ಗುರುವಾರ , ನವೆಂಬರ್ 21, 2019
20 °C
ವಿಜಯನಗರ ಕ್ಷೇತ್ರದ ಉಪಚುನಾವಣೆ; ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

‘ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ’

Published:
Updated:

ಹೊಸಪೇಟೆ: ‘ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಸೋಮವಾರದಿಂದ (ನ.11) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಚುನಾವಣೆಯಲ್ಲಿ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌ ತಿಳಿಸಿದರು.

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣಾ ಸಂಬಂಧಿ ಅಕ್ರಮಗಳು ನಡೆಯುತ್ತಿದ್ದರೆ ಸಾರ್ವಜನಿಕರು ದೂರವಾಣಿ ಸಂಖ್ಯೆ 08394–232209 ಅಥವಾ 1950ಗೆ ಕರೆ ಮಾಡಿ ಮಾಹಿತಿ ಕೊಡಬಹುದು’ ಎಂದರು.

‘ಈ ಹಿಂದೆ ಚುನಾವಣೆಗೆ ದಿನಾಂಕ ನಿಗದಿಗೊಳಿಸಿ, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿತು. ಸುಪ್ರೀಂಕೋರ್ಟ್‌ ತಡೆ ನೀಡಿದ್ದರಿಂದ ಈಗ ಚುನಾವಣೆ ನಡೆಯುತ್ತಿದೆ. ಈ ಹಿಂದೆ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಅವುಗಳನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

‘ಡಿಸೆಂಬರ್‌ 5ರಂದು ಬೆಳಿಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದೆ. ಡಿ. 9ರಂದು ಬೆಳಿಗ್ಗೆ ಎಂಟು ಗಂಟೆಯಿಂದ ನಗರದ ಸಂಡೂರು ರಸ್ತೆಯ ಲಿಟ್ಲ್‌ ಫ್ಲವರ್‌ ಶಾಲೆಯಲ್ಲಿ (ಎಲ್‌.ಎಫ್‌.ಎಸ್‌.) ಮತ ಎಣಿಕೆ ಕೆಲಸ ನಡೆಯಲಿದೆ’ ಎಂದು ತಿಳಿಸಿದರು.

‘ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 247 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಈ ಪೈಕಿ ಏಳು ಮತಗಟ್ಟೆ ಅತಿ ಸೂಕ್ಷ್ಮ, 37 ಸೂಕ್ಷ್ಮ ಎಂದು ಗುರುತಿಸಲಾಗಿದೆ. ಎರಡು ಪಿಂಕ್‌ ಮತಗಟ್ಟೆಗಳಾಗಿ ಮಾಡಲಾಗುವುದು. ಅಕ್ರಮ ತಡೆಗೆ ಈಗಾಗಲೇ 21 ಸೆಕ್ಟರ್‌ ಅಧಿಕಾರಿಗಳು, 15 ಫ್ಲೈಯಿಂಗ್‌ ಸ್ಕ್ವಾಡ್‌ಗಳನ್ನು ರಚಿಸಲಾಗಿದೆ’ ಎಂದು ವಿವರಿಸಿದರು.

‘ಸೋಮವಾರ ಅಧಿಸೂಚನೆ ಹೊರಡಿಸುತ್ತಿದ್ದಂತೆ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಬ್ಯಾನರ್‌, ಬಂಟಿಂಗ್ಸ್‌, ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗುವುದು. ನಾಮಪತ್ರ ಸಲ್ಲಿಸಲು ಅಭ್ಯರ್ಥಿಯೊಂದಿಗೆ ನಾಲ್ವರು ಬರಬಹುದು. ನಾಮಪತ್ರ ಸಲ್ಲಿಸುವ ಕೇಂದ್ರದಿಂದ 100 ಮೀಟರ್‌ ದೂರದ ವರೆಗೆ ಅಭ್ಯರ್ಥಿಗಳ ಮೂರು ವಾಹನಗಳನ್ನು ತರಲು ಅವಕಾಶ ಮಾಡಿಕೊಡಲಾಗುವುದು. ಒಬ್ಬ ಅಭ್ಯರ್ಥಿ ಚುನಾವಣೆಯಲ್ಲಿ ₹28 ಲಕ್ಷ ವೆಚ್ಚ ಮಾಡಬಹುದು’ ಎಂದು ಮಾಹಿತಿ ನೀಡಿದರು.

‘ಯಾವುದೇ ಅಭ್ಯರ್ಥಿ ಪಕ್ಷದ ಚಿಹ್ನೆ ಇರುವ ಟೋಪಿ, ಶಲ್ಯ ವಿತರಿಸುವಂತಿಲ್ಲ. ಕೊಡುಗೆಗಳನ್ನು ನೀಡುವಂತಿಲ್ಲ. ಚುನಾವಣಾ ಪ್ರಚಾರದ ಕರಪತ್ರಗಳ ಮೇಲೆ ಕಡ್ಡಾಯವಾಗಿ ಅಭ್ಯರ್ಥಿ ಹಾಗೂ ಅದರ ಮುದ್ರಕರ ಹೆಸರು ಪ್ರಕಟಿಸುವುದು ಕಡ್ಡಾಯ. ನಗರಕ್ಕೆ ಸಂಪರ್ಕ ಕಲ್ಪಿಸುವ ಏಳು ಪ್ರಮುಖ ಕಡೆಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗುವುದು. ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುವುದು’ ಎಂದು ಹೇಳಿದರು.

‘ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ 72ರಷ್ಟು ಮತದಾನವಾಗಿತ್ತು. ಈ ಸಲ ಅದರ ಪ್ರಮಾಣವನ್ನು ಹೆಚ್ಚಿಸಲು ಸ್ವೀಪ್‌ ಸಮಿತಿ ಮೂಲಕ ಹೆಚ್ಚಿನ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

‘ತಾಲ್ಲೂಕಿನ ವ್ಯಾಸನಕೆರೆ ಗ್ರಾಮಸ್ಥರು ಕಲ್ಲಹಳ್ಳಿಗೆ ಹೋಗಿ ಮತದಾನ ಮಾಡಬೇಕಿದ್ದು, ಅವರಿಗೆ ಚುನಾವಣಾ ಆಯೋಗದಿಂದ ವಾಹನ ವ್ಯವಸ್ಥೆ ಮಾಡುವುದರ ಬಗ್ಗೆ ಯೋಚಿಸಲಾಗುತ್ತಿದೆ’ ಎಂದು ಪ್ರಶ್ನೆಗೆ ತಿಳಿಸಿದರು. ತಹಶೀಲ್ದಾರ್‌ ಡಿ.ಜಿ. ಹೆಗಡೆ ಇದ್ದರು.

ಪ್ರತಿಕ್ರಿಯಿಸಿ (+)