕ್ಕಾಗಿ ನಾನು ಕಠಿಣ ಅಭ್ಯಾಸ ಮಾಡುತ್ತಿದ್ದೆ. ಸೈನ್ಯ ಸೇರುವ ತಯಾರಿ ಕಂಡು ನಮ್ಮೂರಿನ ಕೆಲವರು ನಗೆಯಾಡಿದ್ದರು. ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದೆ’ ಎಂದು ಸೇನೆಗೆ ಸೇರಿದ ದಿನಗಳನ್ನು ರಫಿ ನೆನಪಿಸಿಕೊಂಡರು.

ಹಡಗಲಿ ರಾಟಿ ಷರೀಫ್ ಸಾಹೇಬ್‌, ಮೆಹಬೂಬಿ ದಂಪತಿಯ ಪುತ್ರ ಮೊಹಮ್ಮದ್‌ ರಫಿ 2002ರಲ್ಲಿ ಸಿಪಾಯಿಯಾಗಿ ಸೇನೆಗೆ ಸೇರಿ, ಆಂಧ್ರ ಪ್ರದೇಶ, ಪಂಜಾಬ್‌, ಜಮ್ಮು ಕಾಶ್ಮೀರ, ಮಧ್ಯಪ್ರದೇಶ, ಹರಿಯಾಣ ಸೇನಾ ತುಕಡಿಗಳಲ್ಲಿ ನಾಯಕ್, ಹವಾಲ್ದಾರ್ ಆಗಿ ಸೇವೆ ಸಲ್ಲಿಸಿದ್ದಾರೆ. 2018ರ ಮೇ 31 ರಂದು ನಿವೃತ್ತಿ ಹೊಂದಿ ಸದ್ಯ ಅವರು ಸ್ವಗ್ರಾಮ ವಿನೋಬನಗರದಲ್ಲಿ ಮಡದಿ ಜಾಹಿರಾ, ಪುತ್ರ ಶಾಹೀದ್, ಪುತ್ರಿ ಶಬನಂ ಜತೆ ಆಯಾಗಿ ಕಾಲ ಕಳೆಯುತ್ತಿದ್ದಾರೆ.

ದೇಶದ ಅತ್ಯಂತ ಸೂಕ್ಷ್ಮ ವಲಯ ಜಮ್ಮು ಕಾಶ್ಮೀರದ ಶಿಬಿರದಲ್ಲಿ ಸಲ್ಲಿಸಿದ ಸೇವೆ ಅವಿಸ್ಮರಣೀಯ ಎನ್ನುವ ರಫಿ, ಅಲ್ಲಿನ ಜನ ಮುಗ್ದರು, ಬಡವರು. ಆದರೆ, ಅಲ್ಲಿ ಪದೇ ಪದೇ ನಡೆಯುವ ರಾಜಕೀಯ ಪ್ರಚೋದಿತ ದಾಳಿಗೆ ಅಮಾಯಕರು ಬಲಿಪಶು ಆಗುತ್ತಿದ್ದಾರೆ ಎಂದು ಹೇಳಿದರು.

ದೇಶಕ್ಕಾಗಿ ಸೈನಿಕರಾಗಿ ದುಡಿವ ತ್ಯಾಗದ ಸೇವೆಗೆ ಸರಿಸಾಟಿ ಯಾವುದೂ ಇಲ್ಲ. ರಾಷ್ಟ್ರ ಮತ್ತು ರಾಷ್ಟ್ರದ ನಾಗರಿಕರ ಸುರಕ್ಷತೆಗಾಗಿ ದುಡಿಯುವ ಸೈನಿಕರ ಕಾರ್ಯ ಅತ್ಯಂತ ಗೌರವಯುತವಾದುದು. ಸೇನೆ ಸೇರುವ ಬಗ್ಗೆ ಯುವಕರು ಭಯಪಟ್ಟುಕೊಳ್ಳಬಾರದು. ಸಾಮಾನ್ಯ ದಿನಗಳಲ್ಲಿ ಅಲ್ಲಿ ಕಠಿಣ ಕೆಲಸಗಳೇನು ಇರುವುದಿಲ್ಲ. ಯುವ ಜನತೆ ಹೆಚ್ಚು ಹೆಚ್ಚಾಗಿ ಸೈನ್ಯ ಸೇರಲು ಮುಂದೆ ಬರಬೇಕು ಎಂದು ಅವರು ಹೇಳಿದರು.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !