ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಸಲಹಾ ಸಮಿತಿ ನಿರ್ಧಾರಕ್ಕಿಲ್ಲ ಕಿಮ್ಮತ್ತು; ಕಾಲುವೆಗೆ ಹರಿಯದ ನೀರು

Last Updated 19 ಜುಲೈ 2021, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆ ಬಲದಂಡೆ ಮೇಲ್ಮಟ್ಟದ ಕಾಲುವೆ (ಎಚ್‌ಎಲ್‌ಸಿ) ಹಾಗೂ ಕೆಳಮಟ್ಟದ ಕಾಲುವೆಗೆ (ಎಲ್‌ಎಲ್‌ಸಿ) ಭಾನುವಾರದಿಂದ (ಜು.18) ನೀರು ಹರಿಸುವ ಕುರಿತು ಇತ್ತೀಚೆಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಒಕ್ಕೊರಲ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ, ಸಭೆಯ ತೀರ್ಮಾನಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.

ಸಭೆಯ ನಿರ್ಧಾರದಂತೆ ಎಡದಂಡೆ ಮುಖ್ಯ ಕಾಲುವೆಗೆ (ಕೊಪ್ಪಳ, ರಾಯಚೂರು ಭಾಗಕ್ಕೆ) ಭಾನುವಾರವೇ ನೀರು ಹರಿಸಲಾಗಿದೆ. ಆದರೆ, ವಿಜಯನಗರ, ಬಳ್ಳಾರಿ ಜಿಲ್ಲೆಗೆ ನೀರುಣಿಸುವ ಎಚ್‌ಎಲ್‌ಸಿ, ಎಲ್‌ಎಲ್‌ಸಿಗೆ ನೀರು ಹರಿಸಿಲ್ಲ. ಎರಡು ಕಾಲುವೆಗಳಲ್ಲಿ ದುರಸ್ತಿ ಕೆಲಸ ಕೈಗೆತ್ತಿಕೊಂಡಿದ್ದು, ಜು. 25ರ ನಂತರ ನೀರು ಹರಿಸಬೇಕೆಂದು ಆಂಧ್ರ ಪ್ರದೇಶದವರು ತುಂಗಭದ್ರಾ ನೀರಾವರಿ ನಿಗಮಕ್ಕೆ ಪತ್ರ ಬರೆದಿದ್ದಾರೆ. ಈ ಕಾರಣಕ್ಕಾಗಿ ಭಾನುವಾರ ಕಾಲುವೆಗಳಿಗೆ ನೀರು ಹರಿಸಿಲ್ಲ. ಅಷ್ಟೇ ಅಲ್ಲ, ತನ್ನ ಪಾಲಿನ ನೀರಿನ ಕುರಿತು ಆಂಧ್ರ ಪ್ರದೇಶದವರು ಇದುವರೆಗೆ ಮಾಹಿತಿಯೂ ಸಹ ನೀಡಿಲ್ಲ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆ ಹಾಗೂ ಆಂಧ್ರ ಪ್ರದೇಶ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಜು. 18ರಿಂದ ನೀರು ಹರಿಸುವುದರ ಬಗ್ಗೆ ಅಭಿಪ್ರಾಯ ಕೇಳಿದಾಗ ಎಲ್ಲರೂ ಸಮ್ಮತಿ ಸೂಚಿಸಿದ್ದರು. ಆದರೆ, ಈಗ ನೀರು ಹರಿಸುವ ದಿನವೇ ಪತ್ರ ಬರೆದು ಅಡ್ಡಿಪಡಿಸಿರುವುದೇಕೇ? ಎನ್ನುವುದು ಸ್ಥಳೀಯ ರೈತರ ಪ್ರಶ್ನೆಯಾಗಿದೆ.

‘ಜು. 18ರಿಂದ ನೀರು ಹರಿಸುವುದರ ಬಗ್ಗೆ ತೀರ್ಮಾನ ತೆಗೆದುಕೊಂಡಾಗ ಆಂಧ್ರ ಪ್ರದೇಶದ ಇಬ್ಬರು ಮುಖ್ಯ ಎಂಜಿನಿಯರ್‌ಗಳು ಸಭೆಯಲ್ಲೇ ಇದ್ದರು. ಆಗ ಅವರು ಯಾವುದೇ ರೀತಿಯ ತಕರಾರು, ಆಕ್ಷೇಪ ಎತ್ತಿರಲಿಲ್ಲ. ಈಗೇಕೇ ತಗಾದೆ ತೆಗೆಯುತ್ತಿದ್ದಾರೆ. ಕಾಲುವೆಯ ದುರಸ್ತಿ ಕೆಲಸ ಇದ್ದರೆ ಸಭೆಯ ಗಮನಕ್ಕೆ ತರಬಹುದಿತ್ತಲ್ಲವೇ?’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ಪ್ರಶ್ನಿಸಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ಸಮ್ಮುಖದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಯಾವುದೇ ಬೆಲೆಯಿಲ್ಲವೇ? ಕಾಲುವೆಗಳಿಗೆ ನೀರು ಹರಿಸುತ್ತಾರೆ ಎಂದು ರೈತರು ಭರವಸೆ ಇಟ್ಟುಕೊಂಡಿದ್ದರು. ಈಗ ಅದೆಲ್ಲ ಹುಸಿಯಾಗಿದೆ. ಹೋದ ವರ್ಷ ತಡವಾಗಿ ಕಾಲುವೆಗೆ ನೀರು ಹರಿಸಿದ್ದರಿಂದ ಭತ್ತಕ್ಕೆ ರೋಗ ಬಂದು ಇಳುವರಿ ಸಾಕಷ್ಟು ಕಡಿಮೆಯಾಗಿತ್ತು. ಈ ವರ್ಷವೂ ಅದೇ ರೀತಿಯಾದರೆ ಯಾರು ಹೊಣೆ?’ ಎಂದು ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT