ಮಂಗಳವಾರ, ಆಗಸ್ಟ್ 16, 2022
29 °C

ಕೆಲಸಕ್ಕೆ ಅರ್ಜಿ; ಹೂಡಿಕೆ ಹೆಸರಿನಲ್ಲಿ ₹ 50 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಲಸ ಕೊಡಿಸುವ ಆಮಿಷವೊಡ್ಡಿ ಅರ್ಜಿ ಹಾಕಿಸಿದ್ದ ವ್ಯಕ್ತಿಯೊಬ್ಬರು, ಹಣ ಹೂಡಿಕೆ ಹೆಸರಿನಲ್ಲಿ ₹ 50 ಲಕ್ಷ ಪಡೆದು ವಂಚಿಸಿದ್ದಾರೆ. ಈ ಸಂಬಂಧ ವೈಟ್‌ಫೀಲ್ಡ್ ಉಪವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಂಚನೆ ಸಂಬಂಧ ವರ್ತೂರು ನಿವಾಸಿ ಲಾಲ್ ವಾಸ್ವಾನ್ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳಾದ ಉಮೇಶ್, ನೆಹರೂ ಸಿಂಗ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ವಾಸ್ವಾನ್ ಅವರಿಗೆ ಆರೋಪಿ ನೆಹರೂ ಸಿಂಗ್ ಪರಿಚಯವಾಗಿತ್ತು. ಆನ್‌ಲೈನ್‌ ಮೂಲಕ ₹ 1,000 ಶುಲ್ಕ ಸಮೇತ ಕಂಪನಿಯೊಂದರಲ್ಲಿ ಕೆಲಸಕ್ಕೆ ಅರ್ಜಿ ಹಾಕಿಸಿದ್ದ ನೆಹರೂ ಸಿಂಗ್, ನಿರಂತರವಾಗಿ ಒಡನಾಟ ಇಟ್ಟುಕೊಂಡಿದ್ದರು. ಕೆಲಸ ಮಾಡುವ ಬದಲು ಹಣ ಹೂಡಿಕೆ ಮಾಡಿದರೆ, ಹೆಚ್ಚಿನ ಲಾಭ ಸಿಗುವುದಾಗಿ ನೆಹರೂ ಸಿಂಗ್ ಹೇಳಿದ್ದರು. ಉಮೇಶ್ ಹಾಗೂ ಇತರೆ ಆರೋಪಿಗಳನ್ನು ಪರಿಚಯ ಮಾಡಿಸಿದ್ದರು.’

‘ಹಣ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಕಂತಿನ ರೂಪದಲ್ಲಿ ಲಾಭದ ಹಣ ನೀಡುವುದಾಗಿ ಉಮೇಶ್ ಹಾಗೂ ಇತರೆ ಆರೋಪಿಗಳು ಹೇಳಿದ್ದರು. ಅವರ ಮಾತು ನಂಬಿದ್ದ ವಾಸ್ವಾನ್, ಆರೋಪಿಗಳು ಹೇಳಿದ್ದ ಬ್ಯಾಂಕ್ ಖಾತೆಗೆ ₹ 50 ಲಕ್ಷ ಜಮೆ ಮಾಡಿದ್ದರು. ಎರಡು ಬಾರಿ ಮಾತ್ರ ಆರೋಪಿಗಳು ಲಾಭದ ಹಣ ನೀಡಿದ್ದರು. ನಂತರ, ಹಣ ನೀಡದೇ  ತಲೆಮರೆಸಿಕೊಂಡಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು