ಶನಿವಾರ, ಮೇ 15, 2021
26 °C

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ: 12,845 ಅರ್ಜಿ ಸ್ಥಳದಲ್ಲೇ ಇತ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಂದಾಯ ಇಲಾಖೆ ಪ್ರತಿ ತಿಂಗಳ ಮೂರನೇ ಶನಿವಾರ ಆರಂಭಿಸಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ‌ ಕಡೆ’ ಕಾರ್ಯಕ್ರಮದಲ್ಲಿ ಈವರೆಗೆ 30 ಜಿಲ್ಲೆಗಳಲ್ಲಿ 25,285 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ, 12,845 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಗಿದೆ.

ಇಲಾಖೆಯ ಮಾಹಿತಿ ಪ್ರಕಾರ, ಬೆಳಗಾವಿ ಜಿಲ್ಲೆಯಲ್ಲಿ ಸ್ವೀಕರಿಸಿದ ಎಲ್ಲ 1,075 ಅರ್ಜಿಗಳನ್ನು ಅಧಿಕಾರಿಗಳು ಸ್ಥಳದಲ್ಲೇ ಇತ್ಯರ್ಥಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು 826 ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಉಳಿದಿದೆ. ಹಾಸನದಲ್ಲಿ 808, ಬಳ್ಳಾರಿ 746, ತುಮಕೂರು 751, ವಿಜಯಪುರ 717, ಕಲಬುರ್ಗಿ 587, ಬೆಂಗಳೂರು ಗ್ರಾಮಾಂತರ 526, ಗದಗ 485, ಚಿಕ್ಕಬಳ್ಳಾಪುರ 444, ರಾಯಚೂರು 482 ಅರ್ಜಿಗಳು ಇತ್ಯರ್ಥವಾಗದೆ ಉಳಿದಿವೆ.

ಫೆಬ್ರವರಿ ಮೂರನೇ ಶನಿವಾರ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ‌ ಕಡೆ’ ಮೊದಲ ಕಾರ್ಯಕ್ರಮ ನಡೆದಿತ್ತು. ಮಾರ್ಚ್‌ ಮೂರನೇ ವಾರದಲ್ಲಿಯೂ ನಡೆದಿದೆ. ಬಳಿಕ ಕೋವಿಡ್
ಹೆಚ್ಚಿದ ಕಾರಣ ಈ ಕಾರ್ಯಕ್ರಮಕ್ಕೆ ತಡೆ ಬಿದ್ದಿದೆ.

ಹಳ್ಳಿಗಳ ಜನರು ಸಣ್ಣಪುಟ್ಟ ಸಮಸ್ಯೆಗಳಿಗೂ ಜಿಲ್ಲಾಧಿಕಾರಿ, ತಹಶೀಲ್ದಾರ್‌ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಇಲಾಖೆ ಈ ಕಾರ್ಯಕ್ರಮ ರೂಪಿಸಿದೆ.

ಪಿಂಚಣಿ, ಆಶ್ರಯ ಯೋಜನೆ, ಸ್ಮಶಾನ, ಪೌತಿ ಖಾತೆ, ಪಹಣಿ ತಿದ್ದುಪಡಿ, ಭೂ ಒತ್ತುವರಿ ತೆರವು, ಮತದಾರರ ಪಟ್ಟಿ ಪರಿಷ್ಕರಣೆ, ಬರ, ಪ್ರವಾಹದ ಸಂತ್ರಸ್ತರಿಗೆ ಪರಿಹಾರ ನೀಡುವುದು, ಅರ್ಹ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌, ಪೋಡಿ ಪ್ರಕರಣ ಇತ್ಯರ್ಥದ ಬಗ್ಗೆ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.

‘ಇತ್ಯರ್ಥವಾಗದ ಅರ್ಜಿಗಳಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ್ದವೇ ಹೆಚ್ಚಿನವು. ಹಲವು ಅರ್ಜಿಗಳನ್ನು ಇತ್ಯರ್ಥಪಡಿಸಲು ಸಂಬಂಧಿಸಿದ ವಿಭಾಗಗಳಿಗೆ ಕಳುಹಿಸಿಕೊಡಲಾಗಿದೆ. ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು