ಭಾನುವಾರ, ಸೆಪ್ಟೆಂಬರ್ 26, 2021
21 °C
ಮಳೆಗಾಲ ಆರಂಭವಾದರೂ ಮುಗಿಯದ ರಾಜಕಾಲುವೆ ನಿರ್ಮಾಣ ಕೆಲಸ; ಇಡೀ ಪರಿಸರ ಕಲುಷಿತ

ಆಮೆಗತಿ ಕಾಮಗಾರಿ; ಜನರಿಗೆ ನಿತ್ಯ ನರಕ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಇಲ್ಲಿನ ಗಾಂಧಿ ನಗರದಲ್ಲಿ ಆಮೆಗತಿಯಲ್ಲಿ ರಾಜಕಾಲುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ ಸ್ಥಳೀಯರ ಬದುಕು ನರಕವಾಗಿದೆ.

ಡಾ.ಬಿ. ಆರ್‌. ಅಂಬೇಡ್ಕರ್‌ ವೃತ್ತದಿಂದ ಚಿತ್ತವಾಡ್ಗಿ ಠಾಣೆಯ ವರೆಗೆ ರಾಜಕಾಲುವೆಯನ್ನು ಅಗೆಯಲಾಗಿದೆ. ಅದರಲ್ಲಿನ ಹೂಳು, ಹೊಲಸು ರಸ್ತೆಯ ಮೇಲೆ ಸುರಿಯಲಾಗಿದೆ. ಇದರಿಂದಾಗಿ ಇಡೀ ಪರಿಸರ ಕಲುಷಿತಗೊಂಡಿದೆ. ಅಷ್ಟೇ ಅಲ್ಲ, ಕಾಮಗಾರಿಗಾಗಿ ಮರಳು, ಕಾಂಕ್ರೀಟ್‌ ರಸ್ತೆಯ ಬದಿ ಸುರಿಯಲಾಗಿದೆ.

ಒಂದೆಡೆ ಹೊಲಸು, ಮತ್ತೊಂದೆಡೆ ನಿರ್ಮಾಣದ ವಸ್ತುಗಳನ್ನು ಸುರಿದಿರುವ ಕಾರಣ ಜನ ಹಾಗೂ ವಾಹನಗಳ ಓಡಾಟಕ್ಕೆ ರಸ್ತೆ ಕಿರಿದಾಗಿದೆ. ಸ್ವಲ್ಪ ಮಳೆ ಬಂದರೂ ಎಲ್ಲೆಡೆ ಅದು ಹರಿದಾಡುತ್ತಿದೆ. ದುರ್ಗಂಧ ಉಂಟಾಗುತ್ತಿದೆ. ಸಾರ್ವಜನಿಕರಿಗೆ ಓಡಾಡಲು ಬಹಳ ಕಿರಿಕಿರಿ ಉಂಟಾಗುತ್ತಿದೆ. ರಸ್ತೆಗೆ ಹೊಂಡಿಕೊಂಡಂತಿರುವ ಮಳಿಗೆ, ಮನೆಯವರ ಪರಿಸ್ಥಿತಿ ಹೇಳ ತೀರದಾಗಿದೆ.

ಮಳಿಗೆ, ಮನೆಗಳಿಗೆ ಹೋಗಲು ಜನ ನಿತ್ಯ ಹರಸಾಹಸ ಪಡುತ್ತಿದ್ದಾರೆ. ಅದರಲ್ಲೂ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಅನೇಕ ಜನ ಬಿದ್ದು ಗಾಯಗೊಂಡಿದ್ದಾರೆ. ದುರ್ವಾಸನೆಯಿಂದ ಜನ ಕಂಗೆಟ್ಟಿ ಹೋಗಿದ್ದಾರೆ. ಮಳಿಗೆಗಳಲ್ಲಿ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿದೆ.

ನಗರದಿಂದ ಚಿತ್ತವಾಡ್ಗಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ದೈನಂದಿನ ಕೆಲಸ, ಶಾಲಾ–ಕಾಲೇಜುಗಳಿಗೆ ಹೋಗುವವರು ಇದೇ ರಸ್ತೆ ಬಳಸುತ್ತಾರೆ. ಆದರೆ, ರಸ್ತೆಯಲ್ಲಿ ಓಡಾಟಕ್ಕೆ ತೊಂದರೆ ಆಗುತ್ತಿರುವ ಕಾರಣ ಜನ ಸುತ್ತು ಬಳಸಿ ಬೇರೆ ಮಾರ್ಗದಿಂದ ಓಡಾಡುತ್ತಿದ್ದಾರೆ.

ಅಮೃತ ಯೋಜನೆಯ ಅಡಿಯಲ್ಲಿ ರಾಜಕಾಲುವೆ ನಿರ್ಮಾಣ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಮೂರು ತಿಂಗಳ ಹಿಂದೆಯೇ ಕೆಲಸ ಆರಂಭವಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ಮಳೆಗಾಲ ಆರಂಭವಾಗಿ ತಿಂಗಳಾಗುತ್ತ ಬಂದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಕಾಮಗಾರಿ ಇನ್ನೂ ಆರಂಭಿಕ ಹಂತದಲ್ಲಿಯೇ.

ಗಾಂಧಿ ನಗರದಿಂದ ಸ್ವಲ್ಪವೇ ದೂರದಲ್ಲಿರುವ ತಾಲ್ಲೂಕು ಕಚೇರಿ ಎದುರು ಕೆಲವೇ ದಿನಗಳ ಹಿಂದೆ ಚರಂಡಿ, ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈಗ ಅದು ಮುಗಿಯುವ ಹಂತಕ್ಕೆ ಬಂದಿದೆ. ಇದು ಕೂಡ ಅಲ್ಲಿನವರ ಬೇಸರಕ್ಕೆ ಕಾರಣವಾಗಿದೆ. ಜನಸಾಮಾನ್ಯರಿರುವ ಬಡಾವಣೆಗೊಂದು, ಸರ್ಕಾರಿ ಕಚೇರಿಗೊಂದು ಎಂದು ಮಾತಾಡಿಕೊಳ್ಳುತ್ತಿದ್ದಾರೆ.

‘ರಾಜಕಾಲುವೆ ದುರಸ್ತಿಗೊಳಿಸುತ್ತಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಈ ಹಿಂದೆ ಚರಂಡಿ ಕಿರಿದಾಗಿತ್ತು. ಈಗ ಬಹಳ ಅಗಲ ಮಾಡಿದ್ದಾರೆ. ಮಳೆಯಾದರೆ ಮನೆ, ಮಳಿಗೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಏನೇ ಮಾಡಿದರೂ ಜನರಿಗೆ ಅನುಕೂಲವಾಗಬೇಕು ಹೊರತು ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು’ ಎಂದು ಗಾಂಧಿ ನಗರದ ನಿವಾಸಿ ಹುಲುಗಪ್ಪ ಹೇಳಿದರು.

‘ತಾಲ್ಲೂಕು ಕಚೇರಿ ಎದುರು ಕೆಲವೇ ದಿನಗಳ ಹಿಂದೆ ಕೆಲಸ ಕೈಗೆತ್ತಿಕೊಳ್ಳಲಾಗಿತ್ತು. ಈಗ ಅದು ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಅದಕ್ಕಿಂತ ಎರಡ್ಮೂರು ತಿಂಗಳ ಹಿಂದೆಯೇ ಚರಂಡಿ ಕೆಲಸ ಆರಂಭವಾದರೂ ಮುಗಿಯುತ್ತಿಲ್ಲ. ಅಧಿಕಾರಿಗಳು ಈ ರೀತಿ ತಾರತಮ್ಯ ಮಾಡಬಾರದು. ಜನರ ತೊಂದರೆ ಅರಿತುಕೊಂಡು ಕೆಲಸ ಮಾಡಬೇಕು’ ಎಂದು ಶಾಂತಮ್ಮ ಆಗ್ರಹಿಸಿದರು.

‘ರಸ್ತೆ ಮೇಲೆ ಹೊಲಸು ಹಾಕಿರುವ ಕಾರಣ ಗಲೀಜು ಆಗಿದೆ. ಕೆಟ್ಟ ದುರ್ವಾಸನೆ ಹರಡಿದೆ. ಮನೆಯಲ್ಲಿ ಕೂರಲು ಆಗುತ್ತಿಲ್ಲ. ಕೂಡಲೇ ಹೊಲಸು ಬೇರೆಡೆ ಸ್ಥಳಾಂತರಿಸಬೇಕು. ಆದಷ್ಟು ಶೀಘ್ರ ಕಾಮಗಾರಿ ಮುಗಿಸಬೇಕು. ಅಲ್ಲಿಯವರೆಗೆ ಜನರಿಗೆ ಓಡಾಡಲು ತಾತ್ಕಾಲಿಕ ವ್ಯವಸ್ಥೆ ಮಾಡಬೇಕು’ ಎಂದು ಲಲಿತಾ ಒತ್ತಾಯಿಸಿದರು.

ಈ ಕುರಿತು ನಗರಸಭೆ ಪೌರಾಯುಕ್ತ ವಿ. ರಮೇಶ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು