ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಸಣ್ಣಯ್ಯ ಹಸ್ತಪ್ರತಿ ಕ್ಷೇತ್ರದ ಭೀಷ್ಮ’

ಹಿರಿಯ ವಿದ್ವಾಂಸ ಬಿ.ಎಸ್‌. ಸಣ್ಣಯ್ಯನವರ ನುಡಿನಮನ
Last Updated 13 ಮೇ 2021, 15:43 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಬುಧವಾರ ನಿಧನರಾದ ಹಿರಿಯ ವಿದ್ವಾಂಸ ಪ್ರೊ. ಬಿ.ಎಸ್. ಸಣ್ಣಯ್ಯ (93) ಅವರ ನುಡಿನಮನ ಕಾರ್ಯಕ್ರಮವು ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದಿಂದ ಗುರುವಾರ ಆನ್‌ಲೈನ್‌ನಲ್ಲಿ ಆಯೋಜಿಸಲಾಗಿತ್ತು.

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಗ್ರಂಥಸಂಪಾದನ ವಿಭಾಗದಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಸಣ್ಣಯ್ಯನವರು ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ತಾಡೋಲೆ. ಕೋರಿ ಕಾಗದಗಳಂತಹ ಹಸ್ತಪ್ರತಿಗಳ ಒಡಲಿನಿಂದ 70ಕ್ಕೂ ಹೆಚ್ಚು ಗ್ರಂಥಗಳನ್ನು ಶೋಧಿಸಿ ಪರಿಷ್ಕರಿಸಿ ಪ್ರಕಟಿಸಿದ್ದಾರೆ ಎಂದು ಅವರ ಸೇವೆ ಸ್ಮರಿಸಿಕೊಳ್ಳಲಾಯಿತು.

ಹಿರಿಯ ಪ್ರಾಧ್ಯಾಪಕ ಕೆ.ರವೀಂದ್ರನಾಥ, ‘ಬಿ.ಎಸ್.ಸಣ್ಣಯ್ಯನವರು ಕುವೆಂಪು, ದೇ.ಜವರೇಗೌಡ ಡಿ.ಎಲ್.ನರಸಿಂಹಾಚಾರ್ ಅವರ ಒಡನಾಡಿಯಾಗಿದ್ದರು. ಅಪರೂಪದ ವಿದ್ವಾಂಸರು. ಅಧಿಕಾರ-ಪ್ರಶಸ್ತಿ-ಗೌರವಗಳಿಂದ ದೂರವಿದ್ದ ಸಣ್ಣಯ್ಯನವರು ಶ್ರಮ-ಶ್ರದ್ಧೆಯನ್ನು ಬಯಸುವಂತಹ ಹಸ್ತಪ್ರತಿ ಕ್ಷೇತ್ರದಲ್ಲಿ ಸದ್ದು ಗದ್ದಲವಿಲ್ಲದೇ ಕೆಲಸ ಮಾಡಿದವರು. 93 ವರ್ಷಗಳ ಕಾಲ ತುಂಬು ಜೀವನ ನಡೆಸಿದ ಸಣ್ಣಯ್ಯನವರು ಸರಳ ವ್ಯಕ್ತಿಯಾಗಿದ್ದರು’ ಎಂದರು.

ಪ್ರಾಧ್ಯಾಪಕ ವೀರೇಶ ಬಡಿಗೇರ, ‘ಹಸ್ತಪ್ರತಿ ಕ್ಷೇತ್ರದಲ್ಲಿ ಸಣ್ಣಯ್ಯನವರು ಭೀಷ್ಮನಂತೆ ಇದ್ದವರು. ಅಷ್ಟೊಂದು ಕೆಲಸ ಈ ಕ್ಷೇತ್ರದಲ್ಲಿ ಅವರು ಮಾಡಿದ್ದಾರೆ. ಗತಸಾಹಿತ್ಯ ಮತ್ತು ಸಾಹಿತ್ಯದ ಪುನರುತ್ಥಾನ ಬಹುಮುಖ್ಯ ಎಂಬ ಸಂಗತಿಯನ್ನು ಅವರು ಆಗಾಗ ಹೇಳುತ್ತಿದ್ದರು. ಹಸ್ತಪ್ರತಿ ಸಂಗ್ರಹ-ಸಂರಕ್ಷಣೆಯಲ್ಲಿ ನಿರಂತರವಾಗಿ ದುಡಿದವರು ಎಂಬುದಕ್ಕೆ ಅವರ ಗ್ರಂಥಗಳೇ ನಮ್ಮ ಮುಂದಿವೆ. ಹಸ್ತಪ್ರತಿಶಾಸ್ತ್ರದ ಪರಿಚಯ, ಗ್ರಂಥ ಸಂರಕ್ಷಣೆ, ಕೇಂದ್ರ ಹಸ್ತಪ್ರತಿ ಭಂಡಾರ ಮೊದಲಾದ ಗ್ರಂಥಗಳನ್ನು ರಚನೆ ಮಾಡಿದವರು. ರಾಜ್ಯ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಹೋಗಿ ತುಂಬ ಶ್ರಮಪಟ್ಟು ಕನ್ನಡ ಹಸ್ತಪ್ರತಿಗಳನ್ನು ಸಂಗ್ರಹ ಮಾಡಿದವರು ಸಣ್ಣಯ್ಯನವರು ಎಂಬುದು ಬಹುಮುಖ್ಯ’ ಎಂದು ಹೇಳಿದರು.

ವಿಭಾಗದ ಮುಖ್ಯಸ್ಥ ಎಫ್.ಟಿ.ಹಳ್ಳಿಕೇರಿ, ‘ನಾಗವರ್ಮನ ವರ್ಧಮಾನ ಪುರಾಣ ಕೃತಿಯನ್ನು ಶೋಧ ಮಾಡಿ ಸಾಹಿತ್ಯ ಲೋಕಕ್ಕೆ ನೀಡಿರುವುದು ಅವರ ಜೀವಮಾನದ ಸಾಧನೆಗಳಲ್ಲಿ ಬಹುಮುಖ್ಯವಾಗಿದೆ. ಈ ಬಗೆಗಿನ ಅನೇಕ ಸಂಶೋಧನ ಲೇಖನಗಳು ವಿವಿಧೆಡೆ ಹಂಚಿಹೋಗಿವೆ. ಅವುಗಳನ್ನು ಸಂಪುಟಗಳ ರೂಪದಲ್ಲಿ ಪ್ರಕಟಿಸುವ ಅಗತ್ಯವಿದೆ’ ಎಂದರು.

ಕುಲಪತಿ ಸ.ಚಿ.ರಮೇಶ, ‘ಕನ್ನಡದ ಹಿರಿಯ ವಿದ್ವಾಂಸ ಸಣ್ಣಯ್ಯನವರ ಸಾಹಿತ್ಯ ಸಾಧನೆ ಅಪೂರ್ವವಾದುದು. ಎಪ್ಪತ್ತಕ್ಕೂ ಹೆಚ್ಚು ಗ್ರಂಥಗಳನ್ನು ಬರೆದ ಸಣ್ಣಯ್ಯನವರು ಸಾಹಿತ್ಯ ಲೋಕದಲ್ಲಿ ಅಜರಾಮರಾಗಿದ್ದಾರೆ. ಅವರ ನಿಧನದಿಂದ ಸಾಹಿತ್ಯ ಲೋಕ ಬಡವಾಗಿದೆ. ಹಸ್ತಪ್ರತಿಶಾಸ್ತ್ರ ವಿಭಾಗವು ನುಡಿನಮನದ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿರುವುದು ಉತ್ತಮ ಕಾರ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT