ಶನಿವಾರ, ನವೆಂಬರ್ 23, 2019
17 °C
ಪ್ರವಾಸೋದ್ಯಮ ಸ್ನಾತಕೋತ್ತರ ಕೋರ್ಸ್‌ ತರಗತಿ ಆರಂಭ

‘ವಸ್ತು ಸಂಗ್ರಹಾಲಯ ಸಂಸ್ಕೃತಿಯ ಬಿಂಬ’

Published:
Updated:
Prajavani

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಪುರಾತತ್ವ, ವಸ್ತು ಸಂಗ್ರಹಾಲಯ ಶಾಸ್ತ್ರ ಮತ್ತು ಪ್ರವಾಸೋದ್ಯಮ ಸ್ನಾತಕೋತ್ತರ, ಡಿಪ್ಲೊಮಾ ಕೋರ್ಸ್‌ಗಳ ತರಗತಿಗಳ ಉದ್ಘಾಟನಾ ಸಮಾರಂಭ ನಡೆಯಿತು.

ಉದ್ಘಾಟನೆ ನೆರವೇರಿಸಿದ ಕುಲಪತಿ ಪ್ರೊ. ಸ.ಚಿ. ರಮೇಶ, ’ವಸ್ತುಸಂಗ್ರಹಾಲಯ ಎನ್ನುವುದು ನಿರ್ಜೀವ ವಸ್ತುಗಳ ತಾಣವಲ್ಲ, ಅದು ನಮ್ಮ ಪ್ರಾಚೀನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಜೀವಂತ ತಾಣ‘ ಎಂದು ಹೇಳಿದರು.

’ಗ್ರಂಥಾಲಯದಲ್ಲಿ ಪುಸ್ತಕಗಳ ಮೂಲಕ ಜ್ಞಾನವನ್ನು ಪಡೆದರೆ ವಸ್ತು ಸಂಗ್ರಹಾಲಯದಲ್ಲಿ ವಸ್ತುಗಳನ್ನು ನೋಡುವ ಮೂಲಕ ಜ್ಞಾನ ಮತ್ತು ಮಾಹಿತಿ ಪಡೆಯಬಹುದು. ನಮ್ಮ ಸಂಸ್ಕೃತಿ, ಪರಂಪರೆ ಅರಿಯದೇ ನಮ್ಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಪ್ರಾಚೀನ ಸಂಸ್ಕೃತಿ, ಪರಂಪರೆ ಅರಿಯಲು ವಸ್ತು ಸಂಗ್ರಹಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ‘ ಎಂದು ತಿಳಿಸಿದರು.

’ಇತ್ತೀಚಿನ ದಿನಗಳಲ್ಲಿ ಅನ್ನ, ಆರೋಗ್ಯ, ಉದ್ಯೋಗ, ಜ್ಞಾನ ಎಲ್ಲವನ್ನು ನೀಡುವ ಕೋರ್ಸ್‍ಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪುರಾತತ್ವ, ವಸ್ತುಸಂಗ್ರಹಾಲಯ ಶಾಸ್ತ್ರ ಮತ್ತು ಪ್ರವಾಸೋದ್ಯಮ ಡಿಪ್ಲೊಮಾ, ಸ್ನಾತಕೋತ್ತರ ಕೋರ್ಸ್‍ಗಳನ್ನು ವಿಶ್ವವಿದ್ಯಾಲಯದಲ್ಲಿ ಆರಂಭಿಸಲಾಗಿದೆ‘ ಎಂದರು.

’ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಿರುವ ವಸ್ತುಗಳನ್ನು ವಿಂಗಡಿಸಿ, ಉಡುಗೆ-ತೊಡುಗೆ, ಅಲಂಕಾರಿಕ ವಸ್ತುಗಳು, ವೈದ್ಯಕೀಯ ಉಪಕರಣಗಳು, ಕೃಷಿ ಉಪಕರಣಗಳು, ಅಳತೆ ಮಾಪನಗಳು, ದೇಶಿ ತಂತ್ರಜ್ಞಾನ ಸೇರಿದಂತೆ ಸುಮಾರು 200 ವಸ್ತುಗಳಿವೆ‘ ಎಂದು ತಿಳಿಸಿದರು.

ಲಲಿತಕಲೆಗಳ ನಿಕಾಯದ ಡೀನ್‌ ಕೆ. ರವೀಂದ್ರನಾಥ ಮಾತನಾಡಿ, ’ವಸ್ತು ಸಂಗ್ರಹಾಲಯಗಳು ಕಲೆ ಮತ್ತು ಸಂಸ್ಕೃತಿಯ ಪ್ರತೀಕ. ಪರಂಪರೆಯ ಸಂರಕ್ಷಣೆಯ ನೆಪದಲ್ಲಿ ಚರಿತ್ರೆಯನ್ನು ನಿರ್ಮಾಣ ಮಾಡುವಲ್ಲಿ ವಸ್ತು ಸಂಗ್ರಾಹಲಯಗಳು ನೆರವಾಗುತ್ತವೆ. ಪುರಾತತ್ವ, ವಸ್ತು ಸಂಗ್ರಹಾಲಯಶಾಸ್ತ್ರ ಮತ್ತು ಪ್ರವಾಸೋದ್ಯಮ ಇವು ಒಂದೇ ಭೂಮಿಕೆಯಲ್ಲಿ ಕವಲೊಡೆದ ಮೂರು ಕ್ಷೇತ್ರಗಳು’ ಎಂದು ವಿವರಿಸಿದರು.

ಕುಲಸಚಿವ ಎ.ಸುಬ್ಬಣ್ಣ ರೈ, ’ವಸ್ತು ಸಂಗ್ರಹಾಲಯಶಾಸ್ತ್ರ ಮತ್ತು ಪ್ರವಾಸೋದ್ಯಮ ಬಹುಪಯೋಗಿ, ಬಹುಶಿಸ್ತೀಯ ಕೋರ್ಸ್‍ಗಳು. ಇವು ಒಂದಕ್ಕೊಂದು ಪೂರಕವಾಗಿದ್ದು, ನಮ್ಮ ಸುತ್ತಮುತ್ತಲಲ್ಲೇ ಉದ್ಯೋಗಾವಕಾಶಗಳನ್ನು ಒದಗಿಸಿಕೊಡುವಲ್ಲಿ ಸಹಾಯಕವಾಗಿವೆ’ ಎಂದು ಹೇಳಿದರು.

ವಸ್ತುಸಂಗ್ರಹಾಲಯ ಮತ್ತು ಪ್ರವಾಸೋದ್ಯಮ ಸಂಶೋಧನಾ ಕೇಂದ್ರದ ನಿರ್ದೇಶಕ ವಾಸುದೇವ ಬಡಿಗೇರ, ಸಂಶೋಧನಾ ವಿದ್ಯಾರ್ಥಿಗಳಾದ ಶ್ವೇತಾ ಆರ್. ಭಸ್ಮೆ, ಮಲ್ಲೇಶಪ್ಪ ಇದ್ದರು.

ಪ್ರತಿಕ್ರಿಯಿಸಿ (+)