ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ಅಗತ್ಯ’

Last Updated 21 ಫೆಬ್ರುವರಿ 2021, 7:54 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ‘ಎಲ್ಲ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯ ಸಿಗುವುದು ಬಹಳ ಅಗತ್ಯ’ ಎಂದು ಇಲ್ಲಿನ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ಆನಂದ ಟಿ. ಚವಾಣ್‌ ತಿಳಿಸಿದರು.

ಇಲ್ಲಿನ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಜೀವನದಲ್ಲಿ ಪ್ರತಿಯೊಬ್ಬರಿಗೆ ಶಿಕ್ಷಣ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಇನ್ನಿತರ ಎಲ್ಲಾ ಕ್ಷೇತ್ರಗಳಲ್ಲಿ ಸಮಾಜಿಕ ನ್ಯಾಯದ ಪ್ರಕಾರ ಅವಕಾಶಗಳು ಸಿಗಬೇಕು. ಆಗ ವಿಶ್ವ ಸಾಮಾಜಿಕ ನ್ಯಾಯ ದಿನಕ್ಕೆ ಅರ್ಥ ಬರುತ್ತದೆ’ ಎಂದರು.

‘ಕಣ್ಣಿಗೆ ಕಾಣದ ಸೂಕ್ಷ್ಮ ವೈರಾಣು ಜನರ ಜೀವನ ಬದಲಿಸಿದೆ. ಅನಿವಾರ್ಯ ಸಂದರ್ಭದಲ್ಲಿ ನಾವು ಮುತುವರ್ಜಿ ವಹಿಸಿ ಸುರಕ್ಷತಾ ವಿಧಾನ ಅನುಸರಿಸುವುದು ಸೂಕ್ತ. ಎಲ್ಲರ ಹಿತಕ್ಕಾಗಿ ನಿಯಮ ಪಾಲಿಸುವುದು ಅಗತ್ಯ. ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು. ಅಂತರದಿಂದ ವ್ಯವಹರಿಸಬೇಕು. ಸ್ಯಾನಿಟೈಸರ್‌ ಬಳಸಬೇಕು. ಇದು ವೈಯಕ್ತಿಕ ಹಾಗೂ ಸಾಮೂಹಿಕವಾಗಿ ಉತ್ತಮ’ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದ ಹಿರಿಯ ವಕೀಲ ಎ. ಕರುಣಾನಿಧಿ, ‘ಸಮಾಜದಲ್ಲಿ ಇರುವ ಜನರಿಗೆ ಜಾತಿ, ವರ್ಗ, ಲಿಂಗಭೇದಗಳಿಂದ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ವಿಶ್ವ ಸಮಾಜಿಕ ನ್ಯಾಯ ದಿನ ಆಚರಿಸಲಾಗುತ್ತಿದೆ. ಜನರಿಗೆ ಶಾಂತಿಯುತ ಮತ್ತು ಸುಭದ್ರ ಜೀವನ ನಡೆಯಬೇಕು ಎಂದರೆ ಸಮಾಜದ ರಚನೆಯನ್ನು ಬದಲಾವಣೆ ಮಾಡಿದರೆ ಮಾತ್ರ ಸಾಧ್ಯ’ ಎಂದು ಹೇಳಿದರು.

‘ಸಮಾಜದಲ್ಲಿ ಎಲ್ಲರೂ ದುಡಿಯುವ ಕೆಲಸ ಮಾಡುತ್ತಿದ್ದಾರೆ. ನಮ್ಮ ದುಡಿಮೆಯಿಂದ ಸಾಮಾಜಿಕ ಉತ್ಪಾದನೆ ನಡೆಯುತ್ತದೆ. ಆದರೆ, ಅದು ಸಾಮಾಜಿಕವಾಗಿ ಜನರಿಗೆ ದೊರೆಯುತ್ತಿಲ್ಲ. ಬಡವರು ಮತ್ತು ಮಧ್ಯಮ ವರ್ಗಕ್ಕೆ ಜೀವನ ಮಾಡಲು ಸಾಧ್ಯವೇ’ ಎಂದು ಕೇಳಿದರು.

ಪ್ರಾಂಶುಪಾಲ ಬಿ.ಜಿ ಕನಕೇಶಮೂರ್ತಿ, ‘ಸಮಾಜದಲ್ಲಿ ಜನರು ಯಾವುದೇ ಜಾತಿ, ಭೇದ, ವರ್ಗ, ಪಂಗಡ ಮಾಡದೇ ನಾವೆಲ್ಲರೂ ಒಂದೇ ಎನ್ನುವ ಭಾವನೆ ಇರಬೇಕು’ ಎಂದು ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಧೀಶ ಆನಂದ ಎಸ್. ಕರಿಯಮ್ಮನವರ್, ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಧೀಶೆ ತೃಪ್ತಿ ಧರಣಿ, ಜಿ. ಶಶಿಕಲಾ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಕಾಲೇಜಿನ ಪ್ರಾಧ್ಯಾಪಕರಾದ ಎಂ.ಕೆ ಗದಗೇಶ್, ಕೆ.ಎನ್. ಬಸವರಾಜ್, ಎ. ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT