ಅನಿಲ ಸೋರಿಕೆಯಿಂದ ಸ್ಫೋಟ; ಜಲಮಂಡಳಿ, ಗೇಲ್ ವಿರುದ್ಧ ಎಫ್‌ಐಆರ್

ಬೆಂಗಳೂರು: ಎಚ್‌ಎಸ್‌ಆರ್ ಲೇಔಟ್‌ನ 7ನೇ ಹಂತದಲ್ಲಿ ಭಾರತೀಯ ಅನಿಲ ಪ್ರಾಧಿಕಾರದಿಂದ (ಗೇಲ್) ನೆಲದಡಿ ಅಳವಡಿಸಿದ್ದ ಪೈಪ್‌ವೊಂದು ತುಂಡರಿಸಿದ್ದು, ಅಡುಗೆ ಅನಿಲ ಸೋರಿಕೆಯಾಗಿ ಎರಡು ಮನೆಗಳಲ್ಲಿ ಗುರುವಾರ ಸ್ಫೋಟ ಸಂಭವಿಸಿದೆ.
‘ಸ್ಫೋಟದಿಂದಾಗಿ ನಿವಾಸಿಗಳಾದ ಅಂಜುಂ (40), ಮುಬಾಷೀರ್ (40) ಹಾಗೂ ಜುಬೇರ್ (26) ಎಂಬುವರು ಗಾಯಗೊಂಡಿದ್ದಾರೆ. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸ್ಫೋಟದ ರಭಸಕ್ಕೆ ಮನೆಯ ವಸ್ತುಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ತಾತ್ಕಾಲಿಕ ಚಾವಣಿ ಕಿತ್ತು ಹೋಗಿದೆ. ಕಿಟಕಿ ಗಾಜುಗಳು ಒಡೆದಿವೆ’ ಎಂದು ಪೊಲೀಸರು ಹೇಳಿದರು.
‘ನಿರ್ಲಕ್ಷ್ಯ ವಹಿಸಿದ ಆರೋಪದಡಿ ಜಲಮಂಡಳಿ ಹಾಗೂ ಗೇಲ್ ಅಧಿಕಾರಿಗಳು, ಗುತ್ತಿಗೆದಾರ ಮತ್ತು ಜೆಸಿಬಿ ಯಂತ್ರದ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ರಸ್ತೆ ಅಗೆಯುವಾಗ ಪೈಪ್‌ಗೆ ಧಕ್ಕೆ: ‘ಮನೆಗಳಿಗೆ ಕೊಳವೆ ಮೂಲಕ ನೈಸರ್ಗಿಕ ಅಡುಗೆ ಅನಿಲ (ಪಿಎನ್‌ಜಿ) ಪೂರೈಸುವುದಕ್ಕಾಗಿ ಗೇಲ್‌ನಿಂದ ನೆಲದಡಿ ಪೈಪ್ ಅಳವಡಿಸಲಾಗಿದೆ. ಪೈಪ್ ಅಳವಡಿಸಿದ ಜಾಗದಲ್ಲಿ ಕಾಮಗಾರಿ ಕೈಗೊಳ್ಳಲು ಗೇಲ್ ಅಧಿಕಾರಿಗಳ ಅನುಮತಿ ಕಡ್ಡಾಯಗೊಳಿಸಲಾಗಿದೆ. ಜಲಮಂಡಳಿ ಗುತ್ತಿಗೆದಾರ ಯಾವುದೇ ಅನುಮತಿ ಇಲ್ಲದೇ ರಸ್ತೆ ಅಗೆದಿದ್ದರಿಂದ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.
‘ಎಚ್‌ಎಸ್‌ಆರ್ ಲೇಔಟ್‌ನ 7ನೇ ಹಂತದಲ್ಲಿ ಒಳಚರಂಡಿ ದುರಸ್ತಿಗಾಗಿ ಜೆಸಿಬಿ ಯಂತ್ರದಿಂದ ನೆಲ ಅಗೆಯಲಾಗುತ್ತಿತ್ತು. ನೆಲದಡಿಯ ಅಡುಗೆ ಅನಿಲ ಪೈಪ್‌ಗೆ ಧಕ್ಕೆಯಾಗಿ ಎರಡು ತುಂಡಾಗಿತ್ತು. ಅನಿಲ ಸೋರಿಕೆಯಾಗಿ, ಒಳಚರಂಡಿ ಪೈಪ್ ಮೂಲಕ ಎರಡು ಮನೆಗಳಿಗೆ ತಲುಪಿರಬಹುದೆಂದು ಹೇಳಲಾಗುತ್ತಿದೆ.’
‘ಮನೆಯಲ್ಲಿ ಅಡುಗೆ ಅನಿಲ ಆವರಿಸಿದ್ದರಿಂದ ಏಕಾಏಕಿ ಸ್ಫೋಟ ಸಂಭವಿಸಿದೆ. ಅಡುಗೆ ಮನೆಯಲ್ಲಿದ್ದ ಮಹಿಳೆಯ ದೇಹ ಶೇ 50ರಷ್ಟು ಸುಟ್ಟಿದೆ. ಅದೇ ಮನೆಯ ಯುವಕನಿಗೆ ಗಾಯವಾಗಿದೆ. ಇನ್ನೊಬ್ಬ ಮಹಿಳೆ, ಎರಡನೇ ಮಹಡಿಯಿಂದ ಮೊದಲ ಮಹಡಿಗೆ ಬರುವಾಗ ಸ್ಫೋಟದಿಂದ ಗಾಯಗೊಂಡಿದ್ದಾರೆ’ ಎಂದು ಹೇಳಿದರು.
‘ರಸ್ತೆ ಅಗೆದಿದ್ದ ಸ್ಥಳದಿಂದ ಎರಡೂ ಮನೆಗಳು ಸ್ವಲ್ಪ ದೂರದಲ್ಲಿವೆ. ಈ ಮನೆಗಳಲ್ಲಿ ಸ್ಫೋಟ ಸಂಭವಿಸಲು ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಸ್ಫೋಟದ ನಂತರ ಅನಿಲ ಪೂರೈಕೆ ಸಂಪೂರ್ಣ ಬಂದ್ ಮಾಡಲಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಅವಶೇಷಗಳ ಮಾದರಿ ಸಂಗ್ರಹಿಸಿದರು‘ ಎಂದು ಪೊಲೀಸರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.