ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ಎಕರೆ ಒತುವರಿ ತೆರವು; 34.50 ಕೋಟಿ ಮೌಲ್ಯದ ಜಮೀನು ಮರು ಸ್ವಾಧೀನ

ಜಿಲ್ಲಾಡಳಿತದಿಂದ ಏಕಕಾಲದಲ್ಲಿ ನಾಲ್ಕು ತಾಲ್ಲೂಕುಗಳಲ್ಲಿ ಕಾರ್ಯಾಚರಣೆ
Last Updated 6 ಮಾರ್ಚ್ 2021, 21:06 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನುಏಕಕಾಲದಲ್ಲಿ ನಡೆಸಿರುವ ಜಿಲ್ಲಾಡಳಿತದ ಅಧಿಕಾರಿಗಳು ಶನಿವಾರ ಒಟ್ಟು 18 ಎಕರೆಗಳಷ್ಟು ಸರ್ಕಾರಿ ಜಮೀನನ್ನು ಮತ್ತೆ ಸ್ವಾಧೀನಕ್ಕೆ ಪಡೆದಿದ್ದಾರೆ. ಈ ಜಮೀನುಗಳ ಒಟ್ಟು ಮೌಲ್ಯ ₹ 34.50 ಕೋಟಿ ಎಂದು ಅಂದಾಜಿಸಲಾಗಿದೆ.

ಜೆ.ಮಂಜುನಾಥ್‌ ಅವರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಮೊದಲ ಒತ್ತುವರಿ ತೆರವು ಕಾರ್ಯಾಚರಣೆ ಇದು. ಕಂದಾಯ ಇಲಾಖೆ ಅಧಿಕಾರಿಗಳು ಶನಿವಾರ ಮುಂಜಾನೆಯೇ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿ.ಎಂ.ಟಿ.ಎಫ್) ಹಾಗೂ ಪೋಲೀಸ್ ಅಧಿಕಾರಿಗಳ ನೆರವಿನಿಂದ ತೆರವು ಕಾರ್ಯಾಚರಣೆ ಆರಂಭಿಸಿದರು.

ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಚನ್ನಸಂದ್ರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಸೇರಿದ 10 ಸಾವಿರ ಅಡಿಗಳಷ್ಟು ಜಾಗವನ್ನು ಅಧಿಕಾರಿಗಳು ವಶಕ್ಕೆ ಪಡೆದರು. ಕೆಂಗೇರಿ ಹೋಬಳಿಯ ಅಗರ ಗ್ರಾಮದ ಸರ್ವೆ ನಂಬರ್ 31ರಲ್ಲಿದ್ದ 14 ಎಕರೆ 34 ಗುಂಟೆ ಸರ್ಕಾರಿ ಗೋಮಾಳದಲ್ಲಿ 1 ಎಕರೆ ಒತ್ತುವರಿಯಾಗಿದ್ದು, ಇದನ್ನೂ ತೆರವುಗೊಳಿಸಿದರು. ಇದೇ ಗ್ರಾಮದ ಸರ್ವೆ ನಂ. 73 ರಲ್ಲಿ ಕಬಳಿಕೆಯಾಗಿದ್ದ 2 ಎಕರೆಯನ್ನು ಸ್ವಾಧೀನಕ್ಕೆ ಪಡೆದರು. ತಾಲ್ಲೂಕಿನಲ್ಲಿ ಒತ್ತುವರಿ ತೆರವುಗೊಂಡ ಸ್ವತ್ತುಗಳ ಒಟ್ಟು ಮೌಲ್ಯ ₹ 4 ಕೋಟಿ ಎಂದು ಅಂದಾಜಿಸಲಾಗಿದೆ.

ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಕುದುರೆಗೆರೆ ಗ್ರಾಮದಲ್ಲಿ ಸರ್ವೆ ನಂಬರ್ 100 ರಲ್ಲಿ ಒತ್ತುವರಿಯಾಗಿದ್ದ 30 ಗುಂಟೆ ಜಮೀನಿನನ್ನು ಅಧಿಕಾರಿಗಳು ಮತ್ತೆ ವಶಕ್ಕೆ ಪಡೆದರು. ಇದೇ ಗ್ರಾಮದ ಸರ್ವೆ ನಂಬರ್‌ 81 ರಲ್ಲಿ 2 ಎಕರೆ 30 ಗುಂಟೆ ಸರ್ಕಾರಿ ಗುಂಡುತೋಪನ್ನು ಜಿಲ್ಲಾಧಿಕಾರಿ ಮಂಜುನಾಥ್‌ ಸಮ್ಮುಖದಲ್ಲಿ ಸ್ವಾಧೀನಪಡಿಸಿಕೊಳ್ಳಲಾಯಿತು. ಈ ಗ್ರಾಮದಲ್ಲಿ ಒತ್ತುವರಿಯಾಗಿದ್ದ ಜಮೀನಿನ ಮೌಲ್ಯ ₹ 6.50 ಕೋಟಿ ಎಂದು ಅಂದಾಜಿಸಲಾಗಿದೆ.

ಯಲಹಂಕ ತಾಲ್ಲೂಕಿನ ಹೆಸರಘಟ್ಟ ಹೋಬಳಿಯ ಕಾಳತಿಮ್ಮನಹಳ್ಳಿ ಗ್ರಾಮದ ಸರ್ವೆ ನಂ. 25 ರಲ್ಲಿ 4 ಎಕರೆ, ಮೈಲಪ್ಪನಹಳ್ಳಿ ಗ್ರಾಮದ ಸರ್ವೆ ನಂ. 91ರಲ್ಲಿ 2 ಎಕರೆ 11 ಗುಂಟೆ ಹಾಗೂಮಾದಪ್ಪನಹಳ್ಳಿ ಗ್ರಾಮದ ಸರ್ವೆ ನಂ. 73ರಲ್ಲಿ 20 ಗುಂಟೆ ಜಾಗಗಳು ಒತ್ತುವರಿಯಾಗಿದ್ದವು. ಇವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು. ಇವೆಲ್ಲವೂ ಕೆರೆಗೆ ಸಂಬಂಧಿಸಿದ ಜಾಗಗಳು. ತಾಲ್ಲೂಕಿನಲ್ಲಿ ಮರು ಸ್ವಾಧೀನಪಡಿಸಿಕೊಂಡ ಜಾಗಗಳ ಒಟ್ಟು ಮೌಲ್ಯ ₹ 9 ಕೋಟಿ ಎಂದು ಅಂದಾಜಿಸಲಾಗಿದೆ.

ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಬೊಮ್ಮೇನಹಳ್ಳಿ ಗ್ರಾಮದ ಸರ್ವೆ ನಂ. 96 ರಲ್ಲಿ 4 ಎಕರೆ ಗೋಮಾಳವನ್ನು, ವರ್ತೂರು ಹೋಬಳಿ ಮುಳ್ಳೂರು ಗ್ರಾಮದಲ್ಲಿ ಸರ್ವೆ ನಂ. 30 ರಲ್ಲಿ ಒತ್ತುವರಿಯಾಗಿದ್ದ 20 ಗುಂಟೆ ಗುಂಡುತೋಪು ಜಮೀನನ್ನು ಹಾಗೂನಂ. 31 ರಲ್ಲಿ ಒತ್ತುವರಿಯಾಗಿದ್ದ 2 ಗುಂಟೆ ಗುಂಡುತೋಪನ್ನು ಅಧಿಕಾರಿಗಳು ಮತ್ತೆ ಸ್ವಾಧೀನಕ್ಕೆ ಪಡೆದರು. ಇದೇ ಹೋಬಳಿಯ ಗುಂಜೂರು ಗ್ರಾಮದಲ್ಲಿ ಸರ್ವೆ ನಂ. 290ರಲ್ಲಿ ಒತ್ತುವರಿಯಾಗಿದ್ದ 7 ಗುಂಟೆ ಖರಾಬು ಜಮೀನನ್ನೂ ವಶಕ್ಕೆ ಪಡೆದರು. ತಾಲ್ಲೂಕಿನಲ್ಲಿ ಮರುವಶಪಡಿಸಿಕೊಂಡ ಭೂಮಿಯ ಒಟ್ಟು ಮೌಲ್ಯ ₹15 ಕೋಟಿ ಎಂದು ಅಂದಾಜಿಸಲಾಗಿದೆ.

‘ಅನೇಕ ಕಡೆ ಸರ್ಕಾರಿ ಜಾಗ ಒತ್ತುವರಿಯಾಗಿರುವುದು ಹಾಗೂ ಯಾವುದೇ ಮಂಜೂರಾತಿ ಪಡೆಯದೆಯೇ ಕೆಲವೆಡೆ ಅನಧಿಕೃತವಾಗಿ ಬಡಾವಣೆಗಳ ನಿರ್ಮಾಣ ಮಾಡುತ್ತಿರುವುದು ಗಮನಕ್ಕೆ ಬಂದಿತ್ತು. ಹಾಗಾಗಿ ಏಕಕಾಲದಲ್ಲಿ ನಾಲ್ಕೂ ತಾಲ್ಲೂಕುಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದೇವೆ. ಒತ್ತುವರಿದಾರರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಈ ಹಿಂದೆ ಜಿಲ್ಲಾಡಳಿತ ಒತ್ತುವರಿ ತೆರವುಗೊಳಿಸಿ ಸ್ವಾಧೀನಕ್ಕೆ ಕೆಲವು ಜಾಗಗಳು ಮತ್ತೆ ಒತ್ತುವರಿಯಾಗಿರುವ ಮಾಹಿತಿ ಲಭಿಸಿದೆ. ಒತ್ತುವರಿ ಕುರಿತು ಈ ಹಿಂದೆ ಸಿದ್ಧಪಡಿಸಿದ ವರದಿಗಳನ್ನು ಆಧರಿಸಿ ಅವುಗಳ ತೆರವಿಗೆ ಕ್ರಮ ಕೈಗೊಳ್ಳುತ್ತೇವೆ. ಭೂ ಕಬಳಿಕೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಪ್ರತಿ ಗ್ರಾಮದ ಗ್ರಾಮ ಲೆಕ್ಕಿಗ ಹಾಗೂ ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಿದ್ದೇನೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅನಿತಾಲಕ್ಷ್ಮೀ, ಉತ್ತರ ಉಪವಿಭಾಗಾಧಿಕಾರಿ ಕೆ.ರಂಗನಾಥ, ದಕ್ಷಿಣ ಉಪವಿಭಾಗಾಧಿಕಾರಿ ಎಂ.ಜಿ ಶಿವಣ್ಣ, ಉತ್ತರ ತಾಲ್ಲೂಕಿನ ತಹಶೀಲ್ದಾರ್‌ ಬಾಲಕೃಷ್ಣ, ಯಲಹಂಕ ತಹಶೀಲ್ದಾರ್‌ ನರಸಿಂಹಮೂರ್ತಿ, ದಕ್ಷಿಣ ತಾಲ್ಲೂಕಿನ ತಹಶೀಲ್ದಾರ್‌ ಶಿವಪ್ಪ ಎಚ್. ಲಮಾಣಿ, ಪೂರ್ವ ತಾಲ್ಲೂಕಿನತಹಶೀಲ್ದಾರ್‌ ಅಜಿತ್ ರೈ ಸಾರೋಕೆ ಕಾರ್ಯಾಚರಣೆಯನೇತೃತ್ವ ವಹಿಸಿದ್ದರು.

ವಿದ್ಯಾರ್ಥಿಗಳ ಪ್ರಾರ್ಥನೆಗೂ ಇರಲಿಲ್ಲ ಜಾಗ!

ಕೆಂಗೇರಿ ಹೋಬಳಿಯ ಚನ್ನಸಂದ್ರ ಗ್ರಾಮದಲ್ಲಿ 1930ರಿಂದ ಸರ್ಕಾರಿ ಶಾಲೆ ಇದೆ. ಇಲ್ಲಿ ಅಂಗನವಾಡಿಯಿಂದ ಹಿಡಿದು ಎಂಟನೇ ತರಗತಿವರೆಗೆ 500ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಶಾಲೆಗೆ ಸಂಬಂಧಿಸಿ ಜಾಗದ ಖಾತಾ ತನ್ನ ಹೆಸರಿಗೆ ಆಗಿದೆ ಎಂದು ವ್ಯಕ್ತಿಯೊಬ್ಬರು ಇತ್ತೀಚೆಗೆ ಬೇಲಿ ಹಾಕಿದ್ದರು. ಇದರಿಂದಾಗಿ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡುವುದಕ್ಕೂ ಜಾಗ ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಮಕ್ಕಳು ಇಲ್ಲಿನ ರಸ್ತೆಯಲ್ಲೇ ಪ್ರಾರ್ಥನೆ ಮಾಡಬೇಕಾಗಿತ್ತು. ಸ್ಥಳೀಯರ ವಾಹನ ಓಡಾಟಕ್ಕೂ ಸಮಸ್ಯೆ ಎದುರಾಗಿತ್ತು.

‘ಶಾಲೆಯವರು ಈ ಒತ್ತುವರಿ ಬಗ್ಗೆ ಗಮನಕ್ಕೆ ತಂದಿದ್ದರು. ಪಹಣಿ ದಾಖಲೆಗಳನ್ನು ಪರಿಶೀಲಿಸಿದಾಗ ಇದು ಸರ್ಕಾರಿ ಜಾಗ ಎಂದಿದೆ. ಹಾಗಾಗಿ ಖಾಸಗಿಯವರು ಹಾಕಿದ್ದ ಬೇಲಿಯನ್ನು ತೆರವುಗೊಳಿಸಿದ್ದೇವೆ. ಇನ್ನೊಮ್ಮೆ ಸರ್ವೇ ನಡೆಸಿ ಶಾಲೆಯ ಜಾಗವನ್ನು ಉಳಿಸಿಕೊಳ್ಳಲು ಕ್ರಮಕೈಗೊಳ್ಳುತ್ತೇವೆ’ ಎಂದು ತಹಸೀಲ್ದಾರ್‌ ಶಿವಪ್ಪ ಎಚ್‌.ಲಮಾಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT