ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಮಳೆ; ಶೇ 10ರಷ್ಟು ಬಿತ್ತನೆ

Last Updated 10 ಜುಲೈ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ತಾಲ್ಲೂಕಿನಾದ್ಯಂತ ಇದುವರೆಗೆ ಸಮರ್ಪಕವಾಗಿ ಮಳೆಯಾಗದ ಕಾರಣ ಶೇ 10ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ.

8,428 ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶ ಸೇರಿದಂತೆ ಒಟ್ಟು 33,100 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ, 3,360 ಹೆಕ್ಟೇರ್‌ನಲ್ಲಷ್ಟೇ ರೈತರು ಬಿತ್ತನೆ ಮಾಡಿದ್ದಾರೆ. ಭತ್ತ, ಕಬ್ಬು, ಮೆಕ್ಕೆಜೋಳ, ಸಜ್ಜೆ ಬಿತ್ತನೆ ಮಾಡಿದ್ದಾರೆ. ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಈ ಸಲವೂ ರೈತರಿಗೆ ಜೋಳ ಬೆಳೆಯಲು ಸಾಧ್ಯವಾಗಿಲ್ಲ.

ಜೂನ್‌ ಒಂದರಿಂದ ಜು.10ರ ವರೆಗೆ ತಾಲ್ಲೂಕಿನ ಸಾಧಾರಣ ಮಳೆ ಪ್ರಮಾಣ 84 ಮಿ.ಮೀ. ಆದರೆ, 61 ಮಿ.ಮೀ ಮಳೆಯಾಗಿದ್ದು, 23 ಮಿ.ಮೀ ಕೊರತೆ ಮಳೆಯಾಗಿದೆ.

ಮಳೆಗಾಲ ಆರಂಭಗೊಂಡ ನಂತರ ಇದುವರೆಗೆ ಒಮ್ಮೆಯೂ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ತಾಲ್ಲೂಕಿನ ಹಲವು ಕಡೆಗಳಲ್ಲಿ ಈಗಲೂ ನೆಲ ಹಸಿಯಾಗಿಲ್ಲ. ಸಕಾಲಕ್ಕೆ ಮಳೆ ಆಗಬಹುದು ಎಂದು ಕೆಲವರು ಬಿತ್ತನೆಗೆ ಜಮೀನು ಹದ ಮಾಡಿಕೊಂಡಿದ್ದರು. ಆದರೆ, ಅವರ ನಿರೀಕ್ಷೆ ಹುಸಿಯಾಗಿದೆ.

ಕೆಲ ದಿನಗಳಿಂದ ಆಗೊಮ್ಮೆ, ಈಗೊಮ್ಮೆ ತುಂತುರು ಮಳೆಯಾಗುತ್ತಿರುವ ಕಾರಣ ಕೆಲವರು ಈಗ ನೆಲ ಹದ ಮಾಡಿಕೊಂಡು ಬಿತ್ತನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೆಲವು ರೈತರಂತೂ ಈ ಸಲ ಬಿತ್ತನೆ ಮಾಡುವುದೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಬೆಳಿಗ್ಗೆಯಿಂದ ಸಂಜೆಯ ವರೆಗೆ ದಟ್ಟ ಕಾರ್ಮೋಡ ಇರುತ್ತಿದೆ. ಆದರೆ, ಅದು ಮಳೆಯಾಗಿ ಬದಲಾಗುತ್ತಿಲ್ಲ. ಇನ್ನೇನು ಮಳೆ ಬಂದೇ ಬಿಟ್ಟಿತ್ತು ಅಂದುಕೊಳ್ಳುತ್ತಿರುವಾಗಲೇ ಮೋಡಗಳು ಚದುರಿ ಹೋಗುತ್ತಿವೆ. ಬಾನಂಗಳದಲ್ಲಿ ಈ ಆಟ ಎರಡು ವಾರಗಳಿಂದ ನಡೆಯುತ್ತ ಇದೆ. ಹೀಗಾಗಿಯೇ ರೈತರು ಮಳೆಯ ಬಗ್ಗೆ ಭರವಸೆಯನ್ನೇ ಕಳೆದುಕೊಂಡಿದ್ದಾರೆ. ಬಿತ್ತನೆಯಿಂದ ಹಿಂದೆ ಸರಿಯಲು ಇದು ಕೂಡ ಪ್ರಮುಖವಾದ ಕಾರಣವಾಗಿದೆ.

‘ಮಳೆ ಸುರಿಯುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ. ಬೀಜ ಖರೀದಿಸಿ ಬಿತ್ತನೆ ಮಾಡಿದರೆ ಹೂಡಿದ ಬಂಡವಾಳ ಕೂಡ ಕೈಸೇರುವ ಸಾಧ್ಯತೆ ಇಲ್ಲ. ಒಂದೆರಡು ಭಾರಿ ಮಳೆ ಬರುವವರೆಗೆ ಬಿತ್ತನೆ ಮಾಡದಿರಲು ನಿರ್ಧರಿಸಿದ್ದೇನೆ’ ಎಂದು ಕಮಲಾಪುರದ ರೈತ ಶಿವಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಲ್ಕು ವರ್ಷಗಳಿಂದ ತಾಲ್ಲೂಕಿನಲ್ಲಿ ಬರ ಇದೆ. ಈ ಸಲವಾದರೂ ಬರ ದೂರವಾಗಿ ಮಳೆಯಾಗಬಹುದು ಅಂದುಕೊಂಡಿದ್ದೆ. ಆದರೆ, ದೇವರಿಗೆ ಯಾಕೋ ನಮ್ಮ ಭಾಗದ ಮೇಲೆ ಕೋಪ ಇದ್ದಂತೆ ಕಾಣಿಸುತ್ತಿದೆ. ಹೀಗಾಗಿಯೇ ಮಳೆಯಾಗುತ್ತಿಲ್ಲ’ ಎಂದರು.

‘ನೆಲ ಹದ ಮಾಡಿಕೊಂಡು ಬಿತ್ತನೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉತ್ತಮ ಮಳೆಯಾದರಷ್ಟೇ ಬಿತ್ತನೆ ಮಾಡಲಾಗುವುದು. ಒಂದುವರೆ ತಿಂಗಳಾಗುತ್ತ ಬಂದರೂ ಉತ್ತಮ ಮಳೆಯಾಗಿಲ್ಲ. ಈ ಸಲವೂ ಬರಗಾಲದ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ’ ಎಂದು ಹೇಳಿದರು.

‘ಸಮರ್ಪಕವಾಗಿ ಮಳೆಯಾಗದ ಕಾರಣ ಬಹುತೇಕ ರೈತರು ಬಿತ್ತನೆ ಮಾಡಿಲ್ಲ. ಇದರಿಂದಾಗಿ ಬಿತ್ತನೆಯ ಗುರಿ ಸಾಧಿಸಲು ಆಗಿಲ್ಲ’ ಎಂದು ಕೃಷಿ ಇಲಾಖೆಯ ಅಧಿಕಾರಿ ರೂಪಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT