ಮಂಗಳವಾರ, ಆಗಸ್ಟ್ 20, 2019
27 °C
ದುಷ್ಕರ್ಮಿಗಳಿಂದ ವ್ಯಾಸರಾಯರ ವೃಂದಾವನ ಧ್ವಂಸ

ಬ್ರಾಹ್ಮಣ ಸಂಘ, ವಿ.ಎಚ್‌.ಪಿ. ಖಂಡನೆ

Published:
Updated:
Prajavani

ಹೊಸಪೇಟೆ: ಗಂಗಾವತಿ ತಾಲ್ಲೂಕಿನ ಆನೆಗುಂದಿಯಲ್ಲಿ ವ್ಯಾಸರಾಯರ ವೃಂದಾವನವನ್ನು ಧ್ವಂಸಗೊಳಿಸಿರುವ ದುಷ್ಕೃತ್ಯವನ್ನು ತಾಲ್ಲೂಕು ಬ್ರಾಹ್ಮಣ ಸಂಘ, ವಿಶ್ವ ಹಿಂದೂ ಪರಿಷತ್‌ ಹಾಗೂ ಹಿಂದೂ ಜಾಗರಣ ವೇದಿಕೆ ಕಮಲಾಪುರ ಘಟಕ ತೀವ್ರವಾಗಿ ಖಂಡಿಸಿವೆ.

‘ವ್ಯಾಸರಾಯರ ವೃಂದಾವನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಬಂದು ಧ್ವಂಸಗೊಳಿಸಿರುವ ಕಾರಣ ಸಮಾಜದವರಿಗೆ ಬಹಳ ನೋವಾಗಿದೆ. ಇದು ಯಾರೊ ಒಬ್ಬರು ಮಾಡಿರುವಂತಹದ್ದಲ್ಲ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದ್ದು, ದೊಡ್ಡ ಗುಂಪಿನ ಕೈವಾಡವಿರುವ ಸಾಧ್ಯತೆ ಇದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ದುಷ್ಕೃತ್ಯ ಎಸಗಿರುವವರನ್ನು ಬಂಧಿಸಬೇಕು’ ಎಂದು ಸಂಘದ ಅಧ್ಯಕ್ಷ ದಿವಾಕರ್‌ ಆಗ್ರಹಿಸಿದ್ದಾರೆ.

‘ಹಂಪಿ ಪರಿಸರದಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಅದನ್ನು ತಪ್ಪಿಸಲು ಆ ಇಡೀ ಪರಿಸರದಲ್ಲಿ ಸೂಕ್ತ ಬಂದೋಬಸ್ತ್‌ ಕಲ್ಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಕಂಪ್ಲಿ ರಸ್ತೆಯ ಕೋಟೆ ಗೋಡೆಯನ್ನು ಇತ್ತೀಚೆಗೆ ಧ್ವಂಸಗೊಳಿಸಲಾಗಿತ್ತು. ಅದಾದ ಬಳಿಕ ಈ ಘಟನೆ ನಡೆದಿರುವುದು ದುರದೃಷ್ಟಕರ. ಸ್ಥಳೀಯ ಪೊಲೀಸರಾಗಲಿ, ಪುರಾತತ್ವ ಇಲಾಖೆಯವರಾಗಲಿ ಸ್ಮಾರಕಗಳಿಗೆ ಸೂಕ್ತ ಭದ್ರತೆ ಒದಗಿಸದ ಕಾರಣ ಈ ರೀತಿಯ ಘಟನೆಗಳು ನಡೆಯುತ್ತಿವೆ. ಮುಂದಾದರೂ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು’ ಎಂದು ವಿಶ್ವ ಹಿಂದೂ ಪರಿಷತ್‌, ಹಿಂದೂ ಜಾಗರಣ ವೇದಿಕೆ, ರಾಜ್ಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ನಾಯಕ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ನರಸಿಂಹಮೂರ್ತಿ, ಮೌನೇಶ್‌ ಬಡಿಗೇರ್‌, ನವೀನ್‌ ಕುಮಾರ್‌, ರಂಗಸ್ವಾಮಿ, ವೀರಭದ್ರ, ಸಿದ್ದಪ್ಪ ಪೂಜಾರ್‌, ಶ್ರೀರಾಮ್‌, ಗೋವಿಂದ, ಸುನೀತಾ ಮನವಿಗೆ ಸಹಿ ಹಾಕಿದ್ದಾರೆ. 

 

Post Comments (+)