ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ಭಾಗದಲ್ಲೇ ಮೂಲಸೌಕರ್ಯ ಮರೀಚಿಕೆ

ನಾಲ್ಕನೇ ವಾರ್ಡ್‌ನಲ್ಲಿ ದೂಳಿನಿಂದ ಜನ ಕಂಗಾಲು; ಇಕ್ಕಟ್ಟಿನ ಬಡಾವಣೆಗಳಲ್ಲಿ ಜನರ ಬದುಕು ದುಸ್ತರ
Last Updated 23 ಜನವರಿ 2019, 14:50 IST
ಅಕ್ಷರ ಗಾತ್ರ

ಹೊಸಪೇಟೆ: ಇದು ನಗರದ ಹೃದಯ ಭಾಗದಲ್ಲಿರುವ ವಾರ್ಡ್‌. ಆದರೆ, ಈ ವಾರ್ಡ್‌ ವ್ಯಾಪ್ತಿಗೆ ಬರುವ ಬಡಾವಣೆಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳು ಇಲ್ಲ.

ಇದು ನಗರಸಭೆಯ ನಾಲ್ಕನೇ ವಾರ್ಡ್‌ನ ದುಃಸ್ಥಿತಿ.ನ್ಯಾಯಾಲಯ ಸಂಕೀರ್ಣ, ತಾಲ್ಲೂಕು ಕಚೇರಿ, ನಗರಾಭಿವೃದ್ಧಿ ಪ್ರಾಧಿಕಾರದಂತಹ ಪ್ರಮುಖ ಕಚೇರಿಗಳು ಈ ವಾರ್ಡ್‌ಗೆ ಹೊಂದಿಕೊಂಡಿವೆ.

ದಿನಬೆಳಗಾದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಡಾವಣೆಯ ಮುಖ್ಯರಸ್ತೆಗಳ ಮೂಲಕವೇ ಓಡಾಡುತ್ತಾರೆ. ಆದರೆ, ಜನರ ಸಮಸ್ಯೆ ಪರಿಹರಿಸುವ ಗೋಜಿಗೆ ಹೋಗಿಲ್ಲ. ’ಸಮಸ್ಯೆಗಳು ಗೊತ್ತಿದ್ದರೂ ಗೊತ್ತಿಲ್ಲದಂತೆ ನಟಿಸುತ್ತಾರೆ’ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ವಾರ್ಡ್‌ ವ್ಯಾಪ್ತಿಯ ಪೊಲೀಸ್‌ ಕ್ವಾಟರ್ಸ್‌, ಗಾಂಧಿ ನಗರ, ರಾಮಕೃಷ್ಣ ಬಡಾವಣೆ, ಕಾಂಪೌಂಡರ್‌ ಲೈನ್‌, ಜಬ್ಬಲ್‌ ಸರ್ಕಲ್‌, ಪಟೇಲ್‌ ನಗರದಲ್ಲಿ ರಸ್ತೆ, ಸ್ವಚ್ಛತೆ ಸೇರಿದಂತೆ ಯಾವುದು ಸರಿಯಿಲ್ಲ. ಪೊಲೀಸ್‌ ಕ್ವಾಟರ್ಸ್‌ನಲ್ಲಿ ಈಗಲೂ ಕೆಮ್ಮಣ್ಣಿನ ರಸ್ತೆಗಳಲ್ಲೇ ಜನ ಓಡಾಡುತ್ತಾರೆ. ಮಳೆ ಬಂದರೆ ಇಡೀ ಪ್ರದೇಶ ಕೊಚ್ಚೆಯಾಗಿ ಬದಲಾಗುತ್ತದೆ.

ರಾಮಕೃಷ್ಣ ಬಡಾವಣೆ, ಕಾಂಪೌಂಡರ್‌ ಲೈನ್‌, ಪಟೇಲ್‌ ನಗರದಲ್ಲಿ ಚರಂಡಿಗಳಲ್ಲಿನ ತ್ಯಾಜ್ಯ ವಿಲೇವಾರಿಯಾಗಿ ಅದೆಷ್ಟೊ ತಿಂಗಳು ಕಳೆದಿವೆಯೋ ಗೊತ್ತಿಲ್ಲ. ಅದರಿಂದ ಎಲ್ಲೆಡೆ ದುರ್ಗಂಧ ಹರಡಿಕೊಂಡಿದೆ. ಇನ್ನು ಗಾಂಧಿ ನಗರದ ದುಃಸ್ಥಿತಿ ಯಾರು ಕೂಡ ಕೇಳಬೇಕಿಲ್ಲ. ಅಷ್ಟರಮಟ್ಟಗೆ ಜನ ಸಮಸ್ಯೆ ಎದುರಿಸುತ್ತಿದ್ದಾರೆ.

ಎಲ್ಲ ಬಡಾವಣೆಗಳಲ್ಲಿ ರಸ್ತೆ ಅತಿಕ್ರಮಿಸಿ ಮನೆಗಳನ್ನು ನಿರ್ಮಿಸಲಾಗಿದೆ. ದ್ವಿಚಕ್ರ ವಾಹನ ಹೋಗಲು ಹೆಣಗುವಂತಹ ಪರಿಸ್ಥಿತಿ ಇದೆ. ಕಸ ಸಂಗ್ರಹಿಸುವ ಟಿಪ್ಪರ್‌, ಆಟೊ ರಿಕ್ಷಾ, ಆಂಬುಲೆನ್ಸ್‌ ಸೇರಿದಂತೆ ಯಾವ ವಾಹನವೂ ಬಡಾವಣೆ ಒಳಗೆ ಸಂಚರಿಸಲು ಆಗುವುದಿಲ್ಲ. ಎಲ್ಲದಕ್ಕೂ ಜನ ಮುಖ್ಯರಸ್ತೆಗೆ ಬರಬೇಕಾದ ಅನಿವಾರ್ಯತೆ ಇದೆ.

ಅನೇಕ ವರ್ಷಗಳಿಂದ ಗಾಂಧಿ ನಗರದ ಕೊನೆ ಭಾಗದ ಜನರಿಗೆ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಈ ಕುರಿತು ಸಂಬಂಧಿಸಿದವರಿಗೆ ಹಲವು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಒಳಚರಂಡಿ ಕಾಮಗಾರಿ ಪೂರ್ಣಗೊಂಡರೂ ಅವುಗಳಿಗೆ ಸಂಪರ್ಕ ಕೊಟ್ಟಿಲ್ಲ. ಇದರಿಂದ ಹೊಲಸು ಹರಿದು ಹೋಗದೆ ಗಬ್ಬು ನಾರುತ್ತಿದ್ದು, ಜನ ಅದರಲ್ಲೇ ಅನಿವಾರ್ಯವಾಗಿ ಜೀವನ ನಡೆಸುವಂತಾಗಿದೆ.

‘ಚರಂಡಿ ನೀರು ಹರಿದು ಹೋಗುವುದಿಲ್ಲ. ಮಳೆ ಬಂದರೆ ಮನೆಗಳಿಗೆ ನುಗ್ಗಿ ಸಮಸ್ಯೆ ಆಗುತ್ತದೆ. ಬಹುತೇಕ ಜನರಿಗೆ ಶೌಚಾಲಯಗಳಿಲ್ಲ. ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ಬಹಿರ್ದೆಸೆಗೆ ಹೋಗುವ ಅನಿವಾರ್ಯತೆ ಇದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಜಯಮ್ಮ.

‘ಅನೇಕ ವರ್ಷಗಳ ಹಿಂದೆ ಸರ್ಕಾರ ಕಟ್ಟಿಸಿಕೊಟ್ಟಿರುವ ಜನತಾ ಮನೆಗಳು ಶಿಥಿಲಗೊಂಡಿದ್ದು, ಬೀಳುವ ಹಂತದಲ್ಲಿವೆ. ಅವುಗಳನ್ನು ದುರಸ್ತಿ ಮಾಡಿಕೊಡಬೇಕು’ ಎನ್ನುತ್ತಾರೆ ಸ್ಥಳೀಯರಾದ ಶ್ರೀನಿವಾಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT