ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷರ ಭಾರತಕ್ಕೆ ಸಾವಿತ್ರಿಬಾಯಿ ಫುಲೆ ಕೊಡುಗೆ ದೊಡ್ಡದು: ಸಾಹಿತಿ ರಾಜಶೇಖರ

Last Updated 22 ಜನವರಿ 2021, 12:40 IST
ಅಕ್ಷರ ಗಾತ್ರ

ಹೊಸಪೇಟೆ: ‘ಸಾಕ್ಷರ ಭಾರತಕ್ಕೆ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆ ಬಹಳ ದೊಡ್ಡದು’ ಎಂದು ಸಾಹಿತಿ ಬಿ.ಎಂ. ರಾಜಶೇಖರ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಭಾಗಿತ್ವದಲ್ಲಿ ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ, ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

‘ಸಾವಿತ್ರಿಬಾಯಿ ಫುಲೆ ಅವರು 150 ವರ್ಷಗಳ ಹಿಂದೆಯೇ ಶಿಕ್ಷಣದ ಮಹತ್ವ ಅರಿತು, ಅದನ್ನು ದಾಸೋಹದ ರೂಪದಲ್ಲಿ ಹಂಚಿದ್ದರಿಂದ ಇಂದು ದೊಡ್ಡ ಸಂಖ್ಯೆಯ ಸಾಕ್ಷರರು ನಮ್ಮ ನಡುವೆ ಇದ್ದಾರೆ. ಅದರಲ್ಲೂ ಮಹಿಳೆಯರು ಅನೇಕ ರಂಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾವಿತ್ರಿಬಾಯಿ ಅವರು ಆ ಕಾಲದಲ್ಲಿ ಶಿಕ್ಷಣ ಕೊಡಲು ಮುಂದಾದಾಗ ಜನ ಕಲ್ಲು, ಸೆಗಣಿಯಿಂದ ಅವರಿಗೆ ಹೊಡೆಯುತ್ತಿದ್ದರು. ಇಂದು ಜನ ಅವರ ತ್ಯಾಗ ನೆನೆದು ಅವರ ಭಾವಚಿತ್ರಕ್ಕೆ ಹೂಮಳೆಗರೆಯುತ್ತಿದ್ದಾರೆ. ಇದು ಶಿಕ್ಷಣಕ್ಕಿರುವ ದೊಡ್ಡ ಶಕ್ತಿ’ ಎಂದು ಹೇಳಿದರು.

‘ಸಾವಿತ್ರಿಬಾಯಿ ಅವರು 17ನೇ ವಯಸ್ಸಿನಲ್ಲಿ ಶಾಲೆ ಆರಂಭಿಸಿದ್ದರು. ಅದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆಗ ಅವರ ಪತಿ ಜ್ಯೋತಿಬಾ ಫುಲೆ ಅವರ ಬೆನ್ನಿಗೆ ನಿಂತು ಬೆಂಬಲಿಸಿದ್ದರು. ಆರಂಭದಲ್ಲಿ ಅವರ ಶಾಲೆಯಲ್ಲಿ ಎಂಟು ಮಕ್ಕಳಷ್ಟೇ ಇದ್ದರು. ನಂತರ ಆ ಸಂಖ್ಯೆ 500ರ ಗಡಿ ದಾಟಿತು. ದೇಶದ ಮೊದಲ ಅನಾಥಾಶ್ರಮ, ವಿಧವಾ ಆಶ್ರಮ, ಕೂಲಿ ಕಾರ್ಮಿಕರ ಮಕ್ಕಳಿಗೆ ರಾತ್ರಿ ಶಾಲೆ ತೆರೆದವರು ಸಾವಿತ್ರಿಬಾಯಿ. ಪ್ಲೇಗ್‌ ರೋಗ ಬಂದಾಗ ಗಂಜಿ ಕೇಂದ್ರ ತೆರೆದಿದ್ದರು’ ಎಂದು ಸ್ಮರಿಸಿದರು.

‘ಇಂದಿನ ಹೊಸ ಶಿಕ್ಷಣ ನೀತಿಯಲ್ಲಿರುವ ಅನೇಕ ವಿಚಾರಗಳನ್ನು ಸಾವಿತ್ರಿಬಾಯಿ ಆ ಕಾಲದಲ್ಲೇ ಹೇಳಿದ್ದರು. ಪ್ರಚಾರದ ಕೊರತೆಯಿಂದ ಅವರು ಬೆಳಕಿಗೆ ಬಂದಿಲ್ಲ. ಇತ್ತೀಚಿನ ವರ್ಷಗಳ ಸಂಶೋಧನೆ, ಪುಸ್ತಕದ ಮೂಲಕ ದಾಖಲಿಸುವ ಕೆಲಸ ನಡೆಯುತ್ತಿದೆ’ ಎಂದು ಹೇಳಿದರು.

ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಸಿ. ನಿಂಗಪ್ಪ ಮಾತನಾಡಿ, ‘ಶಿಕ್ಷಕರು ಸಣ್ಣಪುಟ್ಟ ತಪ್ಪು ಮಾಡಿದರೆ ನೋಟಿಸ್‌ ಕೊಟ್ಟು ಅವರ ಮಾನಸಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಆಗಬಾರದು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು’ ಎಂದರು.

‘ರಾಜ್ಯದಲ್ಲಿ ಶಿಕ್ಷಕರ ಸಂಘ ಅತಿ ದೊಡ್ಡ ಸಂಘಟನೆಯಾಗಿದೆ. ಹೋರಾಟದ ಮೂಲಕ ನಮ್ಮ ಅನೇಕ ಹಕ್ಕುಗಳನ್ನು ಪಡೆದುಕೊಳ್ಳಲಾಗಿದೆ. ಬರುವ ದಿನಗಳಲ್ಲಿ ವೇತನ ತಾರತಮ್ಯ ಸರಿಪಡಿಸುವುದು, ಹೊಸ ಪಿಂಚಣಿ ಯೋಜನೆ ವಿರುದ್ಧ ಹೋರಾಟ ನಡೆಸಲಾಗುವುದು. ಅದರಲ್ಲಿ ಎಲ್ಲ ಶಿಕ್ಷಕರು ಪಾಲ್ಗೊಳ್ಳಬೇಕು. ಬಲವಾದ ಸಂಘಟನೆಯಿದ್ದರಷ್ಟೇ ನಮ್ಮ ಹೋರಾಟಕ್ಕೆ ಬೆಲೆ’ ಎಂದು ಹೇಳಿದರು.

ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಆಪ್ತ ಸಹಾಯಕ ಸಂದೀಪ್‌ ಸಿಂಗ್‌ ಕಾರ್ಯಕ್ರಮ ಉದ್ಘಾಟಿಸಿ, ‘ನಗರದಲ್ಲಿ ಗುರುಭವನ ನಿರ್ಮಿಸಬೇಕು ಎನ್ನುವುದು ಶಿಕ್ಷಕರ ಬಹುವರ್ಷಗಳ ಬೇಡಿಕೆಯಾಗಿದೆ. ಈ ಕುರಿತು ಸಚಿವರೊಂದಿಗೆ ಸಮಾಲೋಚಿಸಿ, ಆದಷ್ಟು ಶೀಘ್ರ ಅದನ್ನು ಮಾಡಿಕೊಡಲು ಶ್ರಮಿಸುವೆ’ ಎಂದು ಭರವಸೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ, ಜಿಲ್ಲಾ ಪಂಚಾಯಿತಿ ಸದಸ್ಯೆ ರೇಖಾ ಅವರ ಪತಿ ಪ್ರಕಾಶ್‌, ಸಂಘದ ರಾಜ್ಯ ಸಹ ಕಾರ್ಯದರ್ಶಿ ಬಸವರಾಜ ಸಂಗಪ್ಪನವರ್‌, ಸಂಘಟನಾ ಕಾರ್ಯದರ್ಶಿ ಎಂ.ಎ. ನಾಗನಗೌಡ, ತಾಲ್ಲೂಕು ಅಧ್ಯಕ್ಷ ಕೆ. ಮಾರ್ಗದಪ್ಪ, ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ, ಉಪಾಧ್ಯಕ್ಷ ಕೆ. ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT