ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ಸ್ಕೈವಾಕ್‌ ನಿರ್ಮಾಣ ಗುತ್ತಿಗೆ ಪಡೆದಿದ್ದ ಐಎಂಎ

ಪಾಲಿಕೆ ಸದಸ್ಯ ಸಂಪತ್‌ರಾಜ್‌ ಅಳಿಯನ ಕಂಪನಿ ಜೊತೆಗೂಡಿ ನಿರ್ಮಾಣ l ದೂರು ನೀಡುವ ಬದಲು ವಕಾಲತ್ತು ವಹಿಸಿದ್ದ ಹೂಡಿಕೆದಾರರು
Last Updated 12 ಜೂನ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು:ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಐಎಂಎ ಜ್ಯುವೆಲ್ಸ್‌ ಮಾಲೀಕತ್ವದ ಐಎಂಎ ಸಮೂಹ ಕಂಪನಿ ನಗರದಲ್ಲಿ 14 ಸ್ಕೈವಾಕ್‌ಗಳ ನಿರ್ಮಾಣಕ್ಕೆ ಗುತ್ತಿಗೆ ಪಡೆದಿದ್ದು, ಅದರಲ್ಲಿ ಎರಡರ ನಿರ್ಮಾಣ ಪೂರ್ಣಗೊಂಡಿದೆ.

ಪಾಲಿಕೆಯ ಹಾಲಿ ಸದಸ್ಯರೂ ಆಗಿರುವ ಮಾಜಿ ಮೇಯರ್‌ ಸಂಪತ್‌ರಾಜ್‌ ಅವರ ಬಾಮೈದನಿಗೆಸೇರಿದ ಅಡೊನೈ ಶೆಲ್ಟರ್ಸ್‌ ಪ್ರೈ ಲಿಮಿಟೆಡ್‌ ಸಹಭಾಗಿತ್ವದಲ್ಲಿ ಐಎಂಎ ಇವುಗಳನ್ನು ನಿರ್ಮಿಸಿದ್ದು, ಇನ್ನೂ 14 ಸ್ಕೈವಾಕ್‌ಗಳ ನಿರ್ಮಾಣಕ್ಕೆ ಬಿಡ್‌ ಸಲ್ಲಿಸಿತ್ತು.

ಐಎಂಎ ಸಮೂಹ ಕಂಪನಿಯ ವೆಬ್‌ಸೈಟ್‌ ಪರಿಶೀಲಿಸಿದರೆ, ‘ಬಸ್‌ ನಿಲ್ದಾಣ, ಪಾರ್ಕಿಂಗ್‌ ಸೌಲಭ್ಯಗಳ ವ್ಯವಸ್ಥೆ ಹಾಗೂ ಸ್ಕೈವಾಕ್‌ಗಳ ನಿರ್ಮಾಣ ನಮ್ಮ ಪ್ರಮುಖ ಯೋಜನೆಗಳು. ಈ ಎಲ್ಲ ಯೋಜನೆಗಳನ್ನು ಅಡೊನೈ ಶೆಲ್ಟರ್‌ ಕಂಪನಿ ಸಹಭಾಗಿತ್ವದಲ್ಲಿ ನಾವು ಕೈಗೆತ್ತಿಕೊಂಡಿದ್ದೇವೆ’ ಎಂಬ ಬರಹ ಕಾಣುತ್ತದೆ.

ಬಿಬಿಎಂಪಿ ದಾಖಲೆಗಳನ್ನು ಪರಿಶೀಲಿಸಿದರೆ, ಅಡೊನೈ ಕಂಪನಿಗೆ ನಗರದಲ್ಲಿ 14 ಸ್ಕೈವಾಕ್‌ ನಿರ್ಮಿಸಲು ಗುತ್ತಿಗೆ ನೀಡಲಾಗಿದೆ. ಈ ಪೈಕಿ, ನಾಗರಬಾವಿ ಹೊರ ರಿಂಗ್‌ ರಸ್ತೆ ಮತ್ತು ಸಂಪಂಗಿರಾಮನಗರ ರಸ್ತೆ ಬಳಿಯಿರುವ ರಾಜಾರಾಂ ಮೋಹನ್‌ ರಾಯ್‌ ರಸ್ತೆ ಬಳಿ ಸ್ಕೈವಾಕ್‌ ನಿರ್ಮಿಸಿದೆ. ಇದೇ ಕಂಪನಿ ಎಚ್‌ಎಸ್‌ಆರ್‌ ಲೇಔಟ್‌ ಹಾಗೂ ಕೆ.ಆರ್. ಪುರಂ ಬಳಿ ಸ್ಕೈವಾಕ್‌ ನಿರ್ಮಿಸಲು ಆರಂಭಿಸಿತ್ತು. ಆದರೆ, ಅಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿದ್ದ ಕಾರಣ ಸದ್ಯ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

14 ಸ್ಕೈವಾಕ್‌ಗಳ ನಿರ್ಮಾಣ ಕುರಿತಂತೆ ಕರೆದಿದ್ದ ಟೆಂಡರ್‌ನಲ್ಲಿ ಅಡೊನೈ ಶೆಲ್ಟರ್ಸ್‌ ಕಂಪನಿ ಭಾಗವಹಿಸಿರುವುದು ಬಿಬಿಎಂಪಿ ದಾಖಲೆಗಳಿಂದ ತಿಳಿದು ಬರುತ್ತದೆ.

‘ಐಎಂಎ ಕಂಪನಿ ಜೊತೆ ಸೇರಿ ಈ ಸ್ಕೈವಾಕ್‌ಗಳನ್ನು ನಿರ್ಮಿಸುವುದಾಗಿ ಅಡೊನೈ ಕಂಪನಿ ತನ್ನ ದಾಖಲೆಗಳಲ್ಲಿ ಉಲ್ಲೇಖಿಸಿದೆ. ಆದರೆ, ಐಎಂಎದೊಂದಿಗೆ ಈ ಕಂಪನಿ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿದ್ದರ ಬಗ್ಗೆ ನಮಗೆ ತಿಳಿದಿಲ್ಲ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಬಿಬಿಎಂಪಿ ವಿಶೇಷ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ. ಶ್ರೀನಿವಾಸ್‌ ಹೇಳುತ್ತಾರೆ.

‘ಅಡೊನೈ ಕಂಪನಿ ಸಂಪತ್‌ ರಾಜ್‌ ಅವರಿಗೇ ಸೇರಿದ್ದು. ಅವರ ಅವಧಿಯಲ್ಲಿಯೇ ಈ ಕಂಪನಿಗೆ ಸ್ಕೈವಾಕ್‌ ನಿರ್ಮಾಣಕ್ಕೆ ಟೆಂಡರ್‌ ಸಿಕ್ಕಿದೆ’ ಎಂದು ಕೆಲವು ಕಾರ್ಪೊರೇಟರ್‌ಗಳು ಹೇಳುತ್ತಾರೆ.

ಕೆಲವು ಜಾಹೀರಾತುದಾರರೂ ಇದನ್ನು ದೃಢೀಕರಿಸುತ್ತಾರೆ. ‘ಐಎಂಎ ಮತ್ತು ಅಡೊನೈ ಕಂಪನಿ ಜಂಟಿಯಾಗಿ ನಿರ್ಮಿಸುತ್ತಿರುವ ಸ್ಕೈವಾಕ್‌ಗಳ ಮೇಲೆ ಜಾಹೀರಾತು ನೀಡಲು ಕೆಲವು ಜಾಹೀರಾತುದಾರರಿಗೆ ಸಂಪತ್‌ರಾಜ್‌ ಆಹ್ವಾನ ನೀಡಿದ್ದರು. ಐಎಂಎ ಕೇಂದ್ರ ಕಚೇರಿಯಲ್ಲಿಯೇ ಈ ಸಭೆ ನಡೆದಿತ್ತು’ ಎಂದು ಅವರು ಹೇಳುತ್ತಾರೆ.

ಮುಂದಿನ 30 ವರ್ಷಗಳಲ್ಲಿ ನಗರದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸ್ಕೈವಾಕ್‌ಗಳನ್ನು ನಿರ್ಮಿಸಲು ಬಿಬಿಎಂಪಿಯು ಅಡೊನೈ ಕಂಪನಿಗೆ ಗುತ್ತಿಗೆ ನೀಡಿದೆ. ಬಿಬಿಎಂಪಿಯ ಪ್ರಕಾರ, ಒಂದು ಸ್ಕೈವಾಕ್‌ ನಿರ್ಮಾಣ ವೆಚ್ಚ ₹2 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT