ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಚಿಲಕನಹಟ್ಟಿ ಗ್ರಾಮದಲ್ಲೀಗ ಮೌನ

Last Updated 25 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ: ಗುರುವಾರ ಬೆಳ್ಳಂಬೆಳಿಗ್ಗೆ ನಡೆದ ಅಪಘಾತದಲ್ಲಿ ಮೂವರು ಕೂಲಿ ಕಾರ್ಮಿಕರು ಮೃತಪಟ್ಟು ಇತರೆ 37 ಜನ ಗಾಯಗೊಂಡ ಚಿಲಕನಹಟ್ಟಿ ಗ್ರಾಮದಲ್ಲಿ ಈಗ ಸೂತಕದ ಛಾಯೆ, ಎಲ್ಲೆಡೆ ಮೌನ ಆವರಿಸಿದೆ.

ನಾಲ್ಕು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದೆ ಬರದಿಂದ ತತ್ತರಿಸಿರುವ ಗ್ರಾಮದ ಜನ ಉದ್ಯೋಗ ಖಾತ್ರಿ ಅಡಿ ಕೆಲಸ ಮಾಡಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದರು. ಆದರೆ, ವಿಧಿ ಅದಕ್ಕೂ ಅವರನ್ನು ಬಿಡಲಿಲ್ಲ.

ಗ್ರಾಮದ 93 ಜನ ಕೂಲಿ ಕಾರ್ಮಿಕರು ಬಸವನದುರ್ಗ ಕೆರೆಯಲ್ಲಿ ಹೂಳು ತೆಗೆಯುವ ಕೆಲಸದಲ್ಲಿ ನಿರತರಾಗಿದ್ದರು. ಬೇಸಿಗೆಯ ಸುಡುವ ಬಿಸಿಲು ಇರುವುದರಿಂದ ನಿತ್ಯ ಬೆಳಗಿನ ಜಾವ ಮೂರು ಟ್ರ್ಯಾಕ್ಟರ್‌ಗಳಲ್ಲಿ ಬಂದು ಕೆಲಸ ಮಾಡುತ್ತಿದ್ದರು. ಇಂದು ಕೂಡ ಎಂದಿನಂತೆ ಕೆಲಸಕ್ಕೆ ಹೋಗುತ್ತಿದ್ದರು. ಮೊದಲ ಎರಡು ಟ್ರಾಕ್ಟರ್‌ಗಳಲ್ಲಿ 60 ಜನ ಕೆರೆಗೆ ತಲುಪಿದರು. ಮೂರನೇ ಟ್ರಾಕ್ಟರ್‌ನಲ್ಲಿದ್ದ ಬರುತ್ತಿದ್ದ 40 ಜನ ಕನಸು ಮನಸ್ಸಿನಲ್ಲಿ ಯೋಚಿಸದ ಅಪಘಾತಕ್ಕೆ ಸಾಕ್ಷಿಯಾಗಬೇಕಾಯಿತು.

ಮೂವರ ಸಾವು, 37 ಜನ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಬರಸಿಡಿಲು ಬಡಿದಂತಾಗಿ ಗ್ರಾಮದಲ್ಲಿ ಮೌನ ಆವರಿಸಿಕೊಂಡಿದೆ. ಎಲ್ಲರ ಕಣ್ಣಾಲಿಗಳು ಒದ್ದೆಯಾಗಿವೆ. ಘಟನೆಯಿಂದ ಜರ್ಝರಿತರಾಗಿದ್ದಾರೆ. ಮೃತ ಮೂವರ ದೇಹ ಗ್ರಾಮಕ್ಕೆ ಬರುತ್ತಿದ್ದಂತೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಪಘಾತದಲ್ಲಿ ಮೃತಪಟ್ಟ ರೇಣುಕಮ್ಮ, ಯರ್ರಿಸ್ವಾಮಿ ಹಾಗೂ ಮಲ್ಲಮ್ಮ ಅವರ ಮನೆಗೆಶಾಸಕ ಎಲ್.ಬಿ.ಪಿ.ಭೀಮಾನಾಯ್ಕ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ನಿತೀಶ್, ಸಾರಿಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು. ಇದೇ ಸಂದರ್ಭದಲ್ಲಿ ಮೃತರ ಕುಟುಂಬದವರಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ತಲಾ ₹75 ಸಾವಿರ ರೂಪಾಯಿ ಚೆಕ್ ಹಾಗೂ ಸಾರಿಗೆ ಇಲಾಖೆಯ ವತಿಯಿಂದ ನಗದು ₹15 ಸಾವಿರ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT