ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ವಿಶ್ವ ಹವ್ಯಕ ಸಮ್ಮೇಳನ ಇಂದಿನಿಂದ

Last Updated 27 ಡಿಸೆಂಬರ್ 2018, 19:48 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಅರಮನೆ ಮೈದಾನದ ರಾಯಲ್‌ ಸೆನೆಟ್‌ ಸಭಾಂಗಣ ಸಜ್ಜುಗೊಂಡಿದೆ.ಡಿ.28ರಿಂದ 30ರವರೆಗೆ ಸಮ್ಮೇಳನ ನಡೆಯಲಿದ್ದು, ಮೊದಲ ದಿನ ಅಖಿಲ ಹವ್ಯಕ ಮಹಾಸಭಾದ ಅಮೃತ ಮಹೋತ್ಸವವನ್ನೂ ಏರ್ಪಡಿಸಲಾಗಿದೆ.

ರಾಜ್ಯಪಾಲ ವಜುಭಾಯಿ ವಾಲಾ ಶುಕ್ರವಾರ ಬೆಳಿಗ್ಗೆ 9ಕ್ಕೆ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ರಾಘವೇಶ್ವರ ಭಾರತಿ ಸ್ವಾಮೀಜಿ ಹಾಗೂ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಸಚಿವ ಆರ್.ವಿ.ದೇಶಪಾಂಡೆ, ಜೆಡಿಎಸ್‌ ಮುಖಂಡ ಪಿ.ಜಿ.ಆರ್.ಸಿಂಧ್ಯಾ ಪಾಲ್ಗೊಳ್ಳಲಿದ್ದಾರೆ.

ಹವ್ಯಕ ಜ್ಯೋತಿ:ಉತ್ತರ ಕನ್ನಡದ ಹೈಗುಂದದಲ್ಲಿ ಹವ್ಯಕ ಜ್ಯೋತಿಗೆ ಬುಧವಾರ ಚಾಲನೆ ನೀಡಲಾಗಿದ್ದು, ದುರ್ಗಾಂಬಿಕಾ ದೇವಿಯ ಸನ್ನಿಧಿಯಿಂದ ಜ್ಯೋತಿಯನ್ನು ಅಲಂಕೃತ ರಥದಲ್ಲಿ ತರಲಾಗುತ್ತಿದೆ. ಸಿದ್ದಾಪುರ, ಸಾಗರ, ಶಿವಮೊಗ್ಗ ಮಾರ್ಗದಿಂದ ಸಾಗಿ, ಗುರುವಾರ ಸಂಜೆ ನಗರಕ್ಕೆ ಬಂದು ತಲುಪಿದೆ. ಇದೇ ಜ್ಯೋತಿಯಿಂದ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

ನೂರು ಪುಸ್ತಕಗಳ ಲೋಕಾರ್ಪಣೆ ಏಕಕಾಲದಲ್ಲಿ ನಡೆಯಲಿದ್ದು, ಏಕಕಾಲದಲ್ಲಿ, ಏಕ ಸಂಸ್ಥೆಯಿಂದ, ಏಕ ಸ್ಥಳದಲ್ಲಿ ಅತ್ಯಧಿಕ ಸಂಖ್ಯೆಯ ಪುಸ್ತಕಗಳ ಲೋಕಾರ್ಪಣೆಯಾದ ಕಾರ್ಯಕ್ರಮವಾಗಿ ಇದು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಇಲ್ಲಿ, ಹಳ್ಳಿ ಸೊಗಡಿನ ಆಲೆಮನೆಗಳನ್ನು ಕಾಣಬಹುದು. ಜೋಡಿ ಕೋಣಗಳ ಆಲೆಗಾಣದ ಪಾರಂಪರಿಕ ಆಲೆಮನೆಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದೆ.ಯಜ್ಞ–ಯಾಗಾದಿಗಳ ನಿಯಮ, ವಿವಿಧತೆ, ಆಚರಣೆ, ಉದ್ದೇಶ ಹೀಗೆ ಹಲವು ವಿಷಯಗಳನ್ನು ತಿಳಿಸಲು 75 ವಿವಿಧ ಬಗೆಯ ಹೋಮಕುಂಡಗಳು, ಮಂಡಲಗಳ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ಹವ್ಯಕರ ಜೀವನಾಧಾರವಾದ ಅಡಿಕೆ ಕೃಷಿಯ ಸಮಗ್ರ ಪ್ರದರ್ಶನ ನಡೆಯಲಿದ್ದು, ವಿವಿಧ ಬಗೆಯ ಅಡಿಕೆ ಸಸಿಗಳು, ಕೃಷಿ ಉಪಕರಣಗಳು, ಪಾರಂಪರಿಕ ವಸ್ತುಗಳ ಪ್ರದರ್ಶನ ಇರಲಿದೆ. ಹಳ್ಳಿಸೊಗಡಿನ ಹವ್ಯಕ ಪರಂಪರೆಯ ಕಡಗೋಲು, ಕೆರೆಮಣೆ, ಕಲ್ಲಿ, ಹೆಗಡೆ, ದೋಟಿ ವಸ್ತುಗಳು ಕಾಣಲು ಸಿಗುತ್ತವೆ. ಆಹಾರ ಮೇಳದಲ್ಲಿ ಗೆಣೆಸೆಲೆ, ಬಗೆಬಗೆಯ ಅವಲಕ್ಕಿ, ಅತ್ರಾಸ, ಸುಕ್ಕಿನುಂಡೆ, ತಂಬಳಿ ಸವಿಯಲು ಸಿದ್ಧಗೊಳ್ಳುತ್ತಿವೆ.ಪಾಕೋತ್ಸವಕ್ಕಾಗಿ ನೂರಕ್ಕೂ ಅಧಿಕ ಪಾಕತಜ್ಞರು ಶ್ರಮಿಸುತ್ತಿದ್ದಾರೆ.

ಸಾಮೂಹಿಕ ಭಗವದ್ಗೀತೆ ಪಠಣ, ವಿದ್ವಾಂಸರಿಂದ ಗೋಷ್ಠಿ, ಸಾಧಕರಿಗೆ ಸನ್ಮಾನ, ಬಡಗು ಯಕ್ಷಗಾನ ಕಲಾವಿದರಿಂದ ಯಕ್ಷಗಾನ ಪ್ರದರ್ಶನ, ಯಕ್ಷಗಾನ ನೃತ್ಯೋತ್ಸವ, ಯಜ್ಞಧಾರಿಣಿ ರಾಮಕಥಾ ಪ್ರಸ್ತುತಿ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಖಂಡನಾ ನಿರ್ಣಯವನ್ನು ಹಿಂಪಡೆಯಲು ಆಗ್ರಹ

‘ಅತ್ಯಾಚಾರದಂತಹ ಗಂಭೀರ ಆರೋಪಕ್ಕೆ ಒಳಗಾದ ಕಳಂಕಿತರನ್ನು ಸನಾತನ ಧರ್ಮ ಸಂವರ್ಧಿನೀ ಸಭೆಯಿಂದ ಹೊರಗಿಡಲು ಕೈಗೊಂಡಿರುವ ನಿರ್ಣಯವನ್ನು ಅಖಿಲ ಹವ್ಯಕ ಮಹಾಸಭೆ ಖಂಡಿಸಿದೆ. ಆ ಖಂಡನಾ ನಿರ್ಣಯವನ್ನು ಹಿಂಪಡೆಯಬೇಕು’ ಎಂದು ಸಭೆಯ ಸಂಚಾಲಕರಾದ ಯಡತೊರೆ ಯೋಗನಂದೇಶ್ವರ ಸರಸ್ವತಿ ಮಠದ ಶಂಕರಭಾರತೀ ಸ್ವಾಮೀಜಿ ಒತ್ತಾಯಿಸಿದ್ದಾರೆ.

‘ಶಾಸ್ತ್ರದ ಹಾಗೂ ಶಂಕರಭಗವತ್ಪಾದರ ಉಪದೇಶದ ಹಿನ್ನೆಲೆಯಲ್ಲಿ ಸಮಾಜದ ಹಿತದೃಷ್ಟಿಯಿಂದ ಆ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಅದನ್ನು ಖಂಡಿಸಿದರೆ, ಭಗತ್ಪಾದರ ಉಪದೇಶ ಮತ್ತು ಬ್ರಹ್ಮಸೂತ್ರವನ್ನೇ ಧಿಕ್ಕರಿಸಿದಂತೆ. ಈಗಲಾದರೂ ಅಖಿಲ ಹವ್ಯಕ ಮಹಾಸಭೆಯು ಶಾಸ್ತ್ರದ ಬೆಳಕಿನಲ್ಲಿ ನಿರ್ಣಯವನ್ನು ಹಿಂಪಡೆದುಕೊಂಡು, ಸಮಾಜಕ್ಕೆ ಸರಿಯಾದ ಸಂದೇಶ ಕೊಡಬೇಕು. ಶಾಸ್ತ್ರನಿರ್ಣಯ ತಿರಸ್ಕರಿಸಿದ್ದಕ್ಕೆ ಕ್ಷಮೆ ಕೇಳುವುದು ಶ್ರೇಯಸ್ಸಿನ ದೃಷ್ಟಿಯಿಂದ ಸೂಕ್ತ’ ಎಂದು ಸ್ವಾಮೀಜಿ ಪರವಾಗಿ ಮಠದ ಮುಖ್ಯ ಆಡಳಿತ ಅಧಿಕಾರಿ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT