ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ–ಕೊಟ್ಟೂರು ರೈಲು: ಎರಡು ದಶಕದ ಹೋರಾಟಕ್ಕೆ ಸಿಕ್ಕ ಫಲ

ಸೆ. 15ರಿಂದ ಹೊಸಪೇಟೆ–ಕೊಟ್ಟೂರು ಪ್ರಯಾಣಿಕರ ರೈಲು ಸಂಚಾರದ ಸಂಭ್ರಮ
Last Updated 1 ಸೆಪ್ಟೆಂಬರ್ 2019, 13:21 IST
ಅಕ್ಷರ ಗಾತ್ರ

ಹೊಸಪೇಟೆ: ನಗರದಿಂದ ಕೊಟ್ಟೂರಿಗೆ ಪ್ರಯಾಣಿಕರ ರೈಲು ಓಡಿಸಬೇಕೆಂಬ ಎರಡು ದಶಕಗಳ ಹೋರಾಟಕ್ಕೆ ಈಗ ಫಲ ಸಿಗುವ ಕಾಲ ಬಂದಿದ್ದು, ಈ ಭಾಗದ ಜನರ ಸಂಭ್ರಮಕ್ಕೆ ಕಾರಣವಾಗಿದೆ.

‘ಸೆ. 15ರಿಂದ ಎರಡೂ ಪಟ್ಟಣಗಳ ನಡುವೆ ಪ್ಯಾಸೆಂಜರ್‌ ರೈಲು ಓಡಿಸಲಾಗುವುದು’ ಎಂದು ಈಗಾಗಲೇ ರೈಲ್ವೆ ಇಲಾಖೆಯ ಅಧಿಕಾರಿಗಳು ಘೋಷಿಸಿದ್ದಾರೆ. ಆ ನಿಟ್ಟಿನಲ್ಲಿ ಭರದ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ನಿಲ್ದಾಣಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದ್ದು, ಕೊನೆಯ ಹಂತದ ಕೆಲಸ ಪ್ರಗತಿಯಲ್ಲಿದೆ.

ನಗರದ ಟಿ.ಬಿ. ಡ್ಯಾಂ ನಿಲ್ದಾಣ, ತಾಲ್ಲೂಕಿನ ವ್ಯಾಸನಕೆರೆ ಹಾಗೂ ಮರಿಯಮ್ಮನಹಳ್ಳಿ ಬಳಿ ಹೈಟೆನ್ಶನ್‌ ವಿದ್ಯುತ್‌ ತಂತಿ ಎತ್ತರಕ್ಕೇರಿಸುವ ಕಾಮಗಾರಿ ಪೂರ್ಣಗೊಂಡಿದೆ. ನಗರ ಹೊರವಲಯದ ತುಂಗಭದ್ರಾ ನಿಲ್ದಾಣದಲ್ಲಿ ಪ್ಲಾಟ್‌ಫಾರಂ ನಿರ್ಮಾಣ ಕೆಲಸ ಮುಗಿಯುವ ಹಂತಕ್ಕೆ ಬಂದಿದೆ. ಹಗರಿಬೊಮ್ಮನಹಳ್ಳಿ ನಿಲ್ದಾಣದಲ್ಲಿ ಜಂಗಲ್‌ ಕಟಿಂಗ್‌, ಎಲ್ಲ ಕಟ್ಟಡಗಳಿಗೆ ಬಣ್ಣ ಬಳಿಯುವುದು, ವಿದ್ಯುತ್‌ ಸಂಪರ್ಕ, ವಿದ್ಯುದ್ದೀಪಗಳ ಅಳವಡಿಕೆ, ಜನರೇಟರ್‌ ವ್ಯವಸ್ಥೆ, ದೂರವಾಣಿ ಸಂಪರ್ಕ, ಎರಡು ಗೇಟ್‌ಗಳಲ್ಲಿ ಸಿಗ್ನಲ್‌ ಕಾಮಗಾರಿ ಪೂರ್ಣಗೊಂಡಿದೆ. ಅಷ್ಟೇ ಅಲ್ಲ, ಕಾಸಿಂ ಸಾಬ್‌ ಎಂಬುವರನ್ನು ಸ್ಟೇಶನ್‌ ಮಾಸ್ಟರ್‌ ಆಗಿ ನೇಮಕ ಮಾಡಲಾಗಿದೆ.

‘ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಸನಗಳ ವ್ಯವಸ್ಥೆ, ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕೆಲಸ ನಡೆದಿದೆ. ಎಲ್ಲ ಕೆಲಸ ಸೆ. 12ರ ಒಳಗೆ ಪೂರ್ಣಗೊಳ್ಳಲಿವೆ’ ಎಂದು ಮಾಸ್ಟರ್‌ ಕ್ರಾಫ್ಟ್‌ ಉಸ್ತುವಾರಿ ಅಧಿಕಾರಿ ರಾಜ ಸಾಹೇಬ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಹಿನ್ನೆಲೆ: 1990ರಲ್ಲಿ ಹೊಸಪೇಟೆ–ಕೊಟ್ಟೂರು–ಸ್ವಾಮಿಹಳ್ಳಿ ನಡುವೆ ಮೀಟರ್‌ ಗೇಜ್‌ ಇತ್ತು. ಆ ವೇಳೆ ಪ್ರಯಾಣಿಕ ಹಾಗೂ ಸರಕು ಸಾಗಣೆ ರೈಲು ಸಂಚರಿಸುತ್ತಿದ್ದವು. 1995ರಲ್ಲಿ ಈ ಮಾರ್ಗವನ್ನು ಬ್ರಾಡ್‌ಗೇಜ್‌ಗೆ ಪರಿವರ್ತಿಸಲಾಗಿತ್ತು. ಸರಕು ಸಾಗಣೆ ರೈಲುಗಳು ಸಂಚರಿಸುತ್ತಿದ್ದವು. ಆದರೆ, ಪ್ಯಾಸೆಂಜರ್‌ ರೈಲು ಸ್ಥಗಿತಗೊಳಿಸಲಾಗಿತ್ತು. ಸ್ಥಳೀಯರ ಸತತ ಹೋರಾಟದ ಫಲವಾಗಿ 24 ವರ್ಷಗಳ ಬಳಿಕ ಪ್ರಯಾಣಿಕರ ರೈಲು ಓಡಾಟಕ್ಕೆ ಕಾಲ ಕೂಡಿ ಬಂದಿದೆ.

ಹಲವು ವರ್ಷಗಳ ಹಿಂದೆಯೇ ಹರಿಹರ–ಕೊಟ್ಟೂರು ನಡುವೆ ಪ್ರಯಾಣಿಕರ ರೈಲು ಸಂಚರಿಸುತ್ತಿದೆ. ಈ ರೈಲು ಈಗ ಹೊಸಪೇಟೆ ವರೆಗೆ ವಿಸ್ತರಣೆಯಾಗಲಿದ್ದು, ಜನ ಅರಸೀಕರೆ, ಶಿವಮೊಗ್ಗ, ಹಾಸನ, ಮೈಸೂರು, ಮಂಗಳೂರು ಸೇರಿದಂತೆ ಇತರೆ ನಗರಗಳಿಗೆ ಹೋಗಿ ಬರಲು ಅನುಕೂಲವಾಗಲಿದೆ. ಅಷ್ಟೇ ಅಲ್ಲ, ಸಮಯ ಹಾಗೂ ಹಣ ಕೂಡ ಉಳಿತಾಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT