ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1,220 ಕೋಟಿ ಆಸ್ತಿ ತೆರಿಗೆ ಸಂಗ್ರಹ

ಗೊಂದಲ ನಿವಾರಣೆ: ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳ ಸಮಜಾಯಿಷಿ
Last Updated 9 ಜೂನ್ 2017, 20:25 IST
ಅಕ್ಷರ ಗಾತ್ರ

ಬೆಂಗಳೂರು:  ‘ಬಿಬಿಎಂಪಿಯು ಆಸ್ತಿ ತೆರಿಗೆ ಪಾವತಿಸುವ ನಾಗರಿಕರಿಗೆ ಅನು ಕೂಲ ಕಲ್ಪಿಸಲು ಶೇ 5 ರಿಯಾಯಿತಿ ಯನ್ನು ಇದೇ 15ರ ವರೆಗೆ ವಿಸ್ತರಿಸಿದ್ದು, ಈ ಅವಕಾಶವನ್ನು ನಾಗರಿಕರು ಬಳಸಿಕೊಳ್ಳಬೇಕು’ ಎಂದು ಪಾಲಿಕೆಯ ಜಂಟಿ ಆಯುಕ್ತ (ಕಂದಾಯ ವಿಭಾಗ) ವೆಂಕಟಾಚಲಪತಿ ತಿಳಿಸಿದ್ದಾರೆ.

‘ಪಾಲಿಕೆಯ ತಂತ್ರಾಂಶದಲ್ಲಿ ಉಂಟಾಗಿದ್ದ ತೊಂದರೆಗಳನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದೆ. ಸಹ ಕಂದಾಯ ಅಧಿಕಾರಿಗಳಿಗೆ ಪ್ರತ್ಯೇಕ ಲಾಗಿನ್ ಐಡಿ ನೀಡಲಾಗಿದೆ. ಈ ಅಧಿಕಾರಿಗಳು ಯಾವುದೇ ತಿದ್ದುಪಡಿಗಳನ್ನು ಮಾಡಿ ಕಂದಾಯ ವಸೂಲು ಮಾಡಲು ಅನುಕೂಲ ಕಲ್ಪಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಪಾಲಿಕೆಯು ಈ ಸಾಲಿನಲ್ಲಿ ₹1,220  ಕೋಟಿ ಆಸ್ತಿ ತೆರಿಗೆ ಸಂಗ್ರಹಿ ಸಿದೆ. ನಗರದ ತೆರಿಗೆದಾರರು ಈ ಹಿಂದೆ ತಪ್ಪು ಮಾಹಿತಿ ನೀಡಿದ್ದಲ್ಲಿ ಮಾತ್ರ, ತೆರಿಗೆ ಮೊತ್ತ ಏರುಪೇರು ಆಗುವುದು ಸಹಜ. ಅಂತಹ ಪ್ರಕರಣಗಳನ್ನೂ ಸಹ ಕಂದಾಯ ಅಧಿಕಾರಿಗಳು ಪರಿಶೀಲಿಸಿ ತೆರಿಗೆ ವಸೂಲಿಗೆ ಕ್ರಮ ವಹಿಸಲು ಪ್ರತ್ಯೇಕ ವಾಗಿ ಲಾಗಿನ್‌ ಐಡಿ ನೀಡಲಾಗಿದೆ. ನಿಖರವಾದ ಮೊತ್ತವನ್ನು ತೆರಿಗೆದಾರರು ಪಾವತಿಸಲು ಅನುಕೂಲ ವಾಗುವಂತೆ ತಂತ್ರಾಂಶವನ್ನು ಸರಿಪಡಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಉಚಿತ ನೀರು ಕಡ್ಡಾಯ: ಆದೇಶ
ಬೆಂಗಳೂರು:
‘ಜಿಲ್ಲಾ ಗ್ರಾಹಕ ನ್ಯಾಯಾ ಲಯದ ನಿರ್ದೇಶನದ ಪ್ರಕಾರ ನಗರದ ಎಲ್ಲಾ ಮಲ್ಟಿಪ್ಲೆಕ್ಸ್, ರೆಸ್ಟೋರೆಂಟ್, ಹೋಟೆಲ್ ಮತ್ತು ಉಪಾಹಾರ ಮಂದಿರಗಳಲ್ಲಿ ಗ್ರಾಹಕರಿಗೆ ಉಚಿತವಾಗಿ ಶುದ್ಧ ಕುಡಿ ಯುವ ನೀರು ನೀಡಬೇಕು’ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಅವರು ಸೂಚಿಸಿದ್ದಾರೆ.

ಈ ಜಾಗಗಳಲ್ಲಿ ಉಚಿತವಾಗಿ ಕುಡಿಯುವ ನೀರು ನೀಡಬೇಕು ಎಂದು ನ್ಯಾಯಾಲಯ 2017ರ ಏಪ್ರಿಲ್‌ 6ರಂದು ಆದೇಶಿಸಿತ್ತು. ನಗರದ ಸುಧಾ ಕುತ್ವಾ ಎಂಬುವರು ಕೆಂಟುಕಿ ಫ್ರೈಡ್‌ ಚಿಕನ್‌ (ಕೆಎಫ್‌ಸಿ) ರೆಸ್ಟೋರೆಂಟ್‌ನ ಯಶವಂತಪುರ ಕೇಂದ್ರದ ವಿರುದ್ಧ ಹೂಡಿದ್ದ ವ್ಯಾಜ್ಯವನ್ನು ಇತ್ಯರ್ಥಗೊಳಿಸಿದ್ದ ನ್ಯಾಯಾಲಯ, ಗ್ರಾಹಕರಿಗೆ ನೀರು ದೊರಕಿಸಿ ಕೊಡುವ ವ್ಯವಸ್ಥೆ ಮಾಡಬೇಕು ಎಂದು ಬಿಬಿ ಎಂಪಿಗೆ ತಾಕೀತು ಮಾಡಿತ್ತು.

ಆದೇಶ ಪಾಲನೆ ಮಾಡಿರುವ ಬಗ್ಗೆ 60 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸೂಚಿಸಿತ್ತು. ಸುಧಾ ಅವರ ದೂರಿಗೆ ಸರಿಯಾಗಿ ಸ್ಪಂದಿಸದ ಬಿಬಿಎಂಪಿಗೆ ನ್ಯಾಯಾ ಲಯ ₹5,000 ದಂಡ ವಿಧಿಸಿತ್ತು. ಪ್ರಮುಖ ಸ್ಥಳಗಳಲ್ಲಿ ನಾಮಫಲಕಗಳನ್ನು ಸ್ಪಷ್ಟ ವಾಗಿ ಗೋಚರಿಸುವ ಹಾಗೆ ಅಳ ವಡಿಸ ಬೇಕು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ವಾಹನ ಖರೀದಿ ಅವ್ಯವಹಾರ: ದೂರು
ಬೆಂಗಳೂರು:
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಘನತ್ಯಾಜ್ಯ ನಿರ್ವಹಣೆ ವಾಹನಗಳ ಖರೀದಿಯಲ್ಲಿ ಅವ್ಯವ ಹಾರ ನಡೆದಿದೆ’ ಎಂದು ಆರೋಪಿಸಿರುವ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಲೋಕಾಯುಕ್ತಕ್ಕೆ ಶುಕ್ರವಾರ ದೂರು ನೀಡಿದ್ದಾರೆ.

‘ಕಸ ತುಂಬಿದ ಕಂಟೈನರ್‌ಗಳನ್ನು ಸಾಗಿಸಲು 2016ರಲ್ಲಿ 25 ವಾಹನಗಳನ್ನು ಖರೀದಿಸಲಾಗಿದೆ. ಒಂದು ವಾಹನದ ಬೆಲೆ ₹ 21.60 ಲಕ್ಷ. ಆದರೆ, ಟಿಪಿಎಸ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿ ಟೆಡ್‌ನಿಂದ ₹ 35 ಲಕ್ಷ ನೀಡಿ ಖರೀದಿ ಸಲಾಗಿದೆ. ಇದರಿಂದ ಬಿಬಿ ಎಂಪಿಗೆ ಒಟ್ಟು ₹ 3.35 ಕೋಟಿ ನಷ್ಟ ವಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

2016–17ನೇ ಸಾಲಿನಲ್ಲಿ ಕಸಗುಡಿಸುವ ಯಂತ್ರ ಒಳಗೊಂಡ 9 ವಾಹನಗಳನ್ನು ಇದೇ ಕಂಪೆನಿಯಿಂದ ಖರೀದಿಸಲಾಗಿದೆ. ಪ್ರತಿ ವಾಹನಕ್ಕೆ ₹ 45 ಲಕ್ಷದಂತೆ ಹೆಚ್ಚುವರಿಯಾಗಿ ಪಾವತಿಸಲಾಗಿದೆ’ ಎಂದು ದೂರಿದ್ದಾರೆ. ಅಲ್ಲದೇ ರಾಜಕಾಲುವೆ ಸ್ವಚ್ಛಗೊಳಿಸುವ ಯಂತ್ರ ಖರೀದಿಗೆ ಮತ್ತೆ ಅದೇ ಕಂಪೆನಿಗೆ ₹ 3 ಕೋಟಿ ಪಾವತಿಸಲಾಗಿದೆ.

ಸರ್ಕಾರದ ಹಣ ನಷ್ಟವಾಗಲು ಬಿಬಿಎಂಪಿ ಜಂಟಿ ಆಯುಕ್ತ ಸರ್ಫ್ರಾಜ್‌ ಖಾನ್, ಕಾರ್ಯಪಾಲಕ ಎಂಜಿನಿಯರ್‌ ಹೇಮಲತಾ ಮತ್ತು ಎಂ. ಲೋಕೇಶ್‌ ಕಾರಣರಾಗಿದ್ದಾರೆ. ಈ ವ್ಯವಹಾರ ದಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದ್ದು, ತನಿಖೆ ನಡೆಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT